Advertisement

ಒಂದು ಮಂಗಲ, ಮತ್ತೂಂದು ನಾಂದಿ

09:44 PM May 21, 2017 | Team Udayavani |

ಕಳೆದ ಆರು ತಿಂಗಳುಗಳಲ್ಲಿ ಕರಾವಳಿ, ಮಲೆನಾಡುಗಳಲ್ಲಿ ಪ್ರತಿದಿನ ನೂರಾರು ಯಕ್ಷಗಾನ ಪ್ರದರ್ಶನಗಳು ನಡೆಯುತ್ತ ಬಂದಿವೆ. ಈಗಾಗಲೇ ಸಕ್ರಿಯವಾಗಿರುವ ವೃತ್ತಿಪರ ಮೇಳಗಳು, ಅರೆವೃತ್ತಿಪರಮೇಳಗಳು, ಹವ್ಯಾಸಿ ತಂಡಗಳು, ಯುವಕ-ಯುವತಿ ಮಂಡಲಗಳು ಪ್ರದರ್ಶಿಸುವ ಯಕ್ಷಗಾನ ಕಾರ್ಯಕ್ರಮಗಳೆಲ್ಲವನ್ನೂ ಲೆಕ್ಕ ಹಾಕಿದರೆ ಎಷ್ಟಾದೀತು? ಜಾತ್ರೆ-ಉತ್ಸವಗಳ ನಿಮಿತ್ತ , ಶಾಲಾ-ಕಾಲೇಜು ವಾರ್ಷಿಕೋತ್ಸವಗಳ ಪ್ರಯುಕ್ತ, ಮದುವೆ-ಮನೆಒಕ್ಕಲುಗಳ ಸಂದರ್ಭ- ಹೀಗೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರದರ್ಶನಗಳು ನಡೆಯುತ್ತಿವೆ ಎಂದು ಅಂದಾಜು ಮಾಡುವುದು ಹೇಗೆ? ಜೊತೆಗೆ, ಯಕ್ಷಗಾನದ್ದಲ್ಲದ ಪ್ರದೇಶದಲ್ಲಿ ಅಂದರೆ ಬೆಂಗಳೂರು-ಮುಂಬೈಗಳಲ್ಲಿ , ಗಲ್ಫ್³-ಅಮೆರಿಕಗಳಲ್ಲಿ ಇನ್ನೆಷ್ಟು ಕಾರ್ಯಕ್ರಮಗಳು ಜರಗುತ್ತವೆಯೋ ಬಲ್ಲವರಾರು? ಒಂದಷ್ಟು ವಿವರಗಳು ದಿನಪತ್ರಿಕೆಗಳಲ್ಲಿ ಸಿಗಬಹುದು. ಹೆಚ್ಚಿನವು ಏನೂ ಪ್ರಚಾರವಿಲ್ಲದೆ ಸಂಭವಿಸುತ್ತವೆ. ಸೋಷಿಯಲ್‌ ಮೀಡಿಯಗಳಲ್ಲಿ ಕರಪತ್ರಗಳು ಪ್ರಸಾರವಾಗಬಹುದು. ಆದರೆ, ಎಲ್ಲವೂ ಒಂದೇ ಕಡೆ ಲಭ್ಯವಾಗಿ ಅಂದಾಜುಲೆಕ್ಕಕ್ಕೆ ನಿಲುಕುವಂಥಾದ್ದಲ್ಲ. ಹೊನ್ನಾವರದ ಯಾವುದೋ ಹಳ್ಳಿಯಲ್ಲಿ ಉತ್ಸಾಹಿಗಳೆಲ್ಲ ಸೇರಿಕೊಂಡು “ಆಟ’ ಮಾಡಿದರೆ ಯಾರಿಗೆ ಗೊತ್ತಾಗುತ್ತದೆ? ಕಾಸರಗೋಡಿನ ಯಾವುದೋ ತಂಡದವರು ಪಯ್ಯನೂರಿನ ಶಾಲಾ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನ ಏರ್ಪಡಿಸಿದರೆ ಅದು ಪ್ರಚಾರ ಸಿಗದೇ ಉಳಿಯುತ್ತದೆ. ತೆಂಕು- ಬಡಗುತಿಟ್ಟುಗಳೆರಡನ್ನೂ ಸೇರಿಸಿ “ಒಂದೇ ಯಕ್ಷಗಾನ’ ಎಂದು ಪರಿಗಣಿಸಿ ಒಂದು ಅಂದಾಜು ಅವಲೋಕನ ನಡೆಸುವುದಾದರೆ ಸರಾಸರಿ ಪ್ರತಿದಿನ ನಡೆಯುವ ಯಕ್ಷಗಾನಗಳ ಸಂಖ್ಯೆ 100 ರಿಂದ 300ರವರೆಗೂ ಇರಬಹುದು. ಹಾಗಿದ್ದರೆ, ಇಡೀ ವರ್ಷದಲ್ಲಿ ನಡೆಯುವ ಯಕ್ಷಗಾನಗಳ ಒಟ್ಟು ಸಂಖ್ಯೆ ಎಷ್ಟಾದೀತು ಎಂದು ಲೆಕ್ಕ ಹಾಕಿ. ಇನ್ನೂ ಮುಂದುವರಿದು ಹೇಳುವುದಿದ್ದರೆ, ಒಂದು ಯಕ್ಷಗಾನದ ಅಂದಾಜು ಖರ್ಚನ್ನು ಒಟ್ಟು ಸಂಖ್ಯೆಯಿಂದ ಗುಣಾಕಾರ ಮಾಡಿದರೆ ಆಗ ಒಂದು ಕಲೆಯ ಹಿಂದಿನ ಆರ್ಥಿಕ ವ್ಯವಹಾರವನ್ನೂ ಕಲ್ಪಿಸಬಹುದಾಗುತ್ತದೆ.
.
ಸಾಮಾನ್ಯವಾಗಿ ಜೂನ್‌ ತಿಂಗಳಿಂದ ನವೆಂಬರ್‌ವರೆಗಿನ ಅವಧಿ ಯಕ್ಷಗಾನದ ಮಟ್ಟಿಗೆ “ಆಫ್ ಸೀಸನ್‌’ ಎಂದರ್ಥ. ಮೇ ತಿಂಗಳ ಕೊನೆಗೆ ವೃತ್ತಿಪರ ಯಕ್ಷಗಾನ ಮೇಳಗಳು ತಮ್ಮ ತಿರುಗಾಟವನ್ನು ಮುಕ್ತಾಯಗೊಳಿಸುತ್ತವೆ. ವೃತ್ತಿಪರ ಕಲಾವಿದರು ಮೇಳವನ್ನು ತೊರೆದು ತಮ್ಮ ಊರಿಗೆ ಹೊರಟುನಿಲ್ಲುತ್ತಾರೆ. ಮಳೆಗಾಲದಲ್ಲಿ ಕೃಷಿ ಅಥವಾ ಇನ್ಯಾವುದಾದರೂ ನೌಕರಿ ಮಾಡಿಕೊಂಡು ಜೀವನ ಹೊರೆಯುತ್ತಾರೆ. ಆದರೆ, ಇನ್ನು ಮುಂದಿನ ದಿನಗಳು ಹಾಗಿಲ್ಲದಿರಬಹುದು. ಇಡೀ ವರ್ಷವೂ ಯಕ್ಷಗಾನ ಪ್ರದರ್ಶಿಸುವುದಕ್ಕೆ ಅವಕಾಶವಿರುವಂಥ ಸಂದರ್ಭ ಒದಗಿಬರಬಹುದು. ಯಕ್ಷಗಾನ ಎಂಬುದು ಪೂರ್ಣವರ್ಷದ ಕಲೆಯಾಗಬಹುದು.

