Advertisement

ನೆರೂಲ್‌ ಶ್ರೀ ಶನಿಮಂದಿರದಲ್ಲಿ ಯಕ್ಷಗಾನ, ಸಮ್ಮಾನ

05:10 PM Jun 09, 2019 | Team Udayavani |

ನವಿಮುಂಬಯಿ: ನೆರೂಲ್‌ ಶ್ರೀ ಶನಿಮಂದಿರದಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸೇವೆಗೆ ಸೀಮಿತವಾಗಿರಬಾರದು. ನಮ್ಮ ಶ್ರೀ ಶನಿ ಮಂದಿರದಲ್ಲಿ ಧಾರ್ಮಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಶ್ರೀ ಶನಿಮಂದಿರವು ಬೆಳಗಿದೆ. ಭಕ್ತರ ಶ್ರೀ ಶನಿಮಂದಿರದ ಅಭಿವೃದ್ಧಿಯಲ್ಲಿ ಭಕ್ತರೊಂದಿಗೆ ಮಹಿಳಾ ಸದಸ್ಯರ ಕೊಡುಗೆಯೂ ಅಪಾರವಾಗಿದೆ. ಮಂದಿರದ ಅಭಿವೃದ್ದಿಗೆ ಮಹಿಳಾ ಸದಸ್ಯೆಯರು ಶ್ರಮಿಸುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಕೂಡಿ ಧಾರ್ಮಿಕತೆಯೊಂದಿಗೆ ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪಸರಿಸುವ ಕಾಯಕವನ್ನು ಮಾಡೋಣ ಎಂದು ನೆರೂಲ್‌ ಶ್ರೀ ಶನಿ ಮಂದಿರದ ಕಾರ್ಯಾಧ್ಯಕ್ಷ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿ ಸಂತೋಷ್‌ ಡಿ. ಶೆಟ್ಟಿ ನುಡಿದರು.
ಜೂ. 7ರಂದು ನೆರೂಲ್‌ ಶ್ರೀ ಶನಿ ಮಂದಿರದ ರಂಗ ಮಂಟಪದಲ್ಲಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳ ಚೇರ್ಕಾಡಿ ಅವರ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನ ಶ್ರೀರಾಮ ದರ್ಶನ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡ ಸಂದರ್ಭದಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜಕ್ಕೆ ಸೇವೆ ಸಲ್ಲಿಸುವವರನ್ನು, ಸಾಧನೆ ಮಾಡುವವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಕರ್ತವ್ಯವನ್ನು ನಮ್ಮ ಶ್ರೀ ಶನಿಮಂದಿರದಲ್ಲಿ ವಿ. ಕೆ. ಸುವರ್ಣ ಅವರ ವತುವರ್ಜಿಯಲ್ಲಿ ಪದಾಧಿಕಾರಿಗಳು, ಸದಸ್ಯರು, ತುಳು-ಕನ್ನಡಿಗರ, ದಾನಿಗಳ ಸಹಕಾರದಿಂದ ನಿಭಾಯಿಸುತ್ತಿದ್ದಾರೆ. ಶನಿಮಂದಿರದ ವತಿಯಿಂದ ಇಂದು ಗೋಪಾಲ್‌ ಶೆಟ್ಟಿ ಅವರಿಗೆ ಸಮ್ಮಾನ ಸಂದಿರುವುದು ಸಂತೋಷವಾಗಿದೆ. ಧಾರ್ಮಿಕ ಸಂಘಟಕ ಗೋಪಾಲ್‌ ಶೆಟ್ಟಿ ಅವರು ನೆರೂಲ್‌ ಶ್ರೀ ಬಾಲಾಜಿ ಮಂದಿರದಲ್ಲಿ ಮಾಡುತ್ತಿರುವ ಧಾರ್ಮಿಕ ಸೇವೆಗೆ, ಕಾರ್ಯಚಟು ವಟಿಕೆಗಳಿಗೆ ನಾವೆಲ್ಲ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಸಂತೋಷ್‌ ಡಿ. ಶೆಟ್ಟಿ ಹಾಗೂ ಅತಿಥಿ-ಗಣ್ಯರು ಶ್ರೀ ಶನಿಮಂದಿರದ ಪದಾಧಿಕಾರಿಗಳು ಸೇರಿ ನೆರೂಲ್‌ ಶ್ರೀ ಬಾಲಾಜಿ ಮಂದಿರದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಗೋಪಾಲ್‌ ವೈ. ಶೆಟ್ಟಿ ಮತ್ತು ಲತಾ ಜಿ. ಶೆಟ್ಟಿ ಅವರು ಸಮ್ಮಾನಿಸಿ ಗೌರವಿಸಿದರು.
ನೆರೂಲ್‌ ಶ್ರೀ ಶನಿಮಂದಿರದ ಪ್ರಧಾನ ಅರ್ಚಕ ಸೂರಜ್‌ ಭಟ್‌ ಅವರು ಮಾತನಾಡಿ, ಗೋಪಾಲ್‌ ವೈ. ಶೆಟ್ಟಿ ಅವರಿಗೆ ಉತ್ತಮ ರೀತಿಯಲ್ಲಿ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡುವ ಯೋಗಭಾಗ್ಯವನ್ನು ಶ್ರೀ ಶನಿದೇವರು ಅನುಗ್ರಹಿಸಲಿ, ನೆರೂಲ್‌ನ ಬಾಲಾಜಿ ಮಂದಿರದಲ್ಲಿ ಅವರು ಹಮ್ಮಿಕೊಂಡಿರುವ ಯೋಜನೆಗಳೆಲ್ಲ ಸಾಕಾರಗೊಳ್ಳಲಿ ಎಂದು ನುಡಿದು ಶುಭಹಾರೈಸಿದರು.

