Advertisement
ಸಕಲ ವಿಘ್ನಗಳನ್ನು ನಿವಾರಣೆ ಮಾಡುವವ ವಿನಾಯಕ. ನಂಬಿದವರನ್ನು ಆತ ಎಂದಿಗೂ ಕೈಬಿಡುವುದಿಲ್ಲ. ಗಣಪ ಪ್ರಥಮ ಪೂಜಿತ ದೇವರು. ಹೀಗೆ ಅನೇಕ ನಂಬಿಕೆಗಳು ವಿನಾಯಕನ ಸುತ್ತು ಇವೆ. ಇದರ ಜೊತೆಗೆ, ಇಡೀ ಜಗತ್ತಿನಲ್ಲಿ ಪೂಜೆಗೊಳ್ಳುತ್ತಿರುವ ಪ್ರಥಮ ಯಕ್ಷಗಾನ ನಾಟ್ಯ ವಿನಾಯಕ ದೇಗುಲವೂ ನಮ್ಮಲ್ಲಿದೆ ಅನ್ನೋದು ವಿಶೇಷ. ಯಕ್ಷಗಾನ, ಅದರಲ್ಲೂ ಬಡಗು ಯಕ್ಷಗಾನ ಶೈಲಿಯ ಸಂಪೂರ್ಣ ವೇಷಭೂಷಣ ಧರಿಸಿದ ನಾಟ್ಯ ಭಂಗಿಯ ವಿನಾಯಕ ದೇವರ ಆಲಯ
Related Articles
ಯಕ್ಷಗಾನಕ್ಕೂ ವಿನಾಯಕನಿಗೂ ನಂಟಿದೆ.
Advertisement
ಯಕ್ಷಗಾನದಲ್ಲಿ ಪ್ರಥಮವಾಗಿ ಚೌಕಿಮನೆಯಲ್ಲಿ ಗಣಪತಿಯನ್ನು ಪೂಜಿಸುತ್ತಾರೆ. ಪ್ರತೀ ಯಕ್ಷಗಾನವೂ ವಿನಾಯಕನಿಗೆ ಪೂಜೆ ಸಲ್ಲಿಸದೇ ಅವನ ಅಪ್ಪಣೆ ಪಡೆಯದೇ ಮುಂದರಿಯುವುದಿಲ್ಲ. ರಂಗಸ್ಥಳದ ಪ್ರದರ್ಶನ ನಡೆಯುವದಿಲ್ಲ. ಚೌಕಿಮನೆಯಲ್ಲಿ ಯಕ್ಷಗಾನದ ಗಣಪತಿ ಎಂದು ಮೂರ್ತಿಯನ್ನು ಅಥವಾ ಕಿರೀಟವನ್ನೇ ಗಣಪತಿ ಎಂಬುದಾಗಿ ತಿಳಿದು ಪೂಜಿಸುತ್ತಾರೆ. ಆದರೆ…ಶಿಲಾಮಯ ಮೂರ್ತಿಗೆ ಪೂಜೆ ಆಗುತ್ತಿರಲಿಲ್ಲ. ಆದರೆ, ಇದೀಗ ಜಗತ್ತಿನಲ್ಲೇ ಪ್ರಥಮ ಬಾರಿಗೆ ಯಕ್ಷಗಾನ ವೇಷಭೂಷಣ ಧರಿಸಿದ ನಾಟ್ಯ ಭಂಗಿಯ ವಿನಾಯಕ ದೇವರಿಗೆ ಈ ಗುಡಿ ನಿರ್ಮಾಣವಾಗಿದೆ.
ಬೆಂಗಳೂರಿನ ಶಿಲ್ಪಿ ಜಿ.ಎಲ್.ಭಟ್ಟ ಅವರು ಎರಡು ತಿಂಗಳುಗಳ ಕಾಲ ನಿರಂತರ ಶ್ರಮ ವಹಿಸಿ ನಾಲ್ಕು ಅಡಿ ಎತ್ತರದ ಮೂರ್ತಿ ಕೆತ್ತನೆ ಮಾಡಿದ್ದಾರೆ. ಆರು ಭುಜ, ಬಹುಫಲ, ಬಲಮೊರೆ, ತ್ರಿನೇತ್ರ ಮೂರ್ತಿ ಇದಾಗಿದ್ದು ವಿನಾಯಕ ಮೂರ್ತಿಯ ವಾಹನವಾದ ಮೂಷಿಕನಿಗೂ ಸಹ ಯಕ್ಷಗಾನದ ಹೊದಿಕೆ ಹೊದಿಸಿ ಕೆತ್ತಿರುವುದು ವಿಶೇಷ. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಹಾಸ್ವಾಮೀಜಿಗಳಿಂದ ಈ ದೇಗುಲ ಲೋಕಾರ್ಪಣೆಗೊಂಡಿದೆ. ವಿನಾಯಕ ಹೆಗಡೆ ಅಧ್ಯಕ್ಷರಾಗಿ ಇನ್ನೋರ್ವ ಕಲಾವಿದ ವೆಂಕಟೇಶ ಬಗ್ರಿಮಕ್ಕಿ ಕಾರ್ಯದರ್ಶಿಯಾಗಿ ಕಾರ್ಯ ಮಾಡುತ್ತಿರುವ ಈ ದೇವಾಲಯಕ್ಕೆ ಇನ್ನೂ ಆಗಬೇಕಾದ ಕೆಲಸಗಳು ಬಹಳ ಇದೆ. ಅಡಿಕೆ, ತೆಂಗು, ಬಾಳೆ ಜೊತೆ ಜೊತೆಗೆ ತಣ್ಣಗೆ ಹರಿವ ಹೊಳೆ ಹೀಗೆ ಹಸಿರು ಹೊದ್ದ ಸುಂದರ ಪರಿಸರ, ಸಹ್ಯಾದ್ರಿ ಸೊಬಗಿನ ನಡುವಿನ ಈ ದೇವಾಲಯ ಮನಸ್ಸಿಗೆ ಅತ್ಯಂತ ಮುದ ನೀಡುವಂತಿದೆ. ಯಕ್ಷಗಾನ ಕಲಾವಿದರು, ನಾಟ್ಯ ಕಲಾವಿದರು ಇಲ್ಲಿ ಬಂದು ಸೇವೆ ಸಲ್ಲಿಸಲು ಈಗಾಗಲೇ ಆರಂಭಿಸಿದ್ದಾರೆ. ನಾಟ್ಯ ವಿನಾಯಕ ದೇವರಿಗೆ ಪ್ರತೀ ಸಂಕಷ್ಟಿಗೆ ಗಣ ಹವನ, ಧೂಪಾರ್ಚನೆ, ಸಿಂಧೂರಾರ್ಚನೆಗಳೂ ನಡೆಯಲಿವೆ. ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತಿದೆ. ಈ ಅಪರೂಪದ ಯಕ್ಷಗಾನ ನಾಟ್ಯ ವಿನಾಯಕನನ್ನು ಕಾಣಲು ಹಲವಾರು ಕಡೆಗಳಿಂದ ಜನರು ಬಂದು ಸುಂದರ ಮೂರ್ತಿಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಗಾಯತ್ರೀ ರಾಘವೇಂದ್ರ