ಕೋಟ: ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟ ಹಾಗೂ ಮೇಳದ ವತಿಯಿಂದ ಕೊಡಮಾಡುವ 20ನೇ ವರ್ಷದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ ಶುಕ್ರವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ| ಕೆ.ಎಸ್. ಕಾರಂತ ಮಾತನಾಡಿ, ಸಾಲಿಗ್ರಾಮ ಮೇಳಕ್ಕೂ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು, ಮೇಳದ ಯಶಸ್ಸಿಗೆ ಭಕ್ತರು ಸಹಕರಿಸಬೇಕು ಎಂದರು.
ಖ್ಯಾತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಅವರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ, ಯಕ್ಷಗಾನ ಕಲೆ ನನ್ನ ಪಾಲಿನ ಸರ್ವಸ್ವ. ನನ್ನ ಎಲ್ಲ ಸಾಧನೆಗೆ ಈ ಭಾಗದ ಕಲಾಪ್ರೇಕ್ಷಕರ ಸಹಕಾರ ಸಾಕಷ್ಟಿದೆ ಎಂದರು.
ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿ, ಯಾಜಿಯವರು ಯಕ್ಷರಂಗದ ಮುಮ್ಮೇಳದ ದಶಾವ ತಾರಿ. ಎಲ್ಲ ಪಾತ್ರಗಳಿಗೂ ಜೀವ ತುಂಬುವ ಸ್ಟಾರ್ ಕಲಾವಿದ. ಯಕ್ಷರಂಗದ ಅವರ ಸಾಧನೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ, ಪುರಸ್ಕಾರ ಸಿಗುವಂತಾಗಲಿ ಎಂದರು.
ದೇಗುಲದ ಮಾಜಿ ಅಧ್ಯಕ್ಷ ಜಗದೀಶ ಕಾರಂತ, ಗಣ್ಯರಾದ ಡಾ| ಬಿ. ಜಗದೀಶ್ ಶೆಟ್ಟಿ, ಸಂಸ್ಮರಣ ಸಮಿತಿಯ ಪ್ರಮುಖ ಡಾ| ಜೆ. ದಿನೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಉಪನ್ಯಾಸಕ ಕೋಟ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ಮೇಳದ ವ್ಯವಸ್ಥಾಪಕರಾದ ಪಿ. ಕಿಶನ್ ಹೆಗ್ಡೆ ವಂದಿಸಿದರು.