ಮೈಸೂರು: ಯಕ್ಷಗಾನವನ್ನು ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಲೆ ಎನ್ನದೆ, ಕರ್ನಾಟಕದ ಕಲೆ ಎಂದು ಗುರುತಿಸಿದಾಗ ಯಕ್ಷಗಾನಕ್ಕೆ ಜಗತ್ತಿನ ಮನ್ನಣೆ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದರು.
ಇನೊವೇಟಿವ್-ಮೈಸೂರು ಏರ್ಪಡಿಸಿದ್ದ ಯಕ್ಷೊತ್ಸವ; ಜಿ.ಎಸ್.ಭಟ್ಟ 75 ಅಭಿನಂದನಾ ಸಮಾರಂಭದಲ್ಲಿ ಉತ್ತರೋತ್ತರ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ಯಕ್ಷಗಾನ ಎಂದಿಗೂ ಸಾಯುವುದಿಲ್ಲ. ಕಲೆ ಯಾವತ್ತಿಗೂ ಜೀವಂತವಾಗಿರುತ್ತದೆ. ಯಕ್ಷಗಾನ ಸಾಯುತ್ತೆ ಎನ್ನುವವರು ನಿಜವಾಗಿ ಸಾಯುತ್ತಾರೆ ಎಂದರು.
ಯಕ್ಷಗಾನ ಮೇಳಗಳನ್ನು ಮಾಡಲು ಇಂದಿಗೂ 10-12 ವರ್ಷಗಳ ಕಾಲ ಬುಕ್ ಮಾಡಿ ಕಾಯಬೇಕಾದ ಸ್ಥಿತಿ ಇದೆ. ಧರ್ಮಸ್ಥಳ ಮೇಳವನ್ನೇ 7-8 ವರ್ಷಗಳ ಮುಂಚೆ ಬುಕ್ ಮಾಡಬೇಕಾಗಿದೆ. ಹೀಗಾಗಿ ಯಕ್ಷಗಾನ ಯಾವತ್ತಿಗೂ ಸಾಯಲ್ಲ. ಕಲಾವಿದರು ಯಕ್ಷಗಾನವನ್ನು ಜೀವಂತವಾಗಿರಿಸಿದ್ದಾರೆ ಎಂದು ಹೇಳಿದರು.
ಆದರೆ, ಯಕ್ಷಗಾನ ದಕ್ಷಿಣ ಹಾಗೂ ಉತ್ತರ ಕನ್ನಡದ ಕಲೆ ಎಂದು ದೂರ ಮಾಡುವವರಿದ್ದಾರೆ. ಕಥಕ್ಕಳಿಯನ್ನು ಕೇರಳದ ಕಲೆ ಎನ್ನುವಂತೆ, ಯಕ್ಷಗಾನ ವನ್ನು ಇಡೀ ರಾಜ್ಯ ನಮ್ಮದು ಎಂದಾಗ ಅದಕ್ಕೆ ಜಗತ್ತಿನ ಮಾನ್ಯತೆ ಸಿಗುತ್ತದೆ. ಅದಕ್ಕಾಗಿ ಕನ್ನಡಿಗರು ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ನಾವೆಲ್ಲಾ ಭಾಷೆ ಮತ್ತು ಸಾಹಿತ್ಯವನ್ನು ಕಲಿತದ್ದೇ ಯಕ್ಷಗಾನದಿಂದ, ಕನ್ನಡ ಕಾವ್ಯ ಕಲಿಸಿದ್ದು ಕೂಡ ಯಕ್ಷಗಾನವೇ, ಹೀಗಾಗಿ ಯಕ್ಷಗಾನದ ಜತೆಗೆ ನನಗೆ ಅನ್ಯೂನತೆ ಇದೆ ಎಂದರು.
