Advertisement

Yakshagana ಭಾಗವತ ತಾನೊಬ್ಬನೇ ಮೆರೆಯುವುದಲ್ಲ:ನಾರಾಯಣ ಶಬರಾಯ ಜಿ.ಎ.

11:58 AM Sep 04, 2024 | Team Udayavani |

ದಕ್ಷಿಣ ಕನ್ನಡ ಜಿಲ್ಲೆ ಆಗಿನ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿ 1958ರಲ್ಲಿ ಅನಂತರಾಮ ಶಬರಾಯ ಮತ್ತು ಜಯಲಕ್ಷ್ಮೀ ಅಮ್ಮನವರ ಪುತ್ರನಾಗಿ ಜನನ. ಅಂತಾರಾಜ್ಯ ಕಬಡ್ಡಿ ಆಟಗಾರನಾಗಿ, ಬಿ.ಎಸ್ಸಿ. ಪದವೀಧರನಾಗಿ ಆ ಕಾಲದಲ್ಲಿ ಯಕ್ಷಗಾನಕ್ಕೆ ಬಂದದ್ದೇ ಆಕಸ್ಮಿಕ ಹಾಗೂ ದಾಖಲೆ. ತೆಂಕುತಿಟ್ಟಿನ ವೇಷ ಮಾಡಿ ಸೈ ಎನಿಸಿದ್ದ ನಾರಾಯಣ ಶಬರಾಯರು ಕಾಳಿಂಗ ನಾವಡರ ಭಾಗವತಿಕೆಗೆ ಮನಸೋತು ಬಡಗುತಿಟ್ಟಿನೆಡೆಗೆ ವಾಲಿದರು.

Advertisement

ನಾವಡರ ಅಕಾಲಿಕ ಅಗಲುವಿಕೆಯಿಂದ ಉಂಟಾಗಿದ್ದ ನಿರ್ವಾತ ತುಂಬಲು ಅದೇ ರಂಗಮಂಚವೇರಿ ಜಯಭೇರಿ ಬಾರಿಸಿದ ಪ್ರಸಂಗಗಳನ್ನು ನಿರ್ದೇಶಿಸುವಂತಾದ್ದು ವಿಧಿಲಿಖಿತ. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿ, ಸದಾನಂದ ಐತಾಳ, ಕೆ. ಪಿ. ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ ಮುಂತಾದವರ ತರಬೇತಿಯಿಂದ ಸಮರ್ಥ ಭಾಗವತನಾಗಿ ರೂಪುಗೊಂಡರು.

1984ರಲ್ಲಿ ಭಾಗವತರಾಗಿ ಗೋಳಿಗರಡಿ ಮೇಳದಲ್ಲಿ ತಿರುಗಾಟ ಆರಂಭಿಸಿ, ಅಮೃತೇಶ್ವರಿ ಮೇಳ ಸೇರಿ, ಎಂಡೋ ಮೆಂಟ್‌ ಮೇಳವಾಗಿ ಆರಂಭವಾದ ವರ್ಷವೇ ಮಂದಾರ್ತಿ ಮೇಳದ (ಮೊದಲ ವೇಷ ಧಾರಿ)ಪ್ರಧಾನ ಭಾಗವತರಾಗಿ ಸೇರಿದರು. ಅನಂತರ ಕರ್ನಾಟಕ ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿ 1990ರಲ್ಲಿ ಕಾಳಿಂಗ ನಾವಡರ ಅಗಲುವಿಕೆಯಿಂದ ತೆರವಾದ ಸ್ಥಾನದಲ್ಲಿ ಸಾಲಿಗ್ರಾಮ ಮೇಳದಲ್ಲಿ ರಂಗನಿರ್ದೇಶನಕ್ಕೆ ತೊಡಗಿದರು. ವಿಷಮ ಸಮರಂಗ, ವರ್ಣ ವೈಷಮ್ಯ, ಶೃಂಗ ಸಾರಂಗ, ಮೇಘ ಮಯೂರಿ, ಸತ್ಯ ಸಂಗ್ರಾಮ, ಧರ್ಮಸಂಕ್ರಾಂತಿ ಸೇರಿದಂತೆ ವಿಶಿಷ್ಟ ಪ್ರಸಂಗಗಳ ನಿರ್ದೇಶನದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದರು. ಅಲ್ಲಿಂದ, ಹೊಸದಾಗಿ ಪ್ರಾರಂಭಗೊಂಡ ಸಾಲಿಗ್ರಾಮ ಮೇಳದ ಯಜಮಾನ ಕಿಶನ್‌ ಹೆಗ್ಡೆ ಅವರ ಮಂಗಳಾದೇವಿ ಮೇಳದ ಭಾಗವತರಾಗಿ ಮರಳಿ ತೆಂಕುತಿಟ್ಟನ್ನು ಪ್ರವೇಶಿಸಿದರು. ಬಾರ್ಕೂರ ಬಂಗಾರಿ, ನೀಲಾವರದ ನೀಲಾಂಬರಿ ಮುಂತಾದ ಪ್ರಸಂಗಗಳ ಮೂಲಕ ತೆಂಕಿನ ಭಾಗವತರಾಗಿಯೂ ಜನಪ್ರಿಯರಾದರು.

