Advertisement

Yakshagana; ಸಮಶ್ರುತಿಯಲ್ಲಿ ಹಾಡುವುದೇ ತೆಂಕುತಿಟ್ಟಿನ ಪರಂಪರೆ: ಪುತ್ತಿಗೆ ರಘುರಾಮ ಹೊಳ್ಳ

02:35 AM Oct 27, 2024 | Team Udayavani |

ಕಾಸರಗೋಡು ಜಿಲ್ಲೆಯ ಬೋವಿಕಾನ ಎಂಬಲ್ಲಿ ನೆಲೆಸಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸ ಹಾಗೂ ಲಕ್ಷ್ಮೀ ಅಮ್ಮನವರ 10 ಮಂದಿ ಮಕ್ಕಳಲ್ಲಿ ಕೊನೆಯವರು ಪುತ್ತಿಗೆ ರಘುರಾಮ ಹೊಳ್ಳರು.ಜೋಯಿಸರು ಕೂಡ್ಲು ಮೇಳ, ಇಚ್ಲಂಪಾಡಿ, ಧರ್ಮಸ್ಥಳದಲ್ಲಿ ಕೆಲಸ ಮಾಡಿದವರು. ರಘುರಾಮ ಹೊಳ್ಳರ ಹುಟ್ಟೂರು ಯಕ್ಷಗಾನಕ್ಕೆ ಬಹಳ ಪ್ರಾಧಾನ್ಯ ಪಡೆದಿದ್ದ ಪ್ರದೇಶ. ಮೇಲಾಗಿ ತಂದೆಯವರು ಕೂಡ ಯಕ್ಷಗಾನ ಭಾಗವತರು, ಹಾಗಾಗಿ ಬಾಲ್ಯದಿಂದಲೇ ಅವರಿಗೆ ಯಕ್ಷಗಾನ ಕಲೆಯ ಸ್ಪರ್ಶ.

Advertisement

ಯಕ್ಷಗಾನ ಬೇಡ ಎಂಬ ಒತ್ತಡ ಕುಟುಂಬ ದಿಂದ ಬಂದರೂ ಕೊನೆಗೂ ಬದುಕಿನ ಪ್ರವಾಹದ ಈಜಿನಲ್ಲಿ ಹೊಳ್ಳರು ಬಂದು ಸೇರಿದ್ದು ಯಕ್ಷಗಾನವೆಂಬ ತೀರವನ್ನೇ. ಪದವಿ ಶಿಕ್ಷಣ ಪಡೆದರೂ ಅವರು ಆಗಿದ್ದು ಭಾಗವತರೇ ಎನ್ನುವುದು ಸೋಜಿಗ.

ಬಾಲ್ಯದಲ್ಲಿ ಮನೆಯಲ್ಲಿ ಅಕ್ಕ, ಅಣ್ಣಂ ದಿರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪಾಠ ವಾಗುತ್ತಿತ್ತು. ಅಣ್ಣ ಚಂದ್ರಶೇಖರ ಹೊಳ್ಳರಿಗೆ ಭಾಗವತಿಕೆಯನ್ನೂ ವಾಸುದೇವ ಹೊಳ್ಳರಿಗೆ ಮದ್ದಳೆ ಕಲಿಸುತ್ತಿದ್ದರು. ಮವ್ವಾರು ಕಿಟ್ಟಣ್ಣ ಭಾಗವತರಿಂದ ರಘುರಾಮ ಹೊಳ್ಳರು ಅಣ್ಣನ ಜತೆಯಲ್ಲಿಯೇ ಮದ್ದಳೆಗಾರಿಕೆ ಕಲಿತರು. ಆದರೆ ಭಾಗವತಿಕೆ ಕಲಿತಿರಲಿಲ್ಲ, ಕೇವಲ ಕಿಟ್ಟಣ್ಣ ಭಾಗವತರು ಚಂದ್ರಶೇಖರ ಹೊಳ್ಳರಿಗೆ ಪಾಠ ಮಾಡುವುದನ್ನು ಕೇಳಿಕೊಂಡಿದ್ದರು ಅಷ್ಟೇ.

ಎಡನೀರು ಶಾಲೆಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾಗ ಎಡನೀರು ಮಠದ ಆಸ್ಥಾನ ವಿದ್ವಾಂಸರಾಗಿದ್ದ ಕುದ್ರೆಕೋಡ್ಲು ರಾಮಭಟ್ಟರಿಂದ ಚೆಂಡೆಯ ಜ್ಞಾನ ಸಿಕ್ಕಿತು. ಆದರೆ ಜನರೆಲ್ಲ ಭಾಗವತರ ಮಗ ಚೆಂಡೆ ಮದ್ದಳೆ ಕಲಿಯುವುದು ಯಾಕೆ? ಭಾಗವತಿಕೆಯೇ ಒಳ್ಳೆಯದು ಎಂದು ಮಾತನಾಡಿಕೊಳ್ಳುತ್ತಿದ್ದರು. ಇದರೆಲ್ಲದರ ನಡುವೆ ಕಿರಿಯ ಮಗ ಯಕ್ಷಗಾನಕ್ಕೆ ಬರುವುದೇ ಬೇಡ ಎಂಬುದು ತಂದೆ ಜೋಯಿಸರ ವಾದವಾಗಿತ್ತು. ಹಾಗಾಗಿ ರಘುರಾಮರನ್ನು ಪಿಯುಸಿಗೆ ದೂರದ ಧಾರವಾಡಕ್ಕೆ ಕಳುಹಿಸಿದರು. ಪಿಯುಸಿ ಬಳಿಕ ಪದವಿ ಶಿಕ್ಷಣ ಮಂಗಳೂರಿನಲ್ಲಿ. ಆಗ ಮತ್ತೆ ಯಕ್ಷಗಾನದ ಒಡನಾಟ ಹೊಳ್ಳರಿಗೆ.

ಹೀಗೆ ಪದವೀಧರರಾದ ಪುತ್ತಿಗೆಯವರು ಪೂರಕ ವಾತಾವರಣದಿಂದಾಗಿ ಮತ್ತೆ ಯಕ್ಷಗಾನದತ್ತ ವಾಲಿದರು. ಸಂಗೀತ ಜ್ಞಾನ ಇದ್ದ ಕಾರಣ ಅವರಿಗೆ ಭಾಗವತಿಕೆ ಸುಲಭ ವಾಯಿತು, ಚೆಂಡೆ-ಮದ್ದಳೆ ಗೊತ್ತಿದ್ದ ಕಾರಣ ತಾಳಕ್ಕೆ ತೊಂದರೆ ಇರಲಿಲ್ಲ. ಆರಂಭದಲ್ಲಿ ಹವ್ಯಾಸಿಯಾಗಿ, ಬಳಿಕ ಧರ್ಮಸ್ಥಳ ಮೇಳ, ಅನಂತರ ಕದ್ರಿ ಮೇಳ, ಮತ್ತೆ ಮೂರು ದಶಕ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ದುಡಿದು ನಿವೃತ್ತರಾಗಿರುವ “ಯಕ್ಷಭಾಗವತ ಹಂಸ’ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಪುತ್ತಿಗೆಯವರು ಪ್ರಸ್ತುತ ಸುರತ್ಕಲ್‌ ಬಳಿಯ ಕಾನ ಎಂಬಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರ ಕುಟುಂಬ ಅವರದ್ದು.

