ಮೂಡಬಿದ್ರಿ ಕೋ-ಓಪರೇಟಿವ್ ಸರ್ವಿಸ್ ಬ್ಯಾಂಕ್ ಲಿ. ವತಿಯಿಂದ, ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ನ.15 ರಂದು ದೇವಾನಂದ ಭಟ್ ಯಕ್ಷಗಾನ ಮಿತ್ರ ಮಂಡಳಿ ಬೆಳುವಾಯಿ ಇವರಿಂದ ಯಕ್ಷಗಾನ,ನಾಟ್ಯ,ಹಾಸ್ಯ ವೈಭವ ನಡೆಯಿತು.
ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಎರಡೂ ಶೈಲಿಯಲ್ಲಿನ ಯಕ್ಷಗಾನ ವೈಭವ ಮುಗಿಲು ಮುಟ್ಟಿದಂತೂ ಸತ್ಯ. ಬಲಿಪ ಪರಂಪರೆಯ, ಬಲಿಪ ಶೈಲಿಯ ಪೀಠಿಕೆ ಪದ್ಯವೊಂದನ್ನು ಬಲಿಪ ಪ್ರಸಾದ ಭಾಗವತರು ಹಾಡಿದಾಗ ಪದ್ಯದುದ್ದಕ್ಕೂ ಕರತಾಡನವಾಯಿತು.
ಶರಸೇತು ಬಂಧನ ಪ್ರಸಂಗದ ಧಾರುಣಿ ಸುರಯಜ್ಞವಾಡವ ಸೂರುಗೊಳುತಿಹ, ತಷ್ಕರನ ಯಮನೂರ ಪುಂದಿಸಿ ಹಾಡನ್ನು ತೆಂಕುತಿಟ್ಟಿನ ಶೈಲಿಯಲ್ಲಿ ಸುಮಧುರವಾಗಿ ಹಾಡಿದ ಬೆಳುವಾಯಿಯ ಕು| ಶುಭಾಂಗನಾ ಭಟ್ ಭವಿಷ್ಯದಲ್ಲಿ ಉತ್ತಮ ಭಾಗವತರಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದರು. ಗಿರೀಶ್ ರೈ ಕಕ್ಕೆಪದವು ಅವರು ಶೂರ್ಪನಖಾ ಪ್ರಕರಣದ ಅತಿ ಕುಲವತಿ ನಾನು,ಪ್ರಥ್ವಿ ಪಾಲಕ ನೀನು ಶೃಂಗಾರ ರಸದ ಹಾಡನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.ಬಳಿಕ ಸತ್ಯನಾರಾಯಣ ಪುಣಿಂಚಿತ್ತಾಯರು ಕರುಣಾನಿಧಿಯವತರಿಸು ತನುವಂಚ ನೀನು,ಸರ್ವಜ್ಞ ನೀನು ಎಂಬ ಸಂಭಾಷಣಾ ಹಾಡೊಂದನ್ನು ಮನೋಜ್ಞವಾಗಿ ಹಾಡಿ ಮನಸೂರೆಗೊಂಡರು.ಅನಂತರ ಎಲ್ಲಾ ಭಾಗವತರು ಏರು ಪದ್ಯವನ್ನು ಹಾಡಿದರಲ್ಲದೆ ಅಂತಿಮವಾಗಿ ಭಕ್ತಿ ಭಾವ ರಸದ ರಾಮ ಮಂತ್ರವ ಜಪಿಸೋ ಹೇ ಮನುಜ,ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ,ಸೋಮಶೇಖರ ತನ್ನ ಭಾಮೆಗೆ ಹೇಳಿದ ಮಂತ್ರ ಹಾಡನ್ನು ದ್ವಂದ್ವವಾಗಿ ಹಾಡಿದರು.
ಎರಡನೆಯ ಭಾಗವಾದ ನಾಟ್ಯ ವೈಭವದ ರಾಧಾ ವಿಲಾಸ ಪ್ರಸಂಗದಲ್ಲಿ ತೆಂಕಿನ ಶೈಲಿಯಲ್ಲಿ ಕಟೀಲು ಮೇಳದ ಕಲಾವಿದ ರಾಜೇಶ್ ನಿಟ್ಟೆ ಶ್ರೀ ಕೃಷ್ಣನಾಗಿ,ನಾಟ್ಯ ಗುರು ರಕ್ಷಿತ್ ಶೆಟ್ಟಿ ಪಡ್ರೆಯವರು ರಾಧೆಯಾಗಿ ಕಾಣಿಸಿಕೊಂಡು ಒಂದೂವರೆ ತಾಸುಗಳ ಕಾಲ ವೈಯಾರ, ಹುಸಿ ಮುನಿಸು, ಪ್ರಣಯದ ದ್ರಶ್ಯಗಳಲ್ಲಿ ಅದರಲ್ಲೂ ಗಿರೀಶ್ ರೈಯವರ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ…ಸಂದಬೊìಚಿತವಾಗಿ ಇಂಪಾಗಿ ಹಾಡಿ ವಿದ್ಯುತ್ ಸಂಚಾರವನ್ನುಂಟು ಮಾಡಿದರು.