ಕರ್ನಾಟಕ ಮೇಳ, ಎಡನೀರು ಮೇಳ, ಮಂದಾರ್ತಿ ಮೇಳ, ಬಪ್ಪನಾಡು ಮೇಳದ ತಿರುಗಾಟ ಮಾಡಿ ಮೇಳ ತಿರುಗಾಟ ನಿಲ್ಲಿಸಿದ್ದಾರೆ. 4 ದಶಕದ ರಂಗಾನುಭವ. ಬೆಂಗಳೂರು ದೂರದರ್ಶನದಲ್ಲಿ, ವಿದೇಶದಲ್ಲಿ, ಚಂದ್ರಶೇಖರ ಕಂಬಾರರ ನಾಟಕದಲ್ಲಿ, ಅಖೀಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವತಿಕೆ ಮಾಡಿದ್ದಾರೆ. ನೂರಕ್ಕೂ ಅಧಿಕ ಆಡಿಯೋ, ವೀಡಿಯೋ ಕ್ಯಾಸೆಟ್‌ಗಳಿಗೆ ಇವರದ್ದೇ ಭಾಗವತಿಕೆ ಮತ್ತು ನಿರ್ದೇಶನ. ದಶಾವತಾರ ಹಾಗೂ ರಾಮಾಯಣ ಯಕ್ಷಗಾನ ಧಾರಾವಾಹಿ ಪ್ರದರ್ಶನವನ್ನೂ ನಿರ್ದೇಶಿಸಿದ್ದರು.

ಭಾಗವತನೇ ನಿರ್ದೇಶಕ ಎಂಬ ಪಟ್ಟ ಹೋಗಿದೆಯೇ, ಇದೆಯೇ?
ಕೆಲವು ಸಂದರ್ಭಗಳಲ್ಲಿ ಕಲಾವಿದರೇ ಭಾಗವತನನ್ನು ಕುಣಿಸುವಂತೆ ಆಗಿದೆ. ಭಾಗವತಿಕೆ ಸರಿಯಾಗಿ ಕಲಿತು, ಅದರ ಜ್ಞಾನ ಸಂಪಾದಿಸಿದ್ದರೆ ಅಂತಹ ಸನ್ನಿವೇಶ ಬರುವುದಿಲ್ಲ. ತಿಳಿವಳಿಕೆ ಬೇರೆಯವರಿಗೆ ಹೆಚ್ಚಿದ್ದರೂ ಭಾಗವತಿಕೆಯ ಸ್ಥಾನ ದೊಡ್ಡದು. ಶಿಕ್ಷಕನಿಗಿಂತ ವಿದ್ಯಾರ್ಥಿಗೆ ಹೆಚ್ಚು ಗೊತ್ತಿದ್ದರೂ ಇಬ್ಬರ ಪಾತ್ರಗೌರವವೂ ಬೇರೆ ತಾನೇ? ಜಿಲ್ಲಾಧಿಕಾರಿ ಎಷ್ಟೇ ಸಣ್ಣ ವಯಸ್ಸಿನವರಾದರೂ ಇತರ ಅಧಿಕಾರಿಗಳು ಅವರ ಹುದ್ದೆಗೆ ಗೌರವ ಕೊಡಲೇಬೇಕು ಅಲ್ಲವೇ?