Advertisement

ತಂದೆಯವರ ವಿರೋಧವಿದ್ದರೂ ನೀವು ಭಾಗವತರಾಗಿದ್ದು ಹೇಗೆ?
ಯಕ್ಷಗಾನ ಅಷ್ಟಾಗಿ ಆದಾಯ ತಂದುಕೊಡುವುದಿಲ್ಲ ಎನ್ನುವುದು ಆಗಿನ ಕಾಲದ ನಂಬಿಕೆಯಾಗಿತ್ತು. ಸ್ವತಃ ಯಕ್ಷಗಾನದಲ್ಲಿ ಅನುಭವ ಇದ್ದ ತಂದೆಯವರು ಅದೇ ಕಾರಣಕ್ಕೇನೋ ನಾನು ಕಲಿತು ಉದ್ಯೋಗ ಹಿಡಿಯಬೇಕು ಎಂದು ಬಯಸಿದ್ದರು. ಆದರೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದ ಕಾರಣ ನನಗೆ ಸಂಗೀತ ಜ್ಞಾನ, ಚೆಂಡೆ-ಮದ್ದಳೆಯ ಅನುಭವ ಸಿಕ್ಕಿತು. ಬಳಿಕ ದೂರದ ಧಾರವಾಡಕ್ಕೆ ಪಿಯುಸಿ ಕಲಿಯಲು ಹೋದರೂ ಯಕ್ಷಗಾನವನ್ನು ಆಗೀಗ ನೋಡುತ್ತಿದ್ದೆ. ಪದವಿ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದಾಗ ಈ ಸಂಬಂಧ ಗಾಢವಾಯಿತು. ಪದವಿ ಮುಗಿಯುವ ವೇಳೆಗೆ ಹವ್ಯಾಸಿ ಭಾಗವತನಾದೆ. ಮದ್ದಳೆ ಕಲಿತ ಕಾರಣ ತಾಳಕ್ಕೆ ಸಮಸ್ಯೆ ಇರಲಿಲ್ಲ, ಶಾಸ್ತ್ರೀಯ ಸಂಗೀತ ಕಲಿತಿದ್ದ ಕಾರಣ ರಾಗಜ್ಞಾನ, ಸ್ವರ, ಶ್ರುತಿ ಜ್ಞಾನ ಇತ್ತು. ಅಭ್ಯಾಸ ಮಾಡಲು ಆಸಕ್ತಿ ಇತ್ತು. ಹಾಗಾಗಿ ಯಾರ ತರಬೇತಿ ಇಲ್ಲದೆ ನಾನು ನನ್ನದೇ ಶೈಲಿಯ ಭಾಗವತನಾದೆ.

ಯಾರೆಲ್ಲ ಹಿರಿಯರಿಂದ ನೀವು ಕಲಿತಿದ್ದೀರಿ?
ಅಗರಿ ಶ್ರೀನಿವಾಸ, ಕಡತೋಕ ಮಂಜುನಾಥ, ದಾಮೋದರ ಮಂಡೆಚ್ಚರಿಂದ ನಾನು ಬಹಳ ಕಲಿತಿದ್ದೇನೆ, ಕಡತೋಕರೊಂದಿಗೆ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡಿದ್ದೇನೆ, ಇವರೆಲ್ಲರದ್ದು ಬೇರೆ ಬೇರೆ ಶೈಲಿ, ಆದರೆ ನನಗೆ ಬೇಕಾದ್ದನ್ನು ಪಡೆದುಕೊಂಡೆ. ಬಲಿಪರಲ್ಲಿ ಬಹಳಷ್ಟು ಸಮಾಲೋಚನೆ ಮಾಡಿ ಅನುಭವ ಹಂಚಿಕೊಳ್ಳುತ್ತಿದ್ದೆ, ಕುಂಡೆಚ್ಚ ಭಾಗವತರೆಂದು ಪ್ರಸಿದ್ದರಾದ ಇರಾ ಗೋಪಾಲಕೃಷ್ಣ ಭಾಗವತರ ಪದ್ಯ ಕೇಳುತ್ತಿದ್ದೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಜತೆ ಚರ್ಚೆಯಾಗುತ್ತಿತ್ತು. ಇವರೆಲ್ಲರಿಂದ ಬಹಳಷ್ಟು ಕಲಿತುಕೊಂಡಿದ್ದೇನೆ.

ನಿಮ್ಮ ತಂದೆಯವರದ್ದು ಅವರದ್ದೇ ಆದ ಹಾಡುಗಾರಿಕೆ ಶೈಲಿ ಇತ್ತಂತೆ, ಅದು ಈಗ ಇದೆಯಾ?

ಹಿರಿಯರಾದ ಕೂಡ್ಲು ಸುಬ್ರಾಯ ಶಾನುಭಾಗರು ದೊಡ್ಡ ಬಲಿಪರು ಹಾಗೂ ನನ್ನ ತಂದೆಯವರಿಗೆ ಯಕ್ಷಗಾನ ಭಾಗವತಿಕೆ ಹೇಳಿಕೊಟ್ಟವರು, ಅವರಿಬ್ಬರೂ ಅವರವರ ಮನೋಧರ್ಮಕ್ಕೆ ಸರಿಯಾಗಿ ಕಲಿತುಕೊಂಡರು. ತಂದೆಯವರದ್ದು ಭಿನ್ನ ಭಜನ ಶೈಲಿ. ಈಗಲೂ ಹಳಬರು ಸಿಕ್ಕಿದರೆ “ನಿನ್ನ ಅಪ್ಪ ಹೀಗೆ ಹೇಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ. ಸೀತಾಪಹರಣ, ಮಾಗಧ ವಧೆ ಇತ್ಯಾದಿ ಪ್ರಸಂಗಗಳ ಅವರ ಕೆಲವು ಪದ್ಯಗಳನ್ನು ನನ್ನ ಮನೋಧರ್ಮ ಪ್ರಕಾರ ಸಂಗೀತ ಅಳವಡಿಸಿಕೊಂಡು ಹಾಡುತ್ತೇನೆ.