ಯಕ್ಷಗಾನದಲ್ಲಿ ಶಬ್ದ ಸಂಪತ್ತಿದೆ. ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತದಂತೆ ಯಕ್ಷಗಾನ ಕೂಡ ಒಂದು ಪ್ರತ್ಯೇಕ ಸಂಗೀತದ ಪ್ರಾಕಾರ ಎಂದು ಹೇಳಿದರು. ರಾಜಕಾರಿಣಿ, ಅಧಿಕಾರಿ, ಸಾಹಿತಿಗಳಿಗೆ ಸಾಂಸ್ಕೃತಿಕ ವ್ಯಕ್ತಿತ್ವ ಇರಬೇಕು.ಸಾಂಸ್ಕೃತಿಕ ವ್ಯಕ್ತಿತ್ವ ಇದ್ದವರು ಮಾತ್ರ ಸಾಹಿತಿಯಾಗುತ್ತಾರೆ. ಆದರೆ, ನಮ್ಮ ಸಾಹಿತಿಗಳಿಗೆಲ್ಲ ಸಾಂಸ್ಕೃತಿಕ ವ್ಯಕ್ತಿತ್ವ ಇದೆ ಎಂದು ಹೇಳಲಾಗದು. ಅಕºರ್ ದಿ ಗ್ರೇಟ್, ಅಶೋಕ ದಿ ಗ್ರೇಟ್ ಎನ್ನುತ್ತೇವೆ. ಹಾಗೆಂದು ಹಿಟ್ಲರ್ ದಿ ಗ್ರೇಟ್ ಎನ್ನಲಾಗಲ್ಲ ಎಂದರು.
ಜಿ.ಎಸ್.ಭಟ್ಟ ಅವರು ಯಕ್ಷಗಾನದ ಸಾಂಸ್ಕೃತಿಕ ರಾಯಭಾರಿ. ಅವರ ಅಭಿನಂದನಾ ಗ್ರಂಥ ಉತ್ತರೋತ್ತರದಲ್ಲಿ ಅವರ ಬಗೆಗಿಂತ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಪರಿಚಯವೇ 500 ಪುಟಗಳಷ್ಟಿದೆ. ಹೀಗಾಗಿ ಇದು ಉತ್ತರ ಕನ್ನಡ ಜಿಲ್ಲೆಯ ಆಕರ ಗ್ರಂಥವಾಗಲಿದೆ. ರಾಜಕಾರಣಿಗಳು, ಸಾಹಿತಿಗಳು, ಸಾಂಸ್ಕೃತಿಕ ವ್ಯಕ್ತಿತ್ವದವರಿಗೆ ಸರ್ಕಾರಿ ನೌಕರರಂತೆ ನಿವೃತ್ತಿ ಎಂಬುದಿಲ್ಲ. ಅಧ್ಯಯನದಿಂದಲೇ ನಮ್ಮಲ್ಲಿ ಹೆಚ್ಚು ಉತ್ಸಾಹ ಬರುತ್ತದೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಜಿ.ಎಸ್.ಭಟ್ಟ ಮಾತನಾಡಿ, ಬಸ್‌ನಲ್ಲಿ ಸೀಟು ಬಿಟ್ಟು ಕೊಡುವುದು, ಬಸ್‌ನಲ್ಲಿ ಹುಡುಗಿಯರು ಧೈರ್ಯವಾಗಿ ಪಕ್ಕದಲ್ಲಿ ಬಂದು ಕೂತಾಗ ನನಗೂ 75 ಆಗಿದೆ ಎಂದು ಗೊತ್ತಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮುಕ್ತ ವಿವಿ ಅಕ್ಕಮಹಾದೇವಿ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ಕವಿತಾ ರೈ ಅಭಿನಂದನಾ ನುಡಿಗಳನ್ನಾಡಿದರು. ಶಾಸಕ ವಾಸು, ಸಾಹಿತಿ ಡಾ.ಮಳಲಿ ವಸಂತಕುಮಾರ್, ಯಕ್ಷಗಾನ ಮಹಾಕವಿ ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ಯು.ಜಿ.ಶೈಣೈ, ಹೇರಂಬಭಟ್ಟ, ಜಿ.ಎಸ್.ಭಟ್ಟ ಜಿ.ಎಂ.ಹೆಗಡೆ ಇತರರು ಇದ್ದರು.