Advertisement

ಹವ್ಯಾಸಿ ಕಲಾವಿದರ ದುಶ್ಯಾಸನ ವಧೆ –ಗದಾಯುದ್ಧ

06:38 PM Oct 10, 2019 | mahesh |

ಶ್ರೀ ಗುರು ವಿಜಯ ವಿಠಲ ಯಕ್ಷಕಲಾ ಕೇಂದ್ರವು ಇತ್ತೀಚೆಗೆ ಹವ್ಯಾಸಿ ಕಲಾವಿದರನ್ನು ಒಗ್ಗೂಡಿಸಿ ಯಕ್ಷಗಾನ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾಯಿತು.

Advertisement

ಕರ್ಣ ಪರ್ವದಲ್ಲಿ ಬರುವ ಕೌರವ -ಪಾಂಡವರ ಯುದ್ಧದ ಒಂದು ಭಾಗವೇ ದುಶ್ಯಾಸನ ವಧೆ. ಪ್ರಸಂಗದ ಕತೃ ಗೇರುಸೊಪ್ಪೆ ಶಾಂತಪ್ಪಯ್ಯ. ಕೃಷ್ಣ ಈ ಯುದ್ಧದ ರೂವಾರಿ. ಕೃಷ್ಣ ನ ಲೋಕೋದ್ಧಾರದ ಚಿಂತನೆಯೇ ದುಶ್ಯಾಸನನ ವಧೆ.

ಹೆಣ್ಣಿನ ಮೇಲಿನ ದೌರ್ಜನ್ಯವೇ ದುಶ್ಯಾಸನ ವಧೆ ಮತ್ತು ಗದಾಯುದ್ಧಕ್ಕೆ ಕಾರಣ ಎಂಬುದು ಕಥಾನಕದ ತಾತ್ಪರ್ಯ. ಪಾಂಡವರು ಮತ್ತು ಕೌರವರ ನಡುವೆ ನಡೆದ ಪಗಡೆಯಾಟದಲ್ಲಿ ಪಾಂಡವರಿಗೆ ಸೋಲಾಗುತ್ತದೆ ಈ ಸಂದರ್ಭ ಹೆಂಡತಿಯನ್ನೇ ಪಣವಾಗಿಟ್ಟಿದ್ದ ಧರ್ಮರಾಯ. ಹೆಣ್ಣನ್ನು ಕಂಡ ದುಶ್ಯಾಸನ ಧರ್ಮವನ್ನು ಮರೆತು ತುಂಬಿದ ಸಭೆಯಲ್ಲಿ ಆಕೆಯ ವಸ್ತ್ರಾಪಹರಣ ಮಾಡುತ್ತಾನೆ. ಈ ಸಂದರ್ಭ ಕೃಷ್ಣ ಹೆಣ್ಣಿನ ಮಾನ ಕಾಪಾಡಿ ಧರ್ಮದ ಸಂದೇಶ ಸಾರುವುದು ಒಂದೆಡೆಯಾದರೆ, ಅಧರ್ಮ ನಾಶವಾಗಬೇಕೆಂದು ರುದ್ರ ಭೀಮನ ರೂಪದಲ್ಲಿ ಆತನ ವಧೆ ಮಾಡಿಸುತ್ತಾನೆ. ವಸ್ತ್ರಾಪಹರಣದ ಸಂದರ್ಭ ದ್ರೌಪದಿಗೆ ಕೊಟ್ಟ ಮಾತಿನಂತೆ ದುಶ್ಯಾಸನನ ಕರುಳನ್ನು ಬಗೆದು ಆಕೆಗೆ ಮಾಲೆ ಹಾಕುತ್ತಾನೆ. ದುಷ್ಟರಿಗೆ ದುರಂತ ಮರಣ ಎಂಬುದು ಕೂಡ ಈ ಕಥಾನಕದಿಂದ ಸ್ಪಷ್ಟವಾಗುತ್ತದೆ.

ದುಶ್ಯಾಸನನ ವಧೆಯಿಂದ ಮನನೊಂದ ಸಂಜಯ, ದುರ್ಯೋಧನನಿಗೆ ಬುದ್ಧಿಮಾತುಗಳನ್ನು ಹೇಳುತ್ತಾನೆ. ನೆತ್ತರ ಕಣಕ್ಕೆ ಕಾರಣ ತಾನೆಂದು ಅರ್ಥೈಸಿಕೊಂಡ ದುರ್ಯೋಧನನು ಯುದ್ಧ ಮಾಡುವುದಿಲ್ಲವೆಂದು ಶಪಥಗೈದು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಯಾರು ಕರೆದರೂ ದುರ್ಯೋಧನ ಸರೋವರದಿಂದ ಹೊರಬರದೇ ಇದ್ದುದನ್ನು ಕಂಡ ಭೀಮನು ತನ್ನ ಗದೆಯಿಂದ ಸರೋವರಕ್ಕೆ ಮೂರು ಬಾರಿ ಬಡಿದು ಸರೋವರವನ್ನೇ ಅಲುಗಾಡಿಸುತ್ತಾನೆ. ಈ ಸಂದರ್ಭ ಸರೋವರದಿಂದ ಹೊರಬಂದ ದುರ್ಯೋಧನ ಪಾಂಡವರೊಡನೆ ವೀರಾವೇಶದಿಂದ ಹೋರಾಡುತ್ತಾನೆ. ದ್ರೌಪದಿಯ ವಸ್ತ್ರಾಪರಣದ ಸಂದರ್ಭ ಮಾಡಿದ ಶಪಥದಂತೆ ಭೀಮನು ತನ್ನ ಗದೆಯಿಂದ ದುರ್ಯೋಧನನ ತೊಡೆ ಮುರಿಯುತ್ತಾನೆ. ಇಲ್ಲಿಗೆ ದುರ್ಯೋಧನನ ವಧೆಯಾಗುತ್ತದೆ.