ಹಿಂದೆ ಯಾವ ರೀತಿಯ ಸವಾಲು ಗಳಿದ್ದವು? ಸಮಕಾಲೀನರೊಂದಿಗೆ ಪೈಪೋಟಿ ಇತ್ತಾ?
ಹಿಂದೆ ವೈಯಕ್ತಿಕ ಸವಾಲುಗಳು ಹಲವಿದ್ದವು. ಮುಖ್ಯವಾಗಿ ಆಗ ಪ್ರೇಕ್ಷಕರಿಗೆ ಬಹಳಷ್ಟು ಜ್ಞಾನವಿರುತ್ತಿತ್ತು, ಅಧ್ಯಯನ ಮಾಡಿದವರಿದ್ದರು. ಎದುರೆದುರೇ ಟೀಕೆ ಮಾಡುತ್ತಿದ್ದರು. ಈ ಪ್ರಸಂಗದಲ್ಲಿ ಈ ದೃಶ್ಯ ಬೇಡವಿತ್ತು ಎನ್ನುವುದನ್ನು ನೇರವಾಗಿ ಹೇಳುತ್ತಿದ್ದರು. ಹಾಗಾಗಿ ನಾವು ಕೂಡ ಸರಿಯಾಗಿ ಪ್ರಸಂಗ ಅಧ್ಯಯನ ಮಾಡಿಯೇ ಹೋಗುತ್ತಿದ್ದೆವು. ಇನ್ನು ಪೈಪೋಟಿಯಂತೂ ಇತ್ತು. ಕೂಡಾಟ, ಜೋಡಾಟಗಳಲ್ಲಿ ನಾವು ಸೋಲೊಪ್ಪಿಕೊಳ್ಳುತ್ತಿರಲಿಲ್ಲ.

ಈಗಿನ ಹವ್ಯಾಸಿ ಭಾಗವತರು, ನವ ಮಾಧ್ಯಮಗಳು, ಒಟ್ಟಾರೆ ಯಕ್ಷಗಾನದ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು?
ನವಮಾಧ್ಯಮಗಳ ಕಾರಣದಿಂದಾಗಿ ಈಗ ಕೆಲವರು ಕೆಲವೇ ಹಾಡಿನಲ್ಲಿ ಬಹಳ ಜನಪ್ರಿಯ ರಾಗುತ್ತಾರೆ. ಆದರೆ ಪುರಾಣ ಪ್ರಸಂಗಗಳ ಪದ್ಯಗಳನ್ನು ಹಾಡಲು ಸರಿಯಾದ ಅಭ್ಯಾಸ ಬೇಕು, ಈಗ ಯುವ ಭಾಗವತರು ಬಹಳ ಹುಷಾರಿನವರಿದ್ದಾರೆ. ಆದರೆ ಪ್ರಸಂಗದ ನಡೆ ಗೊತ್ತಿರಬೇಕು. ಯಕ್ಷಗಾನ ಬಹಳಷ್ಟು ಬದಲಾಗಿದೆ. ಹಾಗೆಂದು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಎಂದಿಗೂ ಇರಲಾರದು.

ಅಭಿಮಾನಿಗಳ ಗುಂಪು ಯಕ್ಷಗಾನದಲ್ಲಿ ಒಳ್ಳೆಯ ಬೆಳವಣಿಗೆಯೇ?
ಅಭಿಮಾನಿಗಳಿರುವುದು ತಪ್ಪಲ್ಲ, ಆದರೆ ತಮ್ಮ ಕಲಾವಿದ ಮಾತ್ರವೇ ನಿಜವಾದ ಕಲಾವಿದ, ಇತರರು ಅಲ್ಲ ಎನ್ನುವ ವಾದಗಳು, ಇನ್ನೊಬ್ಬನನ್ನು ದೂಷಿಸುವುದು ಸರಿಯಲ್ಲ.

