ಕಾಂತಾವರದಲ್ಲಿ ಯಕ್ಷ ಗುರುಗಳಾದ ಮಹಾವೀರ ಪಾಂಡಿಯವರಿಂದ ಜನ್ಮ ತಳೆದ ಯಕ್ಷದೇಗುಲ ಕಾರ್ಕಳ ಹಾಗೂ ಮೂಡುಬಿದಿರೆ ತಾಲೂಕಿನ ಹಲವು ಕೇಂದ್ರಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದೆ. ಹೀಗೆ ತರಬೇತಿ ಪಡೆದ ಇಲ್ಲಿನ ಮಕ್ಕಳು ಪ್ರತೀ ವರ್ಷ ಶಾಲಾ ವಾರ್ಷಿಕೋತ್ಸವ ಮತ್ತು ಕಾಂತಾವರ ಜಾತ್ರೋತ್ಸವ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುತ್ತಾರೆ. ಇದೇ ಮಕ್ಕಳ ತಂಡ ತಾಲೂಕು, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಬಹುಮಾನಗಳನ್ನು ಮಾತ್ರವಲ್ಲದೆ ಕಲಾರಸಿಕರ ಮೆಚ್ಚುಗೆಯನ್ನು ಗಳಿಸಿಕೊಂಡಿವೆ.
ಕಾಂತಾವರದಲ್ಲಿ ಪ್ರತೀ ವರ್ಷ ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಊಟೋಪಚಾರದ ಜೊತೆಗೆ ಉಚಿತ ತರಬೇತಿ ಶಿಬಿರವನ್ನು ಯಕ್ಷದೇಗುಲವು ಹಮ್ಮಿಕೊಳ್ಳುತ್ತಿದ್ದು ಆಯ್ಕೆಗೊಂಡ ಎಂಬತ್ತಕ್ಕೂ ಹೆಚ್ಚಿನ ಮಕ್ಕಳು ಇಲ್ಲಿ ಹದಿನೈದು ದಿನಗಳ ಕಾಲದ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆ ಅವರಲ್ಲಿ ಕಲಾಸಕ್ತಿಯನ್ನು ತುಂಬುತ್ತಾರೆ.
ಪ್ರತೀ ವರ್ಷ ಜುಲೈ ತಿಂಗಳಲ್ಲಿ ಯಕ್ಷದೇಗುಲವು ತನ್ನ ವಾರ್ಷಿಕೋತ್ಸವವನ್ನು ಕಲಾವಿದರ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ, ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ಕೂಟ, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ನಡೆಸುತ್ತಾ ಬಂದಿದೆ. ಈ ವರ್ಷದ ವಾರ್ಷಿಕೋತ್ಸವವು ಜು.14ರಂದು ಕಾಂತಾವರದ ಕಾಂತೇಶ್ವರ ಸಭಾ ಭವನದಲ್ಲಿ ನೇರವೇರಲಿದೆ. ಹಿರಿಯ ಕಲಾವಿದರಿಂದ “ಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನ, ಪ್ರಸಿದ್ಧ ಕಲಾವಿದರಿಂದ “ಅಂಗಾಧ ಸಂಧಾನ – ಅತಿಕಾಯ ಕಾಳಗ’ ತಾಳಮದ್ದಳೆ, ಬಾಲ ಕಲಾವಿದರಿಂದ “ರತ್ನಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಗಳ ಮಧ್ಯೆ ಹಿರಿಯ ಕಲಾವಿದರಾದ ಕುಂಬ್ಳೆ ಸುಂದರ್ ರಾವ್ ಮತ್ತು ಬಂಟ್ವಾಳ ಜಯರಾಮ ಆಚಾರ್ಯರವರಿಗೆ ಯಕ್ಷದೇಗುಲ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು.ಎಳವೆಯಲ್ಲಿಯೇ ಮಕ್ಕಳಲ್ಲಿ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿ ಕಲಾವಿದರನ್ನು ರೂಪಿಸುವಲ್ಲಿ ಮತ್ತು ಯಕ್ಷಗಾನ ಯಕ್ಷದೇಗುಲದ ಕಾರ್ಯವು ಪ್ರಶಂಸನೀಯವಾಗಿದೆ.
– ಸದಾನಂದ ನಾರಾವಿ