Advertisement

ಕಳಚಿದ ರಾಜವೇಷ ಪರಂಪರೆಯ ಸುದೃಢ ಕೊಂಡಿ

12:23 AM Jul 15, 2021 | Team Udayavani |

ಕರಾರುವಾಕ್ಕಾಗಿ ಮದ್ದಲೆಗಾರರ ಕಡೆಗೆ ಮುಖ ಬರುವಂತೆ ಹುರಿಗಟ್ಟಿದ ಕಟ್ಟುಮಸ್ತಾದ ದೇಹವನ್ನು ಅಣಿಗೊಳಿಸಿ, ಲಾಘವದಿಂದ ಎರಡೂ ಕಾಲುಗಳನ್ನು ಮಡಚಿ ಎತ್ತಿ ಪರಿಪೂರ್ಣ ವೃತ್ತಾಕೃತಿಯ ಧೀಂಗಿಣ ಹಾರುವ ವೇಷವೊಂದರ ಪರಿಪೂರ್ಣ ಸೊಗಸಿಗೆ ಅಪ್ಪಟ ಮಾದರಿಯಾಗಿದ್ದಂತಹ ನಮ್ಮ ಪ್ರೀತಿಯ ಶೀನಣ್ಣರ ನಿರ್ಗಮನದೊಂದಿಗೆ ಪುರಾಣ ಪ್ರಪಂಚದ ಘಟಾನುಘಟಿಗಳೆನಿಸಿದ ಭಾನುಕೋಪ, ಹಿರಣ್ಯಾಕ್ಷ, ಇಂದ್ರಜಿತು, ಲೋಹಿತನೇತ್ರ, ರುಕ್ಮ, ಶಿಶುಪಾಲ, ಕೌಂಡ್ಲಿಕ, ರಕ್ತಬೀಜ, ಅರ್ಜುನ, ತಾಮ್ರಧ್ವಜ, ವೀರ ವರ್ಮ ಮೊದಲಾದವರೆಲ್ಲ ತಣ್ಣಗಾಗಿ ಹೋದರು! ಚೆಂಡೆಮದ್ದಲೆ ವಾದಕರ ಕೈ ಸೋಲುವಂತೆ, ಭಾಗವತರಿಗೆ ತಾವು ಎತ್ತಿ ಹಾಡಿದ ಪದ್ಯದ ರಭಸ ಸಾಕಾಗಲಿಲ್ಲ ವೆಂಬ ಅತೃಪ್ತಿ ಮೂಡುವಂತೆ ಯಕ್ಷಗಾನದ ರಂಗಸ್ಥಳವನ್ನು ತನ್ನ ಪ್ರಾಮಾಣಿಕ ಮೈ ಚಳಿ ಬಿಟ್ಟ ಅಸಾಧಾರಣ ಓಘ, ವೇಗಗಳ ಮೂಲಕ ಬಿಸಿಯಾಗಿರಿಸಿ ಸುತ್ತಿದ ರಾಜವೇಷದ ಗಂಡುಗಲಿಯಂತಿದ್ದ ಸಂಪಾಜೆ ಶೀನಪ್ಪ ರೈಗಳು ತೆರವಾಗಿಸಿದ ಜಾಗವನ್ನು ತುಂಬಬಲ್ಲ ಸಮರ್ಥರು ಭವಿಷ್ಯದಿಂದೆದ್ದು ಬರಬೇಕೇನೊ ಎನ್ನುವಷ್ಟರ ಮಟ್ಟಿಗೆ ಯಕ್ಷಗಾನದ ವರ್ತಮಾನವನ್ನು ಇವರು ದಟ್ಟವಾಗಿ ಪ್ರಭಾವಿಸಿದ್ದರು.

Advertisement

ಬಹುಶೈಲಿಯ ಬಣ್ಣ, ವೇಷ, ಅಭಿನಯಗಳ ವೇಷ ಧಾರಿಗಳು ಕಿಕ್ಕಿರಿದಿರುವ ಯಕ್ಷಗಾನ ರಂಗಭೂಮಿಯ ಸುದೀರ್ಘ‌ ಪರಂಪರೆಯಲ್ಲಿ ಶೀನಪ್ಪ ರೈಗಳದ್ದೊಂದು ವಿಭಿನ್ನ, ಬಿಡುಬೀಸಿನ, ಕಡು ಬಿಸಿಯ, ಪರಿಪೂರ್ಣ ಪರಕಾಯ ಪ್ರವೇಶದ ವೇಷ ಕ್ರಮ.