Advertisement

ನೆರೂಲ್‌ ಶ್ರೀ ಶನಿ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಮಾತನಾಡಿ, ಗೋಪಾಲ್‌ ವೈ. ಶೆಟ್ಟಿ ಅವರು ಓರ್ವ ಉತ್ತಮ ಧಾರ್ಮಿಕ ಸಂಘಟಕ. ಇಂದಿನ ಸಮ್ಮಾನವು ಅವರಿಗೆ ಶ್ರೀ ಶನಿದೇವರ ರಕ್ಷಾ ಕವಚವಾಗಲಿ. ಗೋಪಾಲ್‌ ಶೆಟ್ಟಿಯವರಿಗೆ ಮತ್ತಷ್ಟು ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡುವ ಶಕ್ತಿಯನ್ನು ಶನಿದೇವರು ಕರುಣಿಸಲಿ ಎಂದು ಹಾರೈಸಿದರು.
ಅಜೆಕಾರು ಶ್ರೀ ವಿಷ್ಣುಮೂರ್ತಿ ಮಂದಿರದ ಮೊಕ್ತೇಸರ ಶಿವರಾಮ ಜಿ. ಶೆಟ್ಟಿ ಅವರು ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆ. ಗೋಪಾಲ್‌ ವೈ. ಶೆಟ್ಟಿ ಅವರು ಜನಸೇವೆಯೊಂದಿಗೆ ಧಾರ್ಮಿಕ ಸೇವೆಯನ್ನು ಮಾಡುತ್ತಿದ್ದಾರೆ. ಇಂತಹ ಸೇವೆಗಳನ್ನು ಮಾಡಲು ಭಾಗ್ಯಬೇಕು. ನಾವು ನಿಷ್ಠೆಯಿಂದ ನಿಸ್ವಾರ್ಥಕವಾಗಿ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೆ ಅದು ಸಫಲತೆಯನ್ನು ಪಡೆಯುತ್ತದೆ. ಅಲ್ಲದೆ ಅಂತಹ ಸಮಾಜಪರ ಕಾರ್ಯಗಳಿಗೆ ದೇವರ ದಯೆ ಲಭಿಸುತ್ತದೆ ಎಂದರು.
ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ನೆರೂಲ್‌ ಇದರ ಕಾರ್ಯಾಧ್ಯಕ್ಷ ಅನಿಲ್‌ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಯಕ್ಷಗಾನ ಇಂದು ಗಂಡುಕಲೆಯಾಗಿ ಉಳಿದಿಲ್ಲ. ಹೆಣ್ಣು ಮಕ್ಕಳು ಮಹಿಳೆಯರು ಕೂಡ ಯಕ್ಷಗಾನದ ಮೇಲೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಇದು ಯಕ್ಷಗಾನದ ಬೆಳವಣಿಗೆಗೆ ಸಹಕಾರಿಯಾಗಿದೆ. ಧರ್ಮವನ್ನು ರಕ್ಷಿಸಿಸುವ, ಉಳಿಸುವ ಕಾರ್ಯ ಯಕ್ಷಗಾನದಿಂದ ಆಗುತ್ತಿದೆ. ಧರ್ಮಕಾರ್ಯವನ್ನು ಮಾಡುತ್ತಿರುವ ಗೋಪಾಲ್‌ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಿರುವುದು ಸಂತೋಷವಾಗಿದೆ ಎಂದು ನುಡಿದರು.