Advertisement

ಸ್ಟಾರ್‌ ಕಲಾವಿದರು ಭಾಗವತರ ರಂಗ ನಿಯಂತ್ರಣದಲ್ಲಿ ಇಲ್ಲ ಎಂಬ ಅಪವಾದ ಇದೆ?
ತೆಂಕಿನಲ್ಲಿ ಈ ಕ್ರಮ ಮರೆಯಾಗಿಲ್ಲ. ನೆಲಬಿಟ್ಟಾದ ಕಲಾವಿದರು ಕೆಲವರಿಂದ ಇಂತಹ ಅಪವಾದ ಇದೆ. ಕೆಲವು ಸ್ಟಾರ್‌ಗಳು ಭಾಗವತರಿಗೇ ನಿರ್ದೇಶಿಸುವುದುಂಟು. ಕಾರ್ಯಕ್ರಮ ಹಾಳಾಗಬಾರದು, ಸಂಘಟಕರಿಗೆ ತೊಂದರೆಯಾಗಬಾರದು, ಪ್ರೇಕ್ಷಕರಿಗೆ ರಸಭಂಗ ಆಗಬಾರದು, ಪದ್ಯ ಎತ್ತುಗಡೆಯಲ್ಲಿ ಆಭಾಸ ಆಗಬಾರದು ಎಂದೇ ಹೊಂದಾಣಿಕೆಗೆ ಮಾತಾಡಿಕೊಳ್ಳಲಾಗುತ್ತದೆ. ಮುಮ್ಮೇಳ ಕಲಾವಿದರಿಗೆ ಅವರ ಪಾತ್ರದ ಜವಾಬ್ದಾರಿ ಮಾತ್ರ ಇರುತ್ತದೆ. ಭಾಗವತನಿಗೆ ಸಮಗ್ರ ಪ್ರಸಂಗದ ಹೊಣೆಗಾರಿಕೆ ಇರುತ್ತದೆ. ಅರ್ಥವನ್ನೂ ಹೇಳಿಕೊಡಬೇಕಾಗುತ್ತದೆ. ನಡೆಯನ್ನೂ ಕಲಿಸಬೇಕಾಗುತ್ತದೆ. ಕಲಾವಿದನ ಅಂತಃಸತ್ವವನ್ನು ಅರಿತು ಹೊರತೆಗೆದು ಅದಕ್ಕಷ್ಟೇ ಪುಷ್ಟಿ ನೀಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಆಟ ಮುಗಿಸುವ ಜವಾಬ್ದಾರಿ ಇರುತ್ತದೆ. ಚಪ್ಪಾಳೆ ಬೀಳುತ್ತದೆ ಎಂದು ಪದ್ಯ ಆಲಾಪಿಸುತ್ತಾ ಕೂರಲಾಗದು.

ವೇಷ ಹಂಚುವಿಕೆ ಭಾಗವತರ ಕೈಯಿಂದ ಜಾರುತ್ತಿದೆಯೇ?
ಕೆಲವೆಡೆ ಈಗ ಹಾಗಾಗಿದೆ. ನಾವಡರು ತೀರಿದ ಬಳಿಕ ನಾನು ಸಾಲಿಗ್ರಾಮ ಮೇಳ ಸೇರಿದಾಗ ಕಲಾವಿದರ ಕುರಿತು ಹೆಚ್ಚಿನ ಮಾಹಿತಿ ಇಲ್ಲದಿದ್ದಾಗ ಕಲಾವಿದರು, ಮೆನೇಜರ್‌ ಜತೆ ಸಮಾಲೋಚಿಸಿ ಪಟ್ಟಿ ಮಾಡುತ್ತಿದ್ದೆ. ಈಗ ಕೆಲವೆಡೆ ಮೆನೇಜರ್‌, ಮೇಳದ ಯಜಮಾನರು, ಸ್ಟಾರ್‌ ಕಲಾವಿದರು ಪಟ್ಟಿ ಮಾಡುವುದೂ ಉಂಟು! ದೊಡ್ಡ ಕಲಾವಿದ, ಸಣ್ಣ ಕಲಾವಿದ ಎಂದು ಇಲ್ಲ. ರಂಗದಲ್ಲಿ ಪಾತ್ರೌಚಿತ್ಯವಷ್ಟೇ ಮುಖ್ಯ. ಪಾತ್ರಕ್ಕೇ ಪ್ರಾಧಾನ್ಯ ವಿನಾ ಕಲಾವಿದನಿಗಲ್ಲ.