ಹವ್ಯಾಸಿ ಕಲಾವಿದರಿಂದ ಪ್ರದರ್ಶನಗೊಂಡ ದುಶ್ಯಾಸನ ವಧೆ ಮತ್ತು ಗದಾಯುದ್ಧ ಎರಡೂ ಪ್ರಸಂಗಗಳಲ್ಲಿ ಮುಮ್ಮೇಳ ಕಲಾವಿದರಾಗಿ ಮುರಳಿ ತೆಂಕಬೈಲು, ದಯಾನಂದ ಕೋಡಿಕಲ್‌ ಮತ್ತು ಸುಧಾಕರ ಸಾಲ್ಯಾನ್‌ ಇವರ ಸುಶ್ರಾವ್ಯ ಕಂಠದ ಭಾಗವತಿಕೆಗೆ ಚೆಂಡೆಯಲ್ಲಿ ರೋಹಿತ್‌ ಉಚ್ಚಿಲ್‌, ಮದ್ದಳೆಯಲ್ಲಿ ಕೃಷ್ಣರಾಜ್‌ ಭಟ್‌ ನಂದಳಿಕೆ ಮತ್ತು ಶ್ರವಣ ಕುಮಾರ್‌ ಕೈಚಳಕ ಪ್ರದರ್ಶಿಸಿದರು.

Advertisement

ದುಶ್ಯಾಸನ ವಧೆ ಪ್ರಸಂಗದ ಮುಮ್ಮೇಳದಲ್ಲಿ ಭೀಮನಾಗಿ ಸಂಜೀವ ಕೋಟ್ಯಾನ್‌, ದುಶ್ಯಾಸನನಾಗಿ ನರೇಶ್‌ ರಾವ್‌, ಕೌರವನಾಗಿ ಸುರೇಶ್‌ ಬೆಳ್ಚಾಡ, ಕರ್ಣನಾಗಿ ಗುರುಪ್ರಸಾದ್‌, ಅರ್ಜುನನಾಗಿ ಕೀರ್ತಿರಾಜ್‌, ವೃಷಶೇನನಾಗಿ ಕೌಶಿಕ್‌ ಉತ್ತಮವಾದ ಪಾತ್ರ ಪ್ರದರ್ಶನ ನೀಡಿದರು. ದ್ರೌಪದಿ, ಸೃಷ್ಟಿಕೃಷ್ಣ ಮತ್ತು ಚಂಡಿಕೆಯಾಗಿ ದೀಕ್ಷಾ ಪೆರಾರ ಕಾಣಿಸಿಕೊಂಡರು. ಕೌರವಾದಿಗಳ ಪಾತ್ರದಲ್ಲಿ ಪುಟಾಣಿ ಕಲಾವಿದರಾದ ಕೌಶಿಕ್‌, ಭವಿಷ್‌, ದೀಕ್ಷಾ ಪೆರಾರ ಮತ್ತು ತನ್ಮಯಿ ಹೆಜ್ಜೆ ಹಾಕಿದರು.

ಕೌರವನಾಗಿ ಪುಷ್ಪರಾಜ್‌ ಕುಕ್ಕಾಜೆ, ಭೀಮನಾಗಿ ಚರಣ್‌ ರಾಜ್‌ ಕುಕ್ಕಾಜೆ, ಸಂಜಯನಾಗಿ ತಾರಾನಾಥ ವರ್ಕಾಡಿ, ಅಶ್ವತ್ಥಾಮನಾಗಿ ಆಜ್ಞಾ ಸೋಹಮ್‌, ಧರ್ಮರಾಯನಾಗಿ ದಯಾನಂದ ಪೂಜಾರಿ, ಅರ್ಜುನನಾಗಿ ಕೀರ್ತಿರಾಜ್‌, ನಕುಲನಾಗಿ ಗುರುಪ್ರಸಾದ್‌, ಸಹದೇವನಾಗಿ ಭವಿಷ್‌, ಬಲರಾಮನಾಗಿ ಪುರಂದರ ನಾಯ್ಕ ಪಾತ್ರಗಳನ್ನು ಸುಂದರವಾಗಿ ನಿರ್ವಹಿಸಿದರು. ಎರಡೂ ಪ್ರಸಂಗದಲ್ಲಿ ಕೃಷ್ಣನಾಗಿ ಅಮಿತ ಪೊಳಲಿ ಮತ್ತು ಎರಡೂ ಪ್ರಸಂಗಗಳ ಹಾಸ್ಯ ಪಾತ್ರದಲ್ಲಿ ದುಶ್ಯಾಸನ ವಧೆಯ ಹನುಮನಾಯಕ ಮತ್ತು ಗದಾಯುದ್ಧ ಪ್ರಸಂಗದ ಬೇಹಿನಚರನಾಗಿ ಸಂದೇಶ್‌ ಬಡಗಬೆಳ್ಳೂರು ನಕ್ಕುನಲಿಸಿದರು.

ಇಂದಿರಾ ಎನ್‌. ಕೆ. ಕೂಳೂರು

Advertisement

Udayavani is now on Telegram. Click here to join our channel and stay updated with the latest news.

Next