Advertisement

ಉಡುಪಿ: ಫೆ. 11, 12: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ

12:00 AM Feb 08, 2023 | Team Udayavani |

ಉಡುಪಿ: ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಫೆ. 11 ಮತ್ತು 12ರಂದು ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯಲಿದ್ದು, ಫೆ. 11ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

Advertisement

ಮಲ್ಪೆ ಶಂಕರನಾರಾಯಣ ಸಾಮಗ ಪ್ರಧಾನ ವೇದಿಕೆ ಹಾಗೂ ಕೆರೆಮನೆ ಶಿವರಾಮ ಹೆಗಡೆ ವೇದಿಕೆ ಮತ್ತು ಅಳಿಕೆ ರಾಮಯ್ಯ ರೈ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ದಿನ ಹೂವಿನ ಕೋಲು, ದುಬಾೖ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ, ಮಕ್ಕಳಿಂದ ಬಡಗು ತಿಟ್ಟು ಯಕ್ಷಗಾನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಮಹಿಳೆಯರಿಂದ ಯಕ್ಷಗಾನದ ಜತೆಗೆ ಯಕ್ಷ ಶಿಕ್ಷಣದ ಸವಾಲು, ಯಕ್ಷಗಾನ ಕನ್ನಡದ ಅಸ್ಮಿತೆ, ತಾಳಮದ್ದಳೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ. ಎರಡನೇ ದಿನ ಯಕ್ಷಗಾನ ಮತ್ತು ಭಾರತೀಯ ಚಿಂತನೆ, ಮಹಿಳಾ ಯಕ್ಷಗಾನ ಚಿಂತನೆ, ಮೂಡಲಪಾಯದ ಸ್ವರೂಪ ರಚನೆ, ಯಕ್ಷಗಾನ ಪ್ರಸಾರ ಮತ್ತು ಪ್ರಯೋಗ, ವಿವಿಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಗೋಷ್ಠಿಗಳನ್ನು ಲೇಖಕ ರೋಹಿತ್‌ ಚಕ್ರತೀರ್ಥ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ. ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಧಕರು, ಸಾಧಕ ಸಂಸ್ಥೆಗೆ ಸಮ್ಮಾನ
“ಉದಯವಾಣಿ’ ದಿನಪತ್ರಿಕೆ ಸೇರಿದಂತೆ 15 ಸಂಸ್ಥೆಗಳು ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಹಿರಿಯ, ಕಿರಿಯ ಕಲಾವಿದರನ್ನು ಸಮ್ಮಾನಿಸಲಾಗುವುದು. ಗೋಪಾಲಕೃಷ್ಣ ಕುರುಪ್‌, ಬಲಿಪ ನಾರಾಯಣ ಭಾಗವತ, ಸುಜನಾ ಸುಳ್ಯ, ಪೇತ್ರಿ ಮಾಧವ ನಾಯ್ಕ, ಅರುವ ಕೊರಗಪ್ಪ ಶೆಟ್ಟಿ, ಕೆ.ವಿ. ರಮೇಶ್‌ ಹೀಗೆ ವಿವಿಧ ಭಾಗದ ಯಕ್ಷಗಾನ ಸಾಧಕರನ್ನು ಸಮ್ಮಾನಿಸಲಿದ್ದೇವೆ ಎಂದರು.

45 ಸಾವಿರ ಜನರ ನಿರೀಕ್ಷೆ
ಸಮ್ಮೇಳನದಲ್ಲಿ 45 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಇರಲಿದೆ ಎಂದರು.

