Advertisement
ಯಕ್ಷ ಪರಂಪರೆಯಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಪೌರಾಣಿಕ ಪ್ರಸಂಗಗಳ ಪಾತ್ರಗಳು ತನ್ನದೇ ಆದ ಕಲ್ಪನೆ ಮತ್ತು ವಿಶಿಷ್ಟತೆಗಳೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದವು. ಬಣ್ಣದ ವೇಷಧಾರಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿತ್ತು. ಗೌರವದ ಸ್ಥಾನಮಾನವನ್ನೂ ನೀಡಲಾಗಿತ್ತು.ಅದೇ ರೀತಿ ಕಿರಾತ ವೇಷಗಳಿಗೂ ಬಡಗುತಿಟ್ಟಿನಲ್ಲಿ ವಿಭಿನ್ನತೆ ಮತ್ತು ಪ್ರಾಧಾನ್ಯತೆ ಇತ್ತು.
Related Articles
Advertisement
ವಿಶೇಷವಾಗಿ ಕೆಂಪು ಕೋರೆ ಮುಂಡಾಸಿನ , ಕಣ್ಣಿನ ಸುತ್ತಲೂ ಕೆಂಪು ಬಣ್ಣ ಎದ್ದು ಕಾಣುವಂತೆ ಮೇಕಪ್, ಮಾವಿನ ಸೊಪ್ಪು ಕಟ್ಟಿಕೊಂಡು ಕಾಡಾ ಡಿಯಂತೆ ಕಾಣಿಸಿಕೊಳ್ಳುವುದು ವಿಶೇಷ. ಪಾತ್ರಕ್ಕೆ ಒಡ್ಡೋಲಗದ ಅವಕಾಶವನ್ನೂ ರಂಗದಲ್ಲಿ ನೀಡಲಾಗಿದೆ. ಪ್ರತ್ಯೇಕತೆಯನ್ನೂ ನೋಡಲು ಭಾಷಾ ಭಿನ್ನತೆಯೂ ಪಾತ್ರಕ್ಕಿದೆ. ಲೆಲೆಲೆಲೆಲೆ…ಎಂದು ಕೂಗುತ್ತಾ ರಂಗ ಪ್ರವೇಶಿಸುವುದು ಕ್ರಮವಿದೆ. ಹಿಂದೆ ಕಿರಾತ ಪ್ರವೇಶದ ವೇಳೆ ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಸುತ್ತು ಬರುವ ಕ್ರಮವೂ ಇತ್ತು ಎನ್ನುವುದು ಹಿರಿಯ ಪ್ರೇಕ್ಷಕರು ಮತ್ತು ಕಲಾವಿದರ ನೆನಪು.
ಕಿರಾತ ಪಡೆ ಎನ್ನುವ ಹಾಗೆ ಬಾಲ ಕಲಾವಿದರು ಜತೆಯಾಗಿ ರಂಗದಲ್ಲಿ ಬೇಟೆ ಮೊದಲಾದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಹಾಸ್ಯ ರಸಾಯನವನ್ನೂ ಉಣಬಡಿಸಲು ಅವಕಾಶವಿದೆ.
ಕಿರಾತ ಪಾತ್ರಗಳಿಗೆ ಬಡಗುತಿಟ್ಟಿನಲ್ಲಿ ಹಾರಾಡಿ ಮಹಾಬಲ ಗಾಣಿಗರು ಪರಿಪೂರ್ಣ ನ್ಯಾಯ ಒದಗಿಸಿ ಪ್ರಖ್ಯಾತಿಯನ್ನು ಪಡೆದಿದ್ದರು ಎಂದು ಹಿರಿಯ ಕಲಾವಿದರು ನೆನಪಿಸಿಕೊಳ್ಳುತ್ತಾರೆ. ಪೇತ್ರಿ ಮಾಧವ ನಾಯ್ಕ್ ಸೇರಿ ಇನ್ನೂ ಅನೇಕರು ಕಿರಾತ ಪಾತ್ರಗಳಿಗೆ ಜೀವ ತುಂಬಿದ ಹಿರಿಯ ಕಲಾವಿದರು. ಹಿಂದಿನ ಪರಂಪರೆಯ ಪರಿಪೂರ್ಣ ಮುಖವರ್ಣಿಗೆಯೊಂದಿಗೆ, ಕೋರೆ ಮುಂಡಾಸಿನೊಂದಿಗೆ ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳ ಅವರು ಪಾತ್ರಕ್ಕೆ ಜೀವ ತುಂಬುವ ಕಲಾವಿದರಲ್ಲಿ ಒಬ್ಬರು.
ವಿಶೇಷವಾಗಿ ಜೋಡಾಟದಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಕಿರಾತ ವೇಷವನ್ನು ಜೋಡಿ ಮುಂಡಾಸು ಕಟ್ಟಿ ಪ್ರಸ್ತುತಪಡಿಸುವ ಕ್ರಮವಿದೆ. ಅದು ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಬುಕ್ಕಿಗುಡ್ಡೆ ಮಹಾಬಲ ನಾಯ್ಕ್ ಅವರು ಜೋಡಿ ಮುಂಡಾಸಿನ ಕಿರಾತ ಪಾತ್ರವನ್ನು ಅಮೋಘವಾಗಿ ಪ್ರಸ್ತುತಪಡಿಸುವ ಅನುಭವಿ ಕಲಾವಿದರು.
ಬಡಗು ತಿಟ್ಟು ರಂಗದಿಂದ ಮರೆಯಾಗುತ್ತಿರುವ ಹಲವು ಪಾತ್ರಗಳಲ್ಲಿ ನೈಜ ಚಿತ್ರಣದ ಕಿರಾತ ಪಾತ್ರವೂ ಒಂದು. ಈ ಕುರಿತಾಗಿ ಕಲಾವಿದರು ವಿಶೇಷ ಆಸಕ್ತಿ ವಹಿಸಿ ಪಾತ್ರಗಳ ನೈಜತೆ ಉಳಿಸಿಕೊಳ್ಳಬೇಕಾಗಿರುವುದು ಸದ್ಯದ ಅಗತ್ಯತೆ.