ನಾವಡರ ಸ್ಥಾನದ ನಿರ್ವಾತ ತುಂಬಲು ಕಷ್ಟವಾಗಲಿಲ್ಲವೇ?
ನಾವಡರು ಇರುವಾಗಲೇ ಸಹಭಾಗವತ ನಾಗಿ ಸಾಲಿಗ್ರಾಮ ಮೇಳದ ಯಜಮಾನ ಕಿಶನ್‌ ಹೆಗ್ಡೆಯವರು ಕರೆದಿದ್ದರು. ಹೋಗಿರಲಿಲ್ಲ, ಅವರ ಜಾಗದಲ್ಲೇ ಕೂರಬೇಕಾಗಿ ಬಂತು. ಕಿಶನ್‌ ಧೈರ್ಯ ನೀಡಿದ್ದರು. ಭಾಗವತಿಕೆಯೂ ತಿಳಿದಿದ್ದ ಮೆನೇಜರ್‌ ಎಂ.ಎಸ್‌. ಹೆಬ್ಟಾರ್‌ ಸಹಕಾರ ಸಿಕ್ಕಿತ್ತು. ಸಿದ್ದಾಪುರ ಅಶೋಕ್‌ ಭಟ್‌, ಶಿರಳಗಿ ತಿಮ್ಮಪ್ಪ ಮೊದಲಾದ ಕಲಾವಿದರ ಸಹಕಾರ ಇತ್ತು. ಮೇಳ ಎಂದರೆ ಒಬ್ಬನ ನಿಯಂತ್ರಣದಲ್ಲಿ ಇರುವುದು ಅಲ್ಲ. ಕಲಾವಿದರ ಸಂಘಟಿತ ಪ್ರಯತ್ನ. ಕಾಳಿಂಗ ನಾವಡರಿಗೆ ಒನ್‌ ಮ್ಯಾನ್‌ ಶೋ ಆಗಿ ಮೆರೆಯಲು ಅವಕಾಶ ಇದ್ದರೂ ಮೇಳದ ಚೌಕಟ್ಟಿನಲ್ಲಿ ಇದ್ದರು. ಎಲ್ಲರನ್ನೂ ಮೆರೆಸುತ್ತಿದ್ದರು. ಅದೇ ಪರಂಪರೆ ಮುಂದುವರಿಸಿದೆ.

ಟೆಂಟ್‌ ಮೇಳಗಳಿಂದ, ಕಾಲ್ಪನಿಕ ಕಥೆಗಳಿಂದ ಯಕ್ಷಗಾನ ಹಾಳು ಎಂಬ ಅಪವಾದ ಇದೆ?
ಪುರಾಣವಾಗಲೀ, ಸಾಮಾಜಿಕವಾಗಲೀ ಯಾವುದೇ ಯಕ್ಷಗಾನ ಪ್ರಸಂಗ ಒಂದು ಸಂದೇಶವನ್ನು ನೀಡಬೇಕು. ಮೌಲ್ಯವನ್ನು ಸಾರಬೇಕು. ಟೆಂಟ್‌ ಮೇಳಗಳ ಯಕ್ಷಗಾನವೇನೂ ಕಳಪೆ ಮಟ್ಟದಲ್ಲಿ ಇಲ್ಲ. ಗಲ್ಲಾಪೆಟ್ಟಿಗೆ ತುಂಬುತ್ತಿತ್ತು. ಯಕ್ಷಗಾನದ ಪರಂಪರೆ ತಿಳಿದ ಘಟಾನುಘಟಿ ಕಲಾವಿದರು ಇದ್ದರು. ಯಕ್ಷಗಾನದ ಚೌಕಟ್ಟು ಮೀರಿರಲಿಲ್ಲ. ಆರಾಧನಾ ಕಲೆಯಾದ ಯಕ್ಷಗಾನ ರಂಗಕಲೆಯೂ ಹೌದು ಎನ್ನುವುದನ್ನು ಮರೆಯಬಾರದು. ಸಮಾಜಕ್ಕೆ ಸಂದೇಶ ಸಾರುವ ಜವಾಬ್ದಾರಿ ಈ ಕಲೆಯ ಮೇಲಿದೆ. ನಾವಡರಂತಹ ಭಾಗವತರು ಯಾವುದೇ ಪ್ರಸಂಗ ಆದರೂ ಯಕ್ಷಗಾನದ ಚೌಕಟ್ಟು ಮೀರಿ ಹೋಗುತ್ತಿರಲಿಲ್ಲ.