Advertisement

ಈಗಾಗಲೇ ಹರಕೆಯಾಟ ಆಡುವ ಕೆಲವು ಮೇಳಗಳಲ್ಲಿ ಹಲವು ದಶಕಗಳಿಗೆ ಬೇಕಾಗುವಷ್ಟು ಹರಕೆಯಾಟಗಳು ನಿಗದಿಗೊಂಡಿದ್ದು ಇವುಗಳನ್ನು ಪೂರೈಸಬೇಕಾದರೆ ಮಳೆಗಾಲದಲ್ಲಿಯೂ ಯಕ್ಷಗಾನ ಪ್ರದರ್ಶಿಸುವಂಥ ಸ್ಥಿತಿ ಬರಬಹುದು.

ಕೆಲವು ಕಲಾವಿದರಿಗೆ ಮಳೆಗಾಲದಲ್ಲಿ ಪ್ರತಿದಿನ ಎಂಬಂತೆ ಬೇಡಿಕೆಯಿದೆ. ಹೆಚ್ಚಿನ ಕಡೆಗಳಲ್ಲಿ ಸಭಾಂಗಣಗಳು ಇರುವುದರಿಂದ ಮಳೆ ಬಂದರೂ ಪ್ರದರ್ಶನಕ್ಕೆ ನಿರಾತಂಕವಾಗಿ ಸಾಗುತ್ತದೆ. ಈ ಹಿಂದೆಲ್ಲ ಮಂಗಳೂರು, ಉಡುಪಿ, ಕುಂದಾಪುರ, ಶಿರಸಿ, ಕುಮಟಾ- ಹೀಗೆ ಪ್ರಮುಖ ಕೇಂದ್ರಗಳ ಪುರಭವನಗಳಲ್ಲಿ ಅಥವಾ ಯಾವುದಾದರೂ ಸಭಾಂಗಣಗಳಲ್ಲಿ ಪ್ರದರ್ಶನಗಳು ಏರ್ಪಡುತ್ತಿದ್ದವು. ಈಗ, ಮುಖ್ಯ ಪಟ್ಟಣ ಎಂದೇನಿಲ್ಲ. ದೇವಸ್ಥಾನಗಳ ಆಶ್ರಯದ ಸಣ್ಣ ಸಭಾಂಗಣವಿದ್ದರೂ ಸಾಕು, ಅಲ್ಲೊಂದು ಯಕ್ಷಗಾನ ಸಂಯೋಜನೆಗೊಳ್ಳುತ್ತದೆ.

ಈ ಹಿಂದಿನ ವರ್ಷಗಳಲ್ಲೆಲ್ಲ ಮುಂಬಯಿ, ಬೆಂಗಳೂರುಗಳಲ್ಲಿ ಕಲಾವಿದರಿಗೆ ಬೇಡಿಕೆ ಇರುತ್ತಿದ್ದವು. ಈಗಲೂ ಇವೆ. ಆದರೆ, ಬೆಂಗಳೂರು, ಮುಂಬಯಿಗಳಲ್ಲಿ ವೃತ್ತಿಪರ ಯಕ್ಷಗಾನ ತಂಡಗಳೇ ಇರುವುದರಿಂದ ಅವು ಅತಿಥಿ ಕಲಾವಿದರಾಗಿ ಊರಿನ ಕಲಾವಿದರನ್ನು ಆಹ್ವಾನಿಸುತ್ತವೆ. ಜೊತೆಗೆ, ಹುಬ್ಬಳ್ಳಿ, ಮೈಸೂರು, ಹೈದ್ರಾಬಾದ್‌, ಪುಣೆ, ಚೆನ್ನೈ ಮುಂತಾದೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ಹೆಚ್ಚುತ್ತಿವೆ. ಇಲ್ಲೆಲ್ಲ ಕಾಲಮಿತಿ ಯಕ್ಷಗಾನ ಪ್ರದರ್ಶನಗಳು ಜನಪ್ರಿಯಗೊಳ್ಳುತ್ತಿದ್ದರೆ ಕಳೆದ ಎರಡು ವರ್ಷಗಳಲ್ಲಿ ದೆಹಲಿಯಲ್ಲಿ ಪೂರ್ಣ ರಾತ್ರಿ ಪ್ರದರ್ಶನ ಏರ್ಪಡಿಸಿರುವುದು ಸುದ್ದಿಯಾಗಿದೆ. 

