Advertisement

Yakshagana; ಚರ್ಚೆಗೆ ಗುರಿಯಾಗಿದ್ದ ಹಾರಾಡಿ ರಾಮಗಾಣಿಗರ ನಾಟಕೀಯ ಹಿರಣ್ಯಕಶಿಪು

05:33 PM Sep 14, 2023 | ವಿಷ್ಣುದಾಸ್ ಪಾಟೀಲ್ |

ಆ ಕಾಲ ಸಂಪೂರ್ಣ ಸಾಂಪ್ರದಾಯಿಕ ಯಕ್ಷಗಾನಕ್ಕೆ ಮೀಸಲಾಗಿದ್ದು, ಹೊಸತನದ ಪ್ರಭಾವ ಇನ್ನೂ ನಡು ಬಡಗುತಿಟ್ಟಿನ ಯಕ್ಷಗಾನಕ್ಕೆ ಬೀರದ ಕಾಲ. ಪ್ರೇಕ್ಷಕರೆಲ್ಲರೂ ಸಿನಿಮಾ, ಇನ್ನಿತರ ಕಲೆಗಳ ಪ್ರಭಾವಕ್ಕೆ ಒಳಗಾಗದೇ ಇದ್ದ ಕಾಲ. ರಾಮಾಯಣ, ಮಹಾಭಾರತ ಮತ್ತು ಭಾಗವತದ ಕಥೆಗಳು ಮಾತ್ರ ಬಯಲಾಟದಲ್ಲಿ  ಮೇಳೈಸುತ್ತಿದ್ದವು. 1930 ರಿಂದ 1960 ರ ವರೆಗೆ ಹಾರಾಡಿ ರಾಮಗಾಣಿಗರು ವಿಜೃಂಭಿಸಿದ ಕಾಲ. ಆ ವೇಳೆ ಅವರ ಪ್ರಧಾನ ಪಾತ್ರಗಳೆಲ್ಲವೂ ಜನಮಾನಸದಲ್ಲಿ ನೆಲೆಯಾಗಿದ್ದವು. ಅದರಲ್ಲೂ ಅವರು ನಿರ್ವಹಿಸುತ್ತಿದ್ದ ನಾಟಕೀಯ ವೇಷಭೂಷಣದ ಹಿರಣ್ಯಕಶಿಪು ಪಾತ್ರ ಬಹುವಾಗಿ ಚರ್ಚೆಗೆ ಗುರಿಯಾಗಿತ್ತು.

Advertisement

ಇದನ್ನೂ ಓದಿ : Yakshagana; ಮರೆಯಲಾಗದ ಮಹಾನುಭಾವರು: ಗತ್ತು ಗೈರತ್ತಿನ ರಾಮ ಗಾಣಿಗರು

ಕಲಾ ಪ್ರೇಮಿಗಳು, ವಿಮರ್ಶಕರು ಪ್ರಶ್ನಿಸುವ ಅವಕಾಶವಿದ್ದ ಆ ಕಾಲದಲ್ಲಿ ಶುದ್ಧ ಯಕ್ಷಗಾನದ ಮೇರು ಕಲಾವಿದರೊಬ್ಬರು ಈ ರೀತಿ ಹೊಸ ತನವನ್ನು ತೋರಿ ಯಕ್ಷಗಾನೇತರ ಆಹಾರ್ಯವನ್ನು ರಂಗಕ್ಕೆ ತಂದುದು ಸಾಮಾನ್ಯ ಪ್ರೇಕ್ಷಕರಾದಿ ಹಲವರ ವಿರೋಧಕ್ಕೂ ಕಾರಣವಾಗಿತ್ತು.

ಖಳ ರಾಕ್ಷಸ ಹಿರಣ್ಯಕಶಿಪು ಪಾತ್ರವನ್ನು ಎರಡನೇ ವೇಷಧಾರಿ ನಿರ್ವಹಿಸುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ಆ ವೇಷವನ್ನೂ ಇಂದಿಗೂ ನಾಟಕೀಯ(ಯಕ್ಷಗಾನ ಭಾಷೆಯ ಪಾರ್ಟ್ ವೇಷ) ಆಹಾರ್ಯದಲ್ಲಿ ರಂಗಕ್ಕೆ ತರಲಾಗುತ್ತಿದೆ. ಕೆಲ ಯುವ ಕಲಾವಿದರು ಖಳ ರಾಜವೇಷದಲ್ಲೂ ಮಾಡಿ ಬದಲಾವಣೆ ತಂದಿದ್ದಾರೆ.

