Advertisement

ತಿಂಗಳ ಕೂಟದಲ್ಲಿ ಕೋಳ್ಯೂರು ಅರ್ಥ ವೈಖರಿ

06:05 PM Aug 22, 2019 | mahesh |

ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಪ್ರಸಿದ್ಧರೆಂಬುದು ಸರ್ವವೇದ್ಯ. ಪ್ರಸ್ತುತ ಅವರ ವಯಸ್ಸು ಎಂಬತ್ತೇಳು ಮೀರಿದೆ. ಇತ್ತೀಚೆಗೆ ರಂಗಪ್ರಪಂಚದ ಪ್ರದರ್ಶನಕ್ಕೆ ವಿರಳವೆನಿಸಿದವರು. ವಯೋಸಹಜವಾಗಿ ಅಲ್ಪಪ್ರಮಾಣದ ಮರೆವಿನ ಭಾದೆ ಆವರಿಸಿದೆ. ಹೊರತಾಗಿ ಇಂದಿಗೂ ಜೀವನೋತ್ಸಾಹವನ್ನು ಉಳಿಸಿಕೊಂಡವರು. ಅಂದಿನ ತಿಂಗಳ ತಾಳಮದ್ದಳೆ “ಶ್ರೀರಾಮ ಪಟ್ಟಾಭಿಷೇಕ’ ಕಥಾ ಭಾಗದ ಕೈಕೇಯಿ ಪಾತ್ರ ಅವರಿಂದ ಸೊಗಸಾಗಿ ಚಿತ್ರಿತವಾಯಿತು.

Advertisement

ಕೋಳ್ಯೂರರ ಅರ್ಥಗಾರಿಕೆಯಲ್ಲಿ ಪ್ರಸಂಗಕ್ಕೆ ಒಗ್ಗದ‌, ಅಗ್ಗದ ಸಂಗತಿಗಳ ಸುಳಿವಿರದು. ಕಾವ್ಯಸ್ವಾರಸ್ಯ ಹೊಂದಿದ ಪದಪ್ರಯೋಗ. ಸರಳವಾಗಿ ಸಾಗುವ ವಾಕ್ಯಸರ‌ಣಿ. ಸಾಂದರ್ಭಿಕ ರಸಸಿದ್ಧಾಂತ ಪ್ರತಿಪಾದನೆ. ಆಡುವ ನುಡಿಯ ಆಯ ಕೆಡದಂತೆ ಕಾಯ್ದುಕೊಳ್ಳುವ ಕಡು ಕಾಳಜಿ. ಭಾಗವತರು ಹೇಳುವ ಹಾಡಿಗೆ ಧ್ವನಿ ಕೂಡಿಸುವುದು. ಹೂಂಕಾರ, ಉದ್ಗಾರ, ನಗು, ಸಿಡುಕು ಎಲ್ಲವೂ ಅರ್ಥಪೂರ್ಣ. ತಾನೇ ಸ್ವತಃ ಪಾತ್ರವಾಗಿ, ಅದರೊಳಗೆ ಇಳಿದು ಬದುಕುವ ಭಾವಾಭಿವ್ಯಕ್ತಿಯ ಪರಿ. ಅಲ್ಲದೆ ಅದೇ ಸ್ತ್ರೀ ಸಹಜವೆನಿಸುವ ತಾರುಣ್ಯದ ಕಂಠ ಸಿರಿ. ಅದೆಲ್ಲವೂ ಅವರ ಈ ವೃದ್ಧಾಪ್ಯದಲ್ಲೂ ಸೊರಗದೆ ಸರಿಯಾಗಿದೆ.

“ನಾಳೆ ರಾಮಚಂದ್ರನಿಗೆ ಪಟ್ಟಾಭಿಷೇಕವಂತೆ…’ ವರ್ತಮಾನ ಕೇಳಿದ ತಕ್ಷಣ ಸಂತೋಷವನ್ನು ವ್ಯಕ್ತಪಡಿಸುವುದು ಕೈಕೆಯಿ ಪಾತ್ರದ ಸ್ವಭಾವ. ಮಂಥರೆಯ ತಿರುಮಂತ್ರದ ಬಳಿಕ ಆ ಭಾವನೆ ಪರಿವರ್ತನೆಗೊಳ್ಳುವುದು. ಇದು ಆ ಪ್ರಸಂಗದ ನಡೆ ಮತ್ತು ಮಹತ್ವದ ತಿರುವು. ಆ ಸನ್ನಿವೇಶಕ್ಕೆ ಅನುಗುಣವಾಗಿ ಕೋಳ್ಯೂರರ ಭಾವಪ್ರಕಟಣೆ ಮತ್ತು ಅರ್ಥ ವಿಸ್ತಾರದ ವೈಖರಿ ಅನನ್ಯವಾದುದು.

ದಶರಥ ಪ್ರಲಾಪ ಸಂದರ್ಭದಲ್ಲಿ “ಕೈತಟ್ಟಿ ಕೊರಳು ಮುಟ್ಟಿ…ನನ್ನ ಭರತನಿಗೆ ಪಟ್ಟಕಟ್ಟಿ ರಾಮನನ್ನು ಅಡವಿಗೆ ಅಟ್ಟಿ. ನಿಮ್ಮ ಸಾವಿರ ಮಾತು ಬೇಡ. ಆಗುವುದಿಲ್ಲವೆಂದು ಒಮ್ಮೆ ಹೇಳಿ ಬಿಟ್ಟು ಬಿಡಿ, ನನಗೆ ಅಷ್ಟು ಸಾಕು…’ ಕರ್ಣಕಠೊರವಾದ ನುಡಿ ಕ್ರೋಧಾವೇಶದ ಪ್ರತಿಧ್ವನಿಯಾಗಿ ಕೇಳುಗರ‌ ಮನಮುಟ್ಟಿತು. ಪ್ರಸಂಗದ ಉಪಕ್ರಮದಿಂದ ಉಪಸಂಹಾರದವರೆಗೆ ಎಲ್ಲವೂ ಅಚ್ಚುಕಟ್ಟು.

ಯಕ್ಷದೇವ ಬಳಗದ ಸಂಯೋಜಕ ದೇವಾನಂದ ಭಟ್ಟರು ಮತ್ತು ಹತ್ತಾರು ಹವ್ಯಾಸಿ ಕಲಾವಿದರು ಅಂದಿನ ಪ್ರಸಂಗದ ಹಿಮ್ಮೇಳ ಹಾಗೂ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡರು.

Advertisement

– ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ

Advertisement

Udayavani is now on Telegram. Click here to join our channel and stay updated with the latest news.

Next