ಬಡಗು ಶೈಲಿಯಲ್ಲೂ ಕೂಡ ಪುರುಷ ಸ್ತ್ರೀ ನಾಟ್ಯ ವೈಭವ ಮೆರೆಯಿತು.ಪುರುಷ ಪಾತ್ರದಲ್ಲಿ ಸಿಗಂದೂರು ಮೇಳದ ಕಲಾವಿದ ಶಿವಮೂರ್ತಿಯವರು, ಸ್ತ್ರೀ ಪಾತ್ರದಲ್ಲಿ ಸಸಿಹಿತ್ಲು ಮೇಳದ ಕಲಾವಿದ ಸಂತೋಷ್ ಕುಲಶೇಖರರವರು ಸೋತೆನು ನಾ ಸೋತೆನು ನಿನ ಈ ತರ ಸೊಬಗಿಗೆ ,ತ್ತೈಲೋಕ ಸುಂದರಿ ನೀನು ಎಂಬ ಪುಣಿಂಚಿತ್ತಾಯರ ಬಡಗಿನ ಶೈಲಿಯ ಹಾಡಿಗೆ ತಮ್ಮ ಚತುರ ಅಭಿನಯ ನಾಟ್ಯದಿಂದ ಮನಗೆದ್ದರು.
ಹಾಸ್ಯ ವೈಭವದಲ್ಲಿ ದೇವ ಋಷಿ ನಾರದರು ವಿಶೇಷವಾದ ಪರಿಮಳ ಮತ್ತು ಪ್ರಭಾವ ಬೀರುವ ದೇವಲೋಕದ ಪಾರಿಜಾತ ಹೂವನ್ನು ನಂದಗೋಕುಲದಲ್ಲಿನ ರುಕ್ಮಿಣಿಗೆ ನೀಡುವ ಮೂಲಕ ಶ್ರೀ ಕೃಷ್ಣ ಸತ್ಯಭಾಮೆಯರಲ್ಲಿ ವಿರಸ ಹುಟ್ಟಿಸುವ ಈ ಕಥಾ ಪ್ರಸಂಗವೇ ಶ್ರೀ ಕೃಷ್ಣ ಪಾರಿಜಾತ. ಈ ಕಥಾನಕದ ಹಾಸ್ಯ ವೈಭವ ಪ್ರದರ್ಶನದಲ್ಲಿ ಕೃಷ್ಣನಾಗಿ ಪ್ರಜ್ವಲ್ ಗುರುವಾಯನಕೆರೆ, ಸತ್ಯಭಾಮೆಯಾಗಿ ಲಕ್ಷ್ಮಣ ಮರಕಡ ,ಸಖೀಯಾಗಿ ಸುಂದರ ಬಂಗಾಡಿ, ಮಕರಂದನಾಗಿ ಬಂಟ್ವಾಳ ಜಯರಾಮ ಆಚಾರ್ಯರವರು ಹಾಸ್ಯ, ಲಾಸ್ಯ,ಪ್ರಬುದ್ಧ ಮಾತುಗಾರಿಕೆ ಅಭಿನಯದಿಂದ ಮಿಂಚಿದರು.ಮಕರಂದನಾಗಿ ಜಯರಾಮ ಆಚಾರ್ಯರು,ಸತ್ಯಭಾಮೆ ಸತ್ಯಭಾಮೆ, ಕೋಪವೇಕೆ ನನ್ನಲಿ ಎಂಬ ಸಿನಿಮಾದ ಪೂರ್ಣ ಹಾಡನ್ನು ಹೇಳಿ ಅದನ್ನು ಸತ್ಯಭಾಮೆಗೆ ಹೇಳಲು ಕೃಷ್ಣನಿಗೆ ತಿಳಿಸಿ ತನ್ಮೂಲಕ ಹಾಸ್ಯ ವೈಭವದ ಸಾರ್ಥಕತೆಗೆ ತಮ್ಮ ಅಪೂರ್ವ ಅಭಿನಯದ ಕಾಣಿಕೆಯನ್ನು ಸಲ್ಲಿಸಿದರು.
ಎಂ.ರಾಘವೇಂದ್ರ ಭಂಡಾರ್‌ಕರ್