ಕೋಟ: ಬಡಗುತಿಟ್ಟಿನ ನೂತನ ಯಕ್ಷಗಾನ ಮೇಳವಾದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು-ಶಿರಿಯಾರ ಇದರ ಕ್ಷೇತ್ರ ಇತಿಹಾಸವನ್ನು ಸಾರುವ ನೂತನ ಪ್ರಸಂಗ ಮೆಕ್ಕೆಕಟ್ಟು ಕ್ಷೇತ್ರಮಹಾತ್ಮೆ ಲೋಕಾರ್ಪಣೆ ಬುಧವಾರ ಮೆಕ್ಕೆಕಟ್ಟು ಕ್ಷೇತ್ರದಲ್ಲಿ ಜರಗಿತು.
ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಪ್ರಸಂಗ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ಇಂದು ವಿದ್ಯಾರ್ಥಿಗಳಿಗೆ ಪುರಾಣ ಜ್ಞಾನ, ಪೌರಾಣಿಕ ಕಥೆ ಅರಿವನ್ನು ಪಠ್ಯಗಳು ತಿಳಿಸುತ್ತಿಲ್ಲ. ಆದರೆ ಯಕ್ಷಗಾನ ಕಲೆ ನೂರಾರು ಪೌರಾಣಿಕ ಇತಿಹಾಸವನ್ನು ಕಲಿಸಿ ಕೊಡುತ್ತಿದೆ. ಹೀಗಾಗಿ ನಮ್ಮ ಯುವ ಜನಾಂಗ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ವಹಿಸಬೇಕು. ಯಕ್ಷಗಾನ ಕಲೆ ಸಂಪ್ರದಾಯಬದ್ಧವಾಗಿ ಪ್ರದರ್ಶನ ಗೊಳ್ಳಬೇಕು.
ಮೂಲ ಚೌಕಟ್ಟಿಗೆ ಧಕ್ಕೆ ಯಾಗಬಾರದು. ಕ್ಷೇತ್ರ ಮಹಾತ್ಮೆ ಪ್ರಸಂಗ ಕ್ಷೇತ್ರದ ಇತಿಹಾಸ ಸಾರುವಲ್ಲಿ ಸಹಕಾರಿಯಾಗುತ್ತದೆ. ಮೆಕ್ಕೆಕಟ್ಟು ಮೇಳ ಯಕ್ಷಗಾನ ಕ್ಷೇತ್ರದ ಹೊಸ ಭರವಸೆಯಾಗಿದೆ. ಕ್ಷೇತ್ರ ಮಹಾತ್ಮೆ ಪ್ರಸಂಗ ಯಶಸ್ವಿಯಾಗಲಿ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷ ಕಲಾವಿದ ಬಳ್ಳೂರು ಕೃಷ್ಣ ಯಾಜಿ ಅಭಿನಂದನ ಭಾಷಣ ಮಾಡಿ, ಯಕ್ಷಗಾನ ಕಲೆ ಸರ್ವಶ್ರೇಷ್ಠವಾದದ್ದು. ಇಂದು ಕಲೆ ಶ್ರೀಮಂತಗೊಳ್ಳುತ್ತಿದೆ. ಬೇಳೂರು ವಿಷ್ಣುಮೂರ್ತಿ ನಾಯಕ್ ಅವರು ರಚಿಸಿದ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಆನುವಂಶಿಕ ಆಡಳಿತ ಮೊಕ್ತೇಸರ ಕಿಶನ್ ಹೆಗ್ಡೆ ಕೊಳ್ಳೆಬೈಲು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಲೆಕ್ಕ ಪರಿಶೋಧನ ಇಲಾಖೆಯ ಅಪರ ನಿರ್ದೇಶಕ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಎನ್. ಶಂಕರ ಪೂಜಾರಿ, ಶಿರಿಯಾರ ಮಂಜು ನಾಯ್ಕರ ಪುತ್ರ ರಮೇಶ್ಮಂಜು ಕುಂಭಾಶಿ, ಮೇಳದ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಬನ್ನಾಡಿ, ಯಜಮಾನ ರಂಜಿತ್ ಕುಮಾರ್ ಶೆಟ್ಟಿ, ದೇಗುಲದ ಆಡಳಿತ ಮಂಡಳಿ ಮಾಜಿ ಮೊಕ್ತೇಸರ ಗೋಪಾಲ ಶೆಟ್ಟಿ ಕೊಳ್ಕೆಬೈಲು ಉಪಸ್ಥಿತರಿದ್ದರು.
ಭಾಗವತ ರಾಘವೇಂದ್ರ ಮಯ್ಯ. ಸಮ್ಮಾನಿತರನ್ನು ಪರಿಚಯಿಸಿದರು. ಕಿಶನ್ ಹೆಗ್ಡೆ ಕೊಳ್ಕೆಬೈಲು ಸ್ವಾಗತಿಸಿ, ರಾಜಾರಾವ್ ಶೆಟ್ಟಿ ವಂದಿಸಿದರು. ವಿದ್ವಾನ್ ದಾಮೋದರ ಶರ್ಮ ನಿರ್ವಹಿಸಿದರು. ರಾಕೇಶ್ ನಾಯಕ್, ಚಂದ್ರ ಶೇಖರ ಹಾಡಿಮನೆ ಮತ್ತು ಕೊಳ್ಕೆಬೈಲು ಮೂರುಮನೆಯ ಪ್ರತಿನಿಧಿಗಳು ಹಾಗೂ ವಸ್ತುರೂಪದಲ್ಲಿ ಕೊಡುಗೆಗಳನ್ನು ನೀಡಿ ದವರನ್ನು ಗೌರವಿಸಲಾಯಿತು.