Advertisement
ಅಷ್ಟೇ ಅಲ್ಲ. ಅಭಿಪ್ರಾಯಗಳು, ವಿಮರ್ಶೆಗಳು, ಪ್ರತಿಕ್ರಿಯೆಗಳು ಹೀಗೆ ವಿಪುಲವಾದ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಇದಕ್ಕೆ ಕಾರಣವೇನು? ಪ್ರಧಾನತಃ ಸಾಮಾಜಿಕ ಮಾಧ್ಯಮಗಳ ಮುಕ್ತತೆ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಪ್ರಕಟಿಸುವುದಕ್ಕೆ ಅನುಕೂಲವಿದೆ. ಸ್ವಾತಂತ್ರÂವೂ ಇದೆ. ಅದರಿಂದಾಗಿ, “ನಾನು ನನಗೆ ತೋರಿದ್ದನ್ನು ಹೇಳುವುದಕ್ಕೆ ಯಾವ ಅಭ್ಯಂತರವೂ ಇಲ್ಲ’ ಎಂಬ ಭಾವನೆಯಿಂದಾಗಿ ಪ್ರತಿಯೊಬ್ಬನೂ ವಿಮರ್ಶಕನಾಗುತ್ತಾನೆ. ಇದು ಅಪಾಯದ ಸೂಚನೆಯೂ ಹೌದು. ಯಾಕೆಂದರೆ ವೇದಿಕೆಯ ಮುಕ್ತತೆಯಿಂದಾಗಿ ಕಲೆಯೊಂದರ ಒಳಹೊರಗುಗಳ ಅರಿವಿಲ್ಲದ ಜನರೂ ಪ್ರದರ್ಶನಗಳ ವೀಡಿಯೋ ತುಣುಕುಗಳನ್ನಷ್ಟೇ ನೋಡಿ ವಿಮರ್ಶಿಸುತ್ತಾರೆ. ಇದು ಪೂರ್ಣ ಪ್ರದರ್ಶನದ ವಿಮರ್ಶೆಯಾಗುವುದಿಲ್ಲ. ಮಾತ್ರವಲ್ಲ, ಇಂತಹ ವಿಮರ್ಶೆಗಳಿಗೆ ಕಲಾತ್ಮಕ ಉದ್ದೇಶಗಳಿಗಿಂತ ಹೆಚ್ಚು ಅನ್ಯೋದ್ದೇಶಗಳೂ ಇರುವುದು ಶಕ್ಯ. ಸಾರ್ವಜನಿಕರಿಗೆ ಇದೇ ಸತ್ಯ ಎಂಬ ಭಾವನೆ ಉಂಟಾಗುತ್ತದೆ. ಆಗ ರಂಗಭೂಮಿಯ ಒಳಗಿದ್ದವರಲ್ಲಿ ಅನೇಕರಿಗೆ ಅಸಹಾಯಕತೆಯ ಅನುಭವವಾಗುತ್ತದೆ.
ಯಕ್ಷಗಾನ ಅಥವಾ ತಾಳಮದ್ದಲೆ ರಂಗಭೂಮಿಯ ಪ್ರದರ್ಶನಗಳಿಗೆ ಆ ಕ್ಷಣದಲ್ಲಿ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಾರೆ. ಅದಕ್ಕೆ ಕಲಾವಿದನ ಸ್ಪಂದನವೂ ಆ ಕ್ಷಣದ್ದೇ ಆಗಿರುತ್ತದೆ. ಚಿಂತಿಸಿ, ಪರಿಣಾಮಗಳನ್ನು ತರ್ಕಿಸಿ, ನಿರ್ವಹಿಸುವ ವ್ಯವಧಾನ ಅವನಿಗಿರುವುದಿಲ್ಲ. ಅದೆಲ್ಲ ಆ ಕ್ಷಣದಲ್ಲಿ ಹುಟ್ಟಿದ ಭಾವನೆಯ ಪರಿಣಾಮವಾಗಿ ಸಂಭವಿಸುವುದು. ಕಲೆಯ ಸೂಕ್ಷ¾ವನ್ನು ತಿಳಿಯದ ಜನ ಇದನ್ನು ಆಕ್ಷೇಪಿಸುವಾಗ ನಿರ್ದಿಷ್ಟ ಸಂದರ್ಭವನ್ನಷ್ಟೇ ಅವರ ಗಮನದಲ್ಲಿರುತ್ತದೆ. ಅದರ ಹಿಂದೆ ಮುಂದೆ ಗೊತ್ತಿರುವುದಿಲ್ಲ. ಒಂದು ನಿರ್ದಿಷ್ಟ ಪ್ರದರ್ಶನದ ಒಂದು ತುಣುಕು ಇಡಿಯ ಪ್ರದರ್ಶನದ ಯೋಗ್ಯತೆಗೆ ಮಾನದಂಡವಾಗಲಾರದು. ಆ ತುಣುಕಿನ ವಿಕಾರಕ್ಕೆ ಪ್ರಚೋದನೆ ನೀಡಿದವರ ಕುರಿತು ಆಕ್ಷೇಪಣಕಾರರು ಮೌನವಾಗುತ್ತಾರೆ. ಅಲ್ಲದೆ ಪರಿಣಾಮದಲ್ಲಿ ಇಂತಹ ಅಭಿಪ್ರಾಯಗಳು ಒಟ್ಟು ರಂಗಭೂಮಿಯ ಎಲ್ಲರಿಗೂ ಅನ್ವಯವಾಗುತ್ತದೆ. ಈ ಸಾಮೂಹಿಕ ಆಕ್ಷೇಪಗಳಿಗೆ ಉತ್ತಮ ನಿರ್ವಹಣೆ ಮಾಡಿದ ಕಲಾವಿದನೂ ಗುರಿಯಾಗುತ್ತಾನೆ. ಅವನೇನು ಮಾಡಬೇಕು? ಬೇಜವಾಬ್ದಾರಿಯಿಂದ ಟೀಕಿಸುವವರನ್ನು ಬಿಡೋಣ. ಬಹು ಮುಖ್ಯವಾಗಿ ಇಂದು ಯಕ್ಷಗಾನ ಅಥವಾ ತಾಳಮದ್ದಲೆ ಹಾಳಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಮಂದಿ ಹಿರಿಯರು, ಈ ಕ್ಷೇತ್ರಗಳನ್ನು ಬಲ್ಲವರು ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟಿಸುತ್ತ ಇರುತ್ತಾರೆ. ಅವರು ಅದರ ಸೂಕ್ಷ್ಮಗಳನ್ನು ಅರಿತವರಾದುದರಿಂದ ಎಲ್ಲವೂ ತೀರಾ ಹಾಳಾಗಿ ಈಗಿನ ಪ್ರದರ್ಶನಗಳು ನೋಡುವ ಹಾಗಿಲ್ಲ ಎನ್ನುವ ಭಾವನೆ ಸಾರ್ವಜನಿಕವಾಗಿ ಉಂಟಾಗುತ್ತದೆ. ಇದರಲ್ಲಿ ಬಹುಮಟ್ಟಿಗೆ ನಿಜ ಇದ್ದೀತು. ಆದರೆ ಎಲ್ಲವೂ ನೂರಕ್ಕೆ ನೂರು ಹಾಳಾಗಿದೆಯೆ? ಹೌದಾದರೆ ಇಂತಹ ಕಲಾ ವಿಭಾಗವೊಂದು ಇರಬೇಕಾದರೂ ಯಾಕೆ? ಅಥವಾ ಇನ್ನೂ ಉಳಿದಿದೆ ಹೇಗೆ? ಇನ್ನು ಸರಿಪಡಿಸಲಾರದಷ್ಟು ಹಾನಿಯಾಗಿದೆಯೆ? ಹಾಗೇನಿಲ್ಲ. ಕಾಲಾಂತರದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಂಭವಿಸುವುದೇ ಇಲ್ಲಿಯೂ ಸಂಭವಿಸುತ್ತಿದೆ. ಸಿನೆಮಾ, ಸಾಹಿತ್ಯ, ನಾಟಕ ಇತ್ಯಾದಿ ಇತರ ಅಭಿವ್ಯಕ್ತಿಯ ಮಾಧ್ಯಮಗಳಲ್ಲೂ ಈ ಬಗೆಯ ಏರಿಳಿತಗಳನ್ನು ಗುರುತಿಸಬಹುದು. ಇಲ್ಲಿಯೂ ಅಷ್ಟೇ. ಚಕ್ರಗತಿಯಲ್ಲಿ ಕೆಳಗಿರುವುದು ಮೇಲಕ್ಕೂ, ಮೇಲಿರುವುದು ಕೆಳಗೂ ಸರಿಯುವುದು ಸ್ವಾಭಾವಿಕ. ಉತ್ಸರ್ಪಿಣೀ ಮತ್ತು ಅವಸರ್ಪಿಣೀ ಎರಡೂ ಉಂಟು. ಆದುದರಿಂದ ಕೆಟ್ಟಿದೆ ಎಂದು ಹೇಳುವಾಗ ಗಮನಿಸಬೇಕಾದ ಸಂಗತಿಗಳು ಬೇರೆಯೂ ಇರುತ್ತವೆ. ಒಂದಿಷ್ಟು ಉತ್ತಮ ಬೆಳವಣಿಗೆಗಳೂ ಆಗುತ್ತಿವೆ; ಕೆಲವು ಕಲಾವಿದರಾದರೂ ಶ್ರದ್ಧೆಯಿಂದ ತಮ್ಮ ಮಿತಿಯೊಳಗೆ ಉತ್ತಮ ರೀತಿಯ ಪ್ರದರ್ಶನಕ್ಕೆ ಪರಿಶ್ರಮಿಸುತ್ತಿದ್ದಾರೆ ಎನ್ನುವುದನ್ನೂ ಗಮನಿಸಬೇಡವೆ? ಹಾಗೆ ಶ್ರಮಿಸುವ ಕಲಾವಿದರನ್ನು ಗುರುತಿಸಿ ಉಲ್ಲೇಖಿಸುವ ಹೊಣೆಯು “ಕೆಟ್ಟಿದೆ’ ಎಂದು ಆರೋಪಿಸುವವರಿಗೂ ಇಲ್ಲವೆ? ಹೀಗೊಂದು ಮನೋಧರ್ಮದಿಂದ ಒಳ್ಳೆಯ ಕಲಾವಿದನನ್ನೋ, ಅರ್ಥಧಾರಿಯನ್ನೋ ಸಾರ್ವಜನಿಕವಾಗಿ ಮೆಚ್ಚಿ ಉಲ್ಲೇಖಿಸುವವರ ಸಂಖ್ಯೆ ತುಂಬ ವಿರಳ.
Related Articles
Advertisement
ರಾಧಾಕೃಷ್ಣ ಕಲ್ಚಾರ್