ಜನಪದ, ಸಿನೆಮಾ ಹಾಡುಗಳ ಯಥಾವತ್‌ ಬಳಕೆ ಬಗ್ಗೆ?
ನೇರಾನೇರ ಬಳಕೆ ಸಲ್ಲದು. ರಾಗಗಳ ಬಳಕೆ ತಪ್ಪಲ್ಲ. ಸಂಗೀತದ ರಾಗಗಳನ್ನೇ ಬಳಸ ಬೇಕಾಗುತ್ತದೆ. ಆದರೆ ಅವು ಯಕ್ಷಗಾನದ ಮಟ್ಟಿನಲ್ಲಿ ಇರಬೇಕು. ಕಾಳಿಂಗ ನಾವಡರು ಹೊಸ ರಾಗಗಳನ್ನು ಹಾಕಿದಾಗಲೂ ಅದು ಯಕ್ಷಗಾನದ ಮಟ್ಟಿನಲ್ಲಿ ಇತ್ತು. ವಿರಹಾ ನೂರು ನೂರು ತರಹ ಎಂಬ ಗೀತೆಯ ರಾಗ ವಾದ ಶುದ್ಧಧನ್ಯಾಸಿ (ಭೀಮ್‌ ಪಲಾಸ್‌) ನಿಂದ ಸಂಕ್ರಾಂತಿ ಧರ್ಮ ಸಂಕ್ರಾಂತಿ ಎಂಬ ರಾಗ ಸಂಯೋಜನೆ ಮಾಡಿದ್ದೇನೆ. ಆದರೆ ಎಲ್ಲಿಯೂ ಸಿನೆಮಾದ ಗಾಳಿ ಸೋಂಕಿಲ್ಲ. ಈಗ ಕೆಲವು ಹಾಡುಗಳು ನೇರ ಸಿನೆಮಾ, ಜನಪದ ಹಾಡುಗಳಂತೆಯೇ ಕೇಳುತ್ತದೆ. ತೆಂಕಿನಲ್ಲಿ ಬಲಿಪರು, ಅಗರಿ ಯವರ ಮಾದರಿಯ ಪರಂಪರೆಯ ಹಾಡು ಗಾರಿಕೆಯೇ ಮರೆಯಾಗುತ್ತಿದೆ.

ಇಡೀ ರಾತ್ರಿಗೆ ಒಬ್ಬನೇ ಭಾಗವತ ಹೋಗಿ ಐದು ಆಗಿದೆ?
ಭಾಗವತರಿಗೆ ರಂಗಾನುಭವದ ತಿಳಿವಳಿಕೆ ಕೊರತೆ ಉಂಟಾಗುತ್ತದೆ. ಇಡೀ ಪ್ರದರ್ಶನ ನೋಡಿ ರಂಗನಡೆ ಕಲಿತಿರಬೇಕು. ಯಾವ ಸನ್ನಿವೇಶದಲ್ಲಿ ಸೂಕ್ತ ರಾಗಗಳ ಬಳಕೆ ತಿಳಿದಿರಬೇಕು. ತಾನೊಬ್ಬನೇ ಮೆರೆಯುವುದಲ್ಲ ಎಂಬ ಸ್ವಸ್ವರೂಪ ಜ್ಞಾನ ಇರಬೇಕು. ತನ್ನ ಪ್ರದರ್ಶನದ ಭಾಗ ಮಾತ್ರ ನೋಡಿಕೊಂಡರೆ ಸಾಲದು. ಸಮಗ್ರ ಪ್ರಸಂಗದ ಪ್ರದರ್ಶನದ ಮಾಹಿತಿ ಇರಬೇಕು. ಭಾಗವತರು ಜಾಸ್ತಿ ಯಾದರೆ ಕೆಲವು ಸಲ ಆಟ ಕಲಸುಮೇಲೋ ಗರವಾಗುತ್ತದೆ. ಹಿಂದಿನವರು ಮಾಡಿಟ್ಟ ಚೌಕಟ್ಟು ಭಂಗವಾಗುತ್ತದೆ.

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next