ಕಲ್ಲುಗುಂಡಿ (ಸಂಪಾಜೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದ ತುದಿಗೆ ಬಂದು ನಿಂತರೆ ಸವೇರಪುರ ಚರ್ಚ್‌ನ ದ್ವಾರದವರೆಗಿನ ದೃಶ್ಯ ತೆರೆದು ಕಾಣಿಸುವುದು. ರಾಜರಸ್ತೆಗೆ ಎಟಕು ದೂರದಲ್ಲಿರುವ ಈ ಪ್ರಸಿದ್ಧ ಕನ್ನಡ ಶಾಲೆಯಲ್ಲಿ 1976ರಲ್ಲಿ ನಾನು ಆರನೇ ತರಗತಿಯ ವಿದ್ಯಾರ್ಥಿ. ನಮ್ಮ ಶಾಲೆ ಮೈದಾನ ಸಂಜೆ 7 ರ ಬಳಿಕ ಬಯಲಾಟದ ಭಂಡಸಾಲೆಯಾಗಿರುತ್ತಿದ್ದ ದಿನಗಳೇ ಅಧಿಕ. ಆಗ ತಿರುಗಾಟದಲ್ಲಿದ್ದ ತೆಂಕು ಹಾಗೂ ಬಡಗುತಿಟ್ಟಿನ ಬಹುತೇಕ ಮೇಳಗಳು ಕಲ್ಲುಗುಂಡಿಯ ಹೊರ ಮತ್ತ ಒಳನಾಡುಗಳ ಬೀದಿಗಳಲ್ಲಿ “ಬನ್ನಿರಿ, ನೋಡಿರಿ ಒಂದೇ ಒಂದು ಆಟ’ ಎಂದು ಮೈಕ್‌ ಕಟ್ಟಿದ ಜೀಪು ಓಡಿಸದೆ ಉಳಿದುದಿಲ್ಲ.

ವೃತ್ತಿಪರರಂತೇ ಹವ್ಯಾಸಿಗಳೂ ಇಲ್ಲಿನ ನೆಲವನ್ನು ವರ್ಷದಲ್ಲಿ ಹಲವು ಸಲ ರಂಗಸ್ಥಳವನ್ನಾಗಿಸುತ್ತಿದ್ದರು. ಸುಪ್ರಸಿದ್ಧ ಕೀಲಾರು ಮನೆತನದ ನಂಟು ಹೊಂದಿದ್ದ ಹಲವು ಕುಟುಂಬಗಳ ಪೈಕಿ ರಾಮಣ್ಣ ರೈಗಳದ್ದು ಒಂದು. ಆಸಕ್ತರಿಗೆ ಕಲಿಸುವಷ್ಟು ಯಕ್ಷಕಲೆಯನ್ನು ಮೈಗೂಡಿಸಿಕೊಂಡು ಆಸುಪಾಸಿನಲ್ಲಿ ವಿಶಿಷ್ಟ ಶೈಲಿಯ ಅರ್ಥಧಾರಿಗಳೆಂದು ಗುರುತಿಸಿಲ್ಪಡುತ್ತಿದ್ದ ಇವರ ಮೂರು ಗಂಡು ಮತ್ತು ಈರ್ವರು ಹೆಣ್ಣು ಮಕ್ಕಳಲ್ಲಿ ಹಿರಿಯರು ಶೀನಪ್ಪ ರೈ ಸಂಪಾಜೆ. ತಮ್ಮ ತೀರ್ಥರೂಪರ ಪ್ರೋತ್ಸಾಹ, ಬೆಂಬಲದಿಂದ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಶೀನಪ್ಪ ರೈ ಪ್ರತಿಯೊಂದೂ ವೇಷಕ್ಕೆ ವಿಭಿನ್ನ ಸ್ವರೂಪ, ಮತ್ತದನ್ನು ಗೆಲ್ಲಿಸುವ ವೇಗದೊಂದಿಗೆ ಪಾತ್ರಾಧ್ಯಯನದ ಆಸಕ್ತಿಯನ್ನೂ ಹೊಂದಿದ್ದರಿಂದಾಗಿ ಯಕ್ಷರಂಗದ ಮೇರು ಕಲಾವಿದರಾಗಿ ಮೆರೆದರು.

ತೋಳಿನವರೆಗೆ ಮಡಚಿದ ಬಿಳಿ ಬಣ್ಣದ ಶರ್ಟ್‌, ಇದರ ಮೇಲೊಂದು ಬಿಳಿ ಶಾಲು, ಬದಿಗೆ ರಂಗು ಲೇಪಿಸಿದಂತಿರುವ ಪಟ್ಟಿ ಇರುವ ಪಂಚೆ, ಒಪ್ಪವಾಗಿ ಬಾಚಿ ಹಿಂಬದಿಗೆ ಸುತ್ತಿದ ಕಿರುಶಿಖಗಳಿಂದೊಪ್ಪುವವರು ಶೀನಪ್ಪ ರೈ. ಅವರದೋ ರಾತ್ರಿಯ ಭಾನುಕೋಪನ ಹಗಲ ನಡಿಗೆ! ಹರವಾದ ಸಪಾಟು ಮೈಯಲ್ಲಿ ಎದ್ದು ಕಾಣಿಸುವ ಎದೆಯನ್ನು ಮುಂದೊತ್ತುತ್ತಾ ಸುಪುಷ್ಠ ತೋಳುಗಂಟಿದ ನೀಳ ಬಾಹುಗಳನ್ನು ಬೀಸಿಕೊಂಡು ದಾಪುಗಾಲಿರಿಸಿ ನಡೆದು ಬರುವ ದಾರಿಯಿಂದ ಹೊರಳುವಾಗ ಸಿಗುವ ಕಿರುಸೇತುವೆ ದಾಟಿ ತಮ್ಮ ಕರ್ಮಭೂಮಿಯಾದ ಬಾಚಿಗದ್ದೆ ಹಸುರುಭೂಮಿಗೆ ನಮಿಸಿ ಮನೆಗೆ ಬಂದು ಬಟ್ಟೆ ಬದಲಿಸಿ ಕೆಲಸದ ಬಟ್