ಬದಿಯಡ್ಕ: ಹಿರಿಯರ ತ್ಯಾಗದ ಸಂಕೇತವಾಗಿ ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನ ಇಂದು ಜಗದಗಲ ವ್ಯಾಪಿಸಿ ಜನಪ್ರಿಯತೆ ಗಳಿಸಿದೆ. ಯಕ್ಷಗಾನ ಕೇವಲ ಮನೋರಂಜನೆ ಮಾತ್ರವಲ್ಲದೆ ಅದನ್ನು ಆರಾಧನೆಯಾಗಿ ತಪಸ್ಸಿನಂತೆ ಸೇವಿಸುವುದರ ಪರಿಣಾಮ ಪರಂಪರೆ, ಶಾಸ್ತ್ರೀಯತೆಯ ಚೌಕಟ್ಟಿನಡಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಖ್ಯಾತ ಯುವ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಲ್ಲಂಗಾನದ ಶ್ರೀ ನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆರಂಭಗೊಂಡ ನವರಾತ್ರಿ ಮಹೋತ್ಸವದ ಅಂಗವಾಗಿ ಸ್ಥಳೀಯ ಶ್ರೀ ಸುಬ್ರಹ್ಮಣ್ಯ ಕಲಾಸಂಘದ 30ನೇ ವಾರ್ಷಿಕೋತ್ಸವದ ಭಾಗವಾಗಿ ಹಮ್ಮಿಕೊಂಡ ಯಕ್ಷ ದಶ ವೈಭವ ಕಾರ್ಯಕ್ರಮಕ್ಕೆ ಬುಧವಾರ ರಾತ್ರಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಕೊಲ್ಲಂಗಾನದ ಶ್ರೀ ಚಕ್ರ ಆರಾಧನೆ ಮತ್ತು ಯಕ್ಷಾರಾಧನೆ ಸಮಾಜವನ್ನು ಸತ್ಪಥದತ್ತ ಮುನ್ನಡೆಸುವಲ್ಲಿ ಕ್ರಿಯಾತ್ಮಕ ಪರಿಣಾಮ ಬೀರಿದೆ. ಯಕ್ಷಗಾನವನ್ನು ಮುನ್ನಡೆಸುತ್ತಿರುವ ಶ್ರೀ ಕ್ಷೇತ್ರದ ಕೊಡುಗೆಗಳು ಯಕ್ಷಗಾನಕ್ಕೆ ಮನ್ನಣೆಯನ್ನು ತಂದುಕೊಡುತ್ತಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಅವರು, ಕಲೆ, ಕಲಾವಿದರನ್ನು ಪೋಷಿಸುವ ಸಮಾಜ ಗಟ್ಟಿಯ ನೆಲೆಗಟ್ಟನ್ನು ಹೊಂದಿರುತ್ತದೆ. ಇಂದು ಸವಾಲುಗಳ ಮಧ್ಯೆ ತೊಳಲುವ ನಮಗೆ ಪರಂಪರೆ ಸಾಗಿಬಂದ ಇತಿಹಾಸದ ಮೆಲುಕುಗಳು ಬೆರಗು ಮೂಡಿಸುತ್ತದೆ. ಆದರೆ ಅಂತಹ ಭವ್ಯ ಪರಂಪರೆಯನ್ನು ಮತ್ತೆ ಸಾಕ್ಷಾತ್ಕರಿಸುವ ನಿಟ್ಟಿನ ಯತ್ನಗಳು ಕೈಗೂಡುವುದಿಲ್ಲ. ಅಧ್ಯಾತ್ಮ ಮತ್ತು ನಂಬಿಕೆ ಗಳನ್ನು ಮೈಗೂಡಿಸದ ಹೊರತು ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸಾಧ್ಯತೆ ಗಳಿಗೆ ಯಕ್ಷಗಾನ ಕಲೆಗೆ ಸಾಧ್ಯ ವಿದೆ ಎಂದು ತಿಳಿಸಿ ದರು. ತಮ್ಮ ಹಿರಿಯರ ಒತ್ತಾಸೆಯಿಂದ ನಡೆದುಬಂದ ಯಕ್ಷಾ ರ್ಚನೆಯನ್ನು ಸಹೃದಯರ ನೆರವಿ ನೊಂದಿಗೆ ಮುನ್ನಡೆ ಸಲು ಸಾಧ್ಯವಾಗಿರುವುದು ಭರವಸೆ ಮೂಡಿಸಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಬಾಗಲ ಕೋಟೆಯ ಶ್ರೀ ವರದಹಸ್ತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ರಾಘವೇಂದ್ರ ಫತ್ತೇಪೂರ್ ಅವರು ಈ ಸಂದರ್ಭ ಮಾತನಾಡಿ, ರಾಷ್ಟ್ರಾದ್ಯಂತ ವಿವಿಧ ಆಯಾಮಗಳಲ್ಲಿ ಆಚರಿಸಲ್ಪಡುವ ನವರಾತ್ರಿ ಹಬ್ಬವು ಋಣಾತ್ಮಕತೆಯ ಮೇಲೆ ಧನಾತ್ಮಕತೆಯ ವಿಜಯದ ಸಂಕೇತವಾಗಿದೆ. ಮನುಷ್ಯನ ರಾಕ್ಷಸತ್ವವನ್ನು ನಾಶಗೊಳಿಸಿ,ಪ್ರೀತಿಯ ಅಂತಃಕರಣದೊಳಗೆ ಭಕ್ತಿಯ ಸೇವೆಯ ಮೂಲಕ ಬದುಕಿನ ಸಾರ್ಥಕತೆ ಕಾಣು ವುದು ನಮ್ಮ ಸಂಸ್ಕೃತಿಯ ಶ್ರೀ ಮಂತಿಕೆಯ ಸಂಕೇತವಾಗಿದೆ. ಕರಾವಳಿಯಾದ್ಯಂತ ಜನಜನಿತ ವಾಗಿ, ಜನರೊಂದಿಗೆ ಹಾಸು ಹೊಕ್ಕಾಗಿರುವ ಯಕ್ಷಗಾನ ಕಲೆ ಯನ್ನು ಆರಾಧನೋಪಾದಿಯಲ್ಲಿ ಮುನ್ನಡೆಸು ತ್ತಿರುವ ಶ್ರೀ ಕ್ಷೇತ್ರದ ಅನನ್ಯ ಕಲಾಸೇವೆ ಸ್ತುತ್ಯರ್ಹ ಎಂದು ಶ್ಲಾಘಿಸಿದರು.
ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಮಾಜೀ ಸದಸ್ಯ ಮಂಜುನಾಥ ಡಿ. ಮಾನ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಕಲಾಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಪಟ್ಟಾಜೆ ಉಪಸ್ಥಿತರಿದ್ದರು. ನಾರಾಯಣ ಮೂಲಡ್ಕ ಸ್ವಾಗತಿಸಿ, ಶ್ರೀದೀಕ್ಷಾ ವಂದಿಸಿದರು. ಭಾಗವತ ಸತೀಶ ಪುಣಿಂಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಬಾಲಕಲಾವಿದ ಸಮೃದ್ಧ ಪುಣಿಂಚತ್ತಾಯ ಯಕ್ಷಗಾನ ಭಾಗವತಿಕೆಯ ಪ್ರಾರ್ಥನಾ ಗೀತೆ ಹಾಡಿದರು.
ಬಳಿಕ ಮುಳ್ಳೇರಿಯ ಕೋಳಿಯಡ್ಕದ ಶ್ರೀ ಚಾಕಟೆ ಚಾಮುಂಡಿ ಯಕ್ಷಗಾನ ಕಲಾಸಂಘದವರಿಂದ ನರಕಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು.
ರಾತ್ರಿ ಶ್ರೀ ನಿಲಯ ದಲ್ಲಿ ನವರಾತ್ರಿಯ ಪೂಜೆ, ಮಹಾ ಮಂಗಳಾ ರತಿ, ಪ್ರಸಾದ ವಿತರಣೆ ನಡೆಯಿತು. ಗುರು ವಾರ ಸಂಜೆ ಕುಂಟಾಲು ಮೂಲೆ ಚಿರಂಜೀವಿ ಕಲಾಸಂಘದವರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಶುಕ್ರವಾರ ಸಂಜೆ 6ರಿಂದ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘದವರಿಂದ ಗುರು ದಕ್ಷಿಣೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಶ್ರೀ ಕ್ಷೇತ್ರ ಕೊಲ್ಲಂಗಾನದ ಶ್ರೀ ಚಕ್ರ ಆರಾಧನೆ ಮತ್ತು ಯಕ್ಷಾರಾಧನೆ ಸಮಾಜವನ್ನು ಸತ್ಪಥದತ್ತ ಮುನ್ನಡೆಸುವಲ್ಲಿ ಕ್ರಿಯಾತ್ಮಕ ಪರಿಣಾಮ ಬೀರಿದೆ. ಯಕ್ಷಗಾನವನ್ನು ಮುನ್ನಡೆಸುತ್ತಿರುವ ಶ್ರೀ ಕ್ಷೇತ್ರದ ಕೊಡುಗೆಗಳು ಯಕ್ಷಗಾನಕ್ಕೆ ಮನ್ನಣೆಯನ್ನು ತಂದುಕೊಡುತ್ತಿದೆ ಎಂದು ಮಯ್ಯ ಅವರು ತಿಳಿಸಿದರು.
ಯುವ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.