18 ಪುಸ್ತಕ ಲೋಕಾರ್ಪಣೆ
ಸಮ್ಮೇಳನದ ಕಾರ್ಯಾಧ್ಯಕ್ಷ ಡಾ| ಜಿ.ಎಲ್‌. ಹೆಗಡೆ ಮಾತನಾಡಿ, ಸ್ಮರಣ ಸಂಚಿಕೆ ಹಾಗೂ 18 ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ. ಯಕ್ಷಗಾನ ಇನ್ನಷ್ಟು ಬೆಳೆಸಲು ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

Advertisement

ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌. ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವೈಶಿಷ್ಟ್ಯಗಳೇನು?
ಪ್ರಧಾನ ಸಂಚಾಲಕ ಪಿ. ಕಿಶನ್‌ ಹೆಗ್ಡೆ, ಸಂಚಾಲಕ ಮುರಳಿ ಕಡೇಕಾರ್‌ ಮಾತನಾಡಿ, ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನಿಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಯಕ್ಷಗಾನದ ದಿರಿಸಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ, ಹಲವು ಬಗೆಯ ಯಕ್ಷಗಾನದ ವಸ್ತು, ಪರಿಕರಗಳ ಪ್ರದರ್ಶನ – ಮಾರಾಟ ಇದರಲಿದೆ. ಲೈವ್‌ ಪ್ರಾತ್ಯಕ್ಷಿಕೆ ಹಾಗೂ ಸ್ಥಳದಲ್ಲಿಯೇ ಗೆಜ್ಜೆಕಟ್ಟುವುದು, ಬಣ್ಣಹಚ್ಚುವುದು ಸೇರಿದಂತೆ ಯಕ್ಷಗಾನ ಪರಿಕರಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಒಟ್ಟಾರೆಯಾಗಿ ಈ ಸಮ್ಮೇಳನ ಹಲವು ವೈಶಿಷ್ಟéಗಳಿಂದ ಕೂಡಿರಲಿದೆ ಎಂದರು.

ಕಲೆಯ ಕೌಶಲಾಭಿವೃದ್ಧಿಗೆ ಪೂರಕ
ಯಕ್ಷಗಾನದಲ್ಲಿ ಹಲವು ಆಯಾಮಗಳಿವೆ. ಅವೆಲ್ಲದರ ಕುರಿತು ಒಂದೆಸೂರಿನಡಿ ಚರ್ಚೆಯಾದಾಗ ಇಡೀ ಕಲೆಯ ಕೌಶಲ್ಯದ ಅಭಿವೃದ್ಧಿಗೂ ಅದು ಪೂರಕವಾಗಲಿದೆ ಮತ್ತು ಕಲೆಯನ್ನು ಬೇರೆಡೆ ಪಸರಿಸಲು ಅನುಕೂಲವಾಗಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ| ಜಿ.ಎಲ್‌. ಹೆಗಡೆ ತಿಳಿಸಿದರು.

ಉದಯವಾಣಿ ಜತೆ ಮಾತನಾಡಿದ ಅವರು, ಖಾಸಗಿಯವರು ಸಮ್ಮೇಳನ ಮಾಡುವುದಕ್ಕೂ ಸರಕಾರದಿಂದಲೇ ಯೋಜಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸರಕಾರದ ಕಾರ್ಯ ಎಂದಾಗ ಎಲ್ಲರ ಗಮನ ಸೆಳೆಯುತ್ತದೆ. ಯಕ್ಷಗಾನವನ್ನು ರಾಜ್ಯದ ಎಲ್ಲ ಜಿಲ್ಲೆಗಳೂ ಕೊಂಡೊಯ್ಯುವುದು ಮಾತ್ರವಲ್ಲ, ಅಲ್ಲಿ ತರಬೇತಿ ಇತ್ಯಾದಿ ಆಗಬೇಕು. ಇದು ಸರಕಾರದಿಂದ ಸಾಧ್ಯವಿದೆ ಎಂದರು.
ಯಕ್ಷಗಾನ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್‌ ಮೂಲಕ ಹೆಚ್ಚು ವೀಕ್ಷಣೆ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 50 ಅಧಿಕ ಸಂಸ್ಥೆಗಳಿಂದ ಯಕ್ಷಗಾನ ತರಬೇತಿ ನಡೆಯುತ್ತಿದೆ. ಈ ಕಾರ್ಯ ಎಲ್ಲೆಡೆಯಲ್ಲೂ ನಡೆಯಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next