ಸಾರಿಗೆ, ಸಂವಹನ ಸುಲಭವಾಗಿರುವ ಈ ದಿನಗಳಲ್ಲಿ ಕರ್ನಾಟಕದ ಗಡಿಯು ಅಮೆರಿಕದವರೆಗೂ ವಿಸ್ತರಣೆಗೊಂಡರೆ ಅಚ್ಚರಿ ಇಲ್ಲ. ಅಮೆರಿಕ, ಲಂಡನ್‌, ಆಸ್ಟ್ರೇಲಿಯಾ, ಜಪಾನ್‌, ದುಬೈ ಮುಂತಾದ ದೇಶಗಳಲ್ಲಿ ಕನ್ನಡಸಂಘಗಳು ಸಕ್ರಿಯವಾಗಿದ್ದುಕೊಂಡು, ಅಲ್ಲೊಂದು ಪುಟ್ಟ ಕರ್ನಾಟಕವನ್ನು ಜೀವಂತವಾಗಿರಿಸಿವೆ. ಕನ್ನಡದ ಒಂದು ಭಾಗವಾಗಿ ಯಕ್ಷಗಾನವೂ ಆ ರಾಷ್ಟ್ರಗಳ ಮುಖ್ಯನಗರಗಳಲ್ಲಿ ಜನಪ್ರಿಯವಾಗುತ್ತಿದೆೆ. ಕೆನಡಾದಲ್ಲೊಂದು ಪೂರ್ಣ ಪ್ರಮಾಣದ ಯಕ್ಷಗಾನ ಮೇಳವೇ ಇರುವ ಸುದ್ದಿಯಿದೆ. ಪರದೇಶಗಳಲ್ಲಿರುವ ಯಕ್ಷಗಾನ ಪ್ರಿಯರು ಪ್ರತಿಸಾರಿ ಊರಿಗೆ ಬಂದಾಗ, ವೇಷಭೂಷಣ, ಹಿಮ್ಮೇಳಪರಿಕರಗಳನ್ನು ಒಯ್ದು ತಾವಿರುವಲ್ಲೊಂದು ಸುಸಜ್ಜಿತ ತಂಡವನ್ನೇ ಕಟ್ಟಿಬಿಡುತ್ತಾರೆ. 

Advertisement

ಮುಖ್ಯವಾಗಿ ಹುಟ್ಟೂರಿನಿಂದ ದೂರ ಇರುವವರಿಗೆ “ಪರಕೀಯತೆ’ಯನ್ನು ಮರೆಯುವಲ್ಲಿ ಯಕ್ಷಗಾನ ಮುಖ್ಯ ಮಾಧ್ಯಮವಾಗುತ್ತಿದೆ. ಯಕ್ಷಗಾನದ ಚೆಂಡೆ ಕೇಳಿದರೆ ಸಾಕು, ತಾವು ಊರಲ್ಲಿಯೇ ಇದ್ದೇವೆ ಎಂಬಂಥ ಭಾವನೆ ಮೂಡುತ್ತದೆ. ಹಾಗಾಗಿ, ಊರಿನಲ್ಲಿ ಯಕ್ಷಗಾನದ ಚೆಂಡೆಯ ಧ್ವನಿ ಕ್ಷೀಣವಾದರೂ ಪರವೂರಿನಲ್ಲಿ ಅದು ಅನುರಣಿಸುತ್ತಲೇ ಇರುತ್ತದೆ. ಹಾಗಾಗಿ, ಮುಂದಿನ ವರ್ಷಗಳಲ್ಲಿ ಯಕ್ಷಗಾನ ಮೇಳಗಳ ತಿರುಗಾಟದ ವಾರ್ಷಿಕ ಮುಕ್ತಾಯ (ಮೇ ತಿಂಗಳ ಸುಮಾರಿಗೆ) ಎಂಬುದು ಕೇವಲ ಸಾಂಕೇತಿಕವಾಗಿ ಉಳಿದು ಬಿಡುವ ಸಂಭವವಿದೆ. ಯಕ್ಷಗಾನ ಪ್ರದರ್ಶನಗಳು ಮಳೆಗಾಲದ ದಿನಗಳಲ್ಲಿಯೂ ಎಂದಿನಂತೆ ಮುಂದುವರಿದು ಇದೊಂದು “ಸರ್ವಋತುಗಳ ಕಲೆ’ ಎಂದು ಪ್ರಸಿದ್ಧಿ ಪಡೆದರೂ ಅಚ್ಚರಿ ಇಲ್ಲ. 

– ಸತೀಶ‌ ಮೆಕ್ಕೆಮನ

Advertisement

Udayavani is now on Telegram. Click here to join our channel and stay updated with the latest news.

Next