ಕಾಪು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೆಂದೂರು-ಕಲ್ಮಂಜೆ ಇವರ ಆಶ್ರಯದಲ್ಲಿ ಕಲಾಭಿಮಾನಿಗಳ ಪ್ರೋತ್ಸಾಹದೊಂದಿಗೆ ಸಾಹಿತಿ ಮತ್ತು ಕಲಾವಿದ ದಯಾನಂದ ಶೆಟ್ಟಿ ದೆಂದೂರು ಅವರ ದೆಂದೂರ ಪಂಜುರ್ಲಿ ಪುಸ್ತಕಾಧಾರಿತವಾಗಿದ್ದು, ಪ್ರಸಂಗಕರ್ತ – ಭಾಗವತ ಸೂಡ ಹರೀಶ್ ಶೆಟ್ಟಿ ವಿರಚಿತ ದೆಂದೂರ ಪಂಜುರ್ಲಿ ಕಾಲಮಿತಿ ಯಕ್ಷಗಾನದ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭವು ಮಣಿಪುರ ದೆಂದೂರುಕಟ್ಟೆ ಶ್ರೀ ಸಿದ್ಧಿವಿನಾಯಕ ವೇದಿಕೆಯಲ್ಲಿ ಫೆ. 26ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಅಮತ ಪ್ರಕಾಶನ ಮಾಸಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾತನಾಡಿ, ಸಾಹಿತಿ ಮತ್ತು ಕಲಾವಿದ ದಯಾನಂದ ಶೆಟ್ಟಿ ಅವರು ಸ್ವಾಭಿಮಾನಿ ಮತ್ತು ಶ್ರಮಜೀವಿಯಾಗಿದ್ದು, ಅವರ ಪುಸ್ತಕಾಧಾರಿತ ಯಕ್ಷಗಾನ ಪ್ರಸಂಗ ಗ್ರಾಮೀಣ ಪ್ರದೇಶದಲ್ಲಿ ಬಿಡುಗಡೆ ಯಾಗುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಮಾತನಾಡಿದರು.ಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ವೇ| ಮೂ| ವೇದವ್ಯಾಸ ಉಪಾಧ್ಯಾಯ ಆಶೀರ್ವಚನ ನೀಡಿದರು. ಪಡುಬೆಳ್ಳೆ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಿನರಾಜ್ ಸಿ. ಸಾಲಿಯಾನ್, ನ್ಯಾಯವಾದಿ ಕೃಷ್ಣರಾಜ ಆಚಾರ್ಯ, ಉದ್ಯಮಿ ಪ್ರವೀಣ್ ಭಂಡಾರಿ ಗುರುವಾಯನಕೆರೆ ಶುಭಾಶಂಸನೆಗೈದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಖಾರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಸಂಗಕರ್ತ ಸೂಡ ಹರೀಶ್ ಶೆಟ್ಟಿ ಹಾಗೂ ಲೇಖಕ ದೆಂದೂರು ದಯಾನಂದ ಶೆಟ್ಟಿ ಅವರನ್ನು ಸಮಿತಿ ಹಾಗೂ ಕಲಾಭಿಮಾನಿಗಳ ಪರವಾಗಿ ಸಮ್ಮಾನಿಸಲಾಯಿತು.
ಸಾಹಿತಿ ದಯಾನಂದ ಶೆಟ್ಟಿ ದೆಂದೂರು ಸ್ವಾಗತಿಸಿದರು. ಚಂದ್ರಶೇಖರ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ. ಪಂ. ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ವಂದಿಸಿದರು. ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾ ಸೂಡ ಇಲ್ಲಿಯ ಖ್ಯಾತ ಕಲಾವಿದರಿಂದ ದೆಂದೂರ ಪಂಜುರ್ಲಿ ಯಕ್ಷಗಾನದ ಪ್ರಥಮ ಪ್ರದರ್ಶನ ನಡೆಯಿತು.