ನೆರೂಲ್‌ ಶ್ರೀ ಮಂದಿರದ ಜತೆ ಕೋಶಾಧಿಕಾರಿ ಕರುಣಾಕರ್‌ ಆಳ್ವ ಆದ್ಯಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ವಿ. ಕೆ. ಪೂಜಾರಿ, ತಾಳಮದ್ದಳೆ ಹಿರಿಯ ಅರ್ಥದಾರಿ ಕೆ. ಕೆ. ಶೆಟ್ಟಿ, ರಂಗಭೂಮಿ ಫೈನ್‌ಆರ್ಟ್ಸ್ ಇದರ ಅಧ್ಯಕ್ಷ ತಾರಾನಾಥ್‌ ಶೆಟ್ಟಿ ಪುತ್ತೂರು, ನೆರೂಲ್‌ ಶ್ರೀ ಶನಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಟ್ರಸ್ಟಿ ಎನ್‌. ಡಿ. ಶೆಣೈ, ಪ್ರಭಾಕರ ಹೆಗ್ಡೆ, ಕೃಷ್ಣ ಎಂ. ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ವಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಲಾ ಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಪ್ರೀತಿಯಿಂದ ಬಾಳುತ್ತಿದ್ದರು. ಆದರೆ ಪ್ರಸ್ತುತ ಕೂಡು ಕುಟುಂಬದ ಪದ್ಧತಿ ಮಾಯವಾಗಿ ಬಿಟ್ಟಿದೆ. ಆದರೆ ನವಿಮುಂಬಯಿ ಪರಿಸರದಲ್ಲಿ ತುಳು-ಕನ್ನಡಿಗರೆಲ್ಲ ಸೇರಿ ಪರಸ್ಪರ ಪ್ರೀತಿಯನ್ನು ಹಂಚಿ ಕೂಡು ಕುಟುಂಬದಂತೆ ಬಾಳುತ್ತಿದ್ದಾರೆ. ಇಂದು ನನಗೆ ದೊರೆತ ಸಮ್ಮಾನ ನನ್ನ ಕೂಡುಕುಟುಂಬದವರಿಂದ ದೊರೆತ ಸಮ್ಮಾನ ಎಂದು ಭಾವಿಸುತ್ತೇನೆ. ನೀವೆಲ್ಲರೂ ತೋರಿದ ಪ್ರೀತಿ ಗೌರವಕ್ಕೆ ಕೃತಜ್ಞನಾಗಿದ್ದೇನೆ. ನೆರೂಲ್‌ ಶ್ರೀ ಬಾಲಾಜಿ ಮಂದಿರದಲ್ಲಿ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆ ಯಶಸ್ವಿಯಾಗಲು ತುಳು-ಕನ್ನಡಿಗರೆಲ್ಲರು ಸಹಕರಿಸಬೇಕು
– ಗೋಪಾಲ್‌ ವೈ. ಶೆಟ್ಟಿ ,ಸಮ್ಮಾನಿತರು

Advertisement

Udayavani is now on Telegram. Click here to join our channel and stay updated with the latest news.

Next