ಕಾಲಮಿತಿ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯ?
ಕಾಲಮಿತಿಯಿಂದಾಗಿ ಯಕ್ಷಗಾನ ರಂಗದಲ್ಲಿ ಬದಲಾವಣೆಗಳಾಗಿವೆ. ಬೆಳಗ್ಗೆ ಮಾತ್ರ ಹಾಡುವಂತಹ ಮೋಹನ ರಾಗವೇ ಸೇರಿದಂತೆ ಹಲವು ರಾಗಗಳು ಈಗ ಮಧ್ಯರಾತ್ರಿಯೇ ಬರುತ್ತಿವೆ. ಆದರೆ ಅನಿವಾರ್ಯ, ಈಗಿನ ಕಾಲದಲ್ಲಿ ಪ್ರೇಕ್ಷಕರ ಗುಣ ಬದಲಾಗಿದೆ, ಹಾಗಾಗಿ ಎಲ್ಲ ಮೇಳಗಳೂ ಇಂದು ಕಾಲಮಿತಿಯತ್ತ ಸಾಗುತ್ತಿವೆ.

ವರ್ತಮಾನದ ಭಾಗವತಿಕೆ ಶೈಲಿಯ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
ನಾನು ಕೂಡ ಸಂಗೀತ ಮಿಶ್ರಣ ಮಾಡಿ ಹಾಡುತ್ತಿದ್ದ ಭಾಗವತ, ಅದು ನನ್ನ ಮನೋಧರ್ಮ. ಆದರೆ ಸಂಪ್ರದಾಯ ಮೀರದಂತೆ ಹಾಡಿದ್ದೇನೆ. ನಿಜಕ್ಕೂ ಹೇಳುವುದಾದರೆ ಯಕ್ಷಗಾನದಲ್ಲಿ ರಾಗದ ವಿಸ್ತಾರದ ಅಗತ್ಯವಿಲ್ಲ. ಹಳೇ ಕ್ರಮದಲ್ಲಿ ಹೇಳುವುದಾದರೆ ಒಂದು ರಾತ್ರಿಯಲ್ಲಿ 300 ಪದ್ಯಗಳನ್ನು ಹೇಳಬಹುದು. ಆದರೆ ಅದು ಈಗ ಅಸಾಧ್ಯ ಯಾಕೆಂದರೆ ಒಳ್ಳೆಯ ಮಾತುಗಾರರಿದ್ದಾರೆ ಅವರಿಗೆ ನ್ಯಾಯ ಸಿಗಬೇಕು. ಈಗ 100 ಪದ್ಯದಲ್ಲಿ ಯಕ್ಷಗಾನ ಮುಗಿಯುತ್ತದೆ. ರಾಗಗಳನ್ನು ಭಾವಕ್ಕೆ ಅನುಗುಣವಾಗಿ ಕೊಡಬೇಕು, ಸಾಹಿತ್ಯಕ್ಕೆ ಗಮನ ಕೊಡದೆ ರಾಗವನ್ನು ಸಾಹಿತ್ಯದಲ್ಲಿ ಬಳಸಿದರೆ ಸರಿಯಾಗದು. ಸಂಗೀತ ಎಷ್ಟು ಬೇಕೋ ಅಷ್ಟನ್ನೇ ಬಳಸಬೇಕು. ಒಂದೇ ಪದ್ಯ ಎಳೆಯುತ್ತಾ ಹೋದರೆ ಕಷ್ಟ. ಈಗ ವಿಸ್ತಾರವೇ ಜಾಸ್ತಿಯಾಗಿದೆ. ಅದು ತಪ್ಪೆನ್ನಲಾರೆ, ಅದು ಅವರವರ ಮನೋಧರ್ಮ ಎನ್ನಬಹುದು. ಆದರೆ ತೆಂಕುತಿಟ್ಟಿನಲ್ಲಿ ಸಮಶ್ರುತಿಯಲ್ಲೇ ಹಾಡಬೇಕು ಎನ್ನುವುದು ಪರಂಪರೆ.
ಅದನ್ನು ಮರೆಯಬಾರದು.

 ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next