ರಾಮಗಾಣಿಗರ ಎಲ್ಲಾ ಪಾತ್ರಗಳನ್ನು ಬಹುವಾಗಿ ಮೆಚ್ಚಿಕೊಂಡ ಕಲಾಪ್ರೇಮಿಗಳು ನಾಟಕೀಯ ಶೈಲಿಯ ಪಾತ್ರವನ್ನು ತೆಗಳುತ್ತಿದ್ದರು. ಈ ವಿಚಾರವನ್ನು ಯಕ್ಷದೇಗುಲ ಸಂಸ್ಥೆ ಹೊರತಂದ ಡಿ.ರಾಮಗಾಣಿಗರ ಜನ್ಮ ಶತಾಬ್ದಿ ವಿಶೇಷ ಸಂಕಲನ ”ಯಕ್ಷರಂಗದ ಕೋಲ್ಮಿಂಚು” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

Advertisement

ಸಹಕಲಾವಿದರೂ ಇದೊಂದು ಹೊಸತನ ಬೇಕಿತ್ತಾ ಎನ್ನುವ ಪ್ರಶ್ನೆಯನ್ನು ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದರು ಹೊರತು ಬಹಿರಂಗವಾಗಿ ವಿರೋಧಿಸಲು ಸಾಧ್ಯವಾಗಲಿಲ್ಲವಂತೆ.

ಕೃಷಿ ಧನಿಕರ ‘ವೀಳ್ಯ’ (ಹಣ)ದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಲ್ಲಿ ಅಂದಿನ ಜನಪ್ರಿಯ ಪ್ರಸಂಗಗಳಲ್ಲಿ ಒಂದಾದ ಪ್ರಹ್ಲಾದ ಚರಿತ್ರೆಯಲ್ಲಿ ‘ ಹಾರಾಡಿ ರಾಮ ಗಾಣಿಗರ ಪಾರ್ಟಿನ ವೇಷ ಕಾಣ್ಕ್ (ಕುಂದ ಗನ್ನಡದಲ್ಲಿ ನೋಡಬೇಕು)..ಅನ್ನುವವರ ಸಂಖ್ಯೆಯೂ ಇತ್ತು. ಅದೊಂದು ಹೊಸತನವಾಗಿ ಕಾಣುತ್ತಿದ್ದರು ಎಂದು ”ವಿಲೋಕನ” ಪುಸ್ತಕದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಉಲ್ಲೇಖಿಸಿದ್ದಾರೆ.

ವಿಶೇಷವೆಂದರೆ ಹಿರಣ್ಯಕಶಿಪು ವೇಷಭೂಷಣವೊಂದು ನಾಟಕೀಯ ಹೊರತುಪಡಿಸಿ ಅವರ ಪ್ರವೇಶ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿತ್ತು. ಪ್ರಹ್ಲಾದನಲ್ಲಿ”ಎಲ್ಲಿ ನಿನ್ನ ಹರಿ….”ಎಂದು ರಾಮ ಗಾಣಿಗರು ಪಾತ್ರದಲ್ಲಿ ಪರಕಾಯ ಪ್ರವೇಶಗೈದು ಘರ್ಜಿಸಿದಾಗ ಪುಟ್ಟ ಮಕ್ಕಳಂತೂ ಬೆಚ್ಚಿ ಬೀಳುತ್ತಿದ್ದರಂತೆ.

ಮುಂಬಯಿ ಮಹಾನಗರಿಗೆ ಪ್ರದರ್ಶನವೊಂದಕ್ಕೆ ತೆರಳಿದ್ದ ರಾಮಗಾಣಿಗರು ಕೆಲವರ ಒತ್ತಾಯಕ್ಕೆ ಮಣಿದು ಕಿರೀಟವಿಲ್ಲದೆ ತಲೆಬಿಟ್ಟ ಹಿರಣ್ಯಕಶಿಪು ಪಾತ್ರ ಮಾಡಿ ಮಾನಸಿಕ ಸಂಕಟಕ್ಕೆ ಗುರಿಯಾಗಿದ್ದರಂತೆ, ಆ ಬಳಿಕ ಕೆಲವು ವರ್ಷ ಮುಂಬಯಿಯಲ್ಲಿ ಪ್ರದರ್ಶನಗಳನ್ನೇ ನೀಡಿರಲಿಲ್ಲವಂತೆ.

* ರಾಮಗಾಣಿಗರು ನಿರ್ವಹಿಸಿದ ಇತರ ಕೆಲ ಪಾತ್ರಗಳ ಕೆಲ ಫೋಟೋಗಳು ಕೆಮರಾದಲ್ಲಿ ಸೆರೆಯಾಗಿದ್ದರೂ ಹಿರಣ್ಯ ಕಶಿಪುವಿನ ಪಾತ್ರ ಮಾತ್ರ ಲಭ್ಯವಾಗಿಲ್ಲ. ಇಲ್ಲಿ ಸಾಂದರ್ಭಿಕವಾದ ಭಾವಚಿತ್ರವನ್ನು ರಾಮಗಾಣಿಗರ ಫೋಟೋದೊಂದಿಗೆ ಪ್ರಕಟಿಸಲಾಗಿದೆ.

(ಈ ಸರಣಿ ಮುಂದುವರಿಯಲಿದೆ)

Advertisement

Udayavani is now on Telegram. Click here to join our channel and stay updated with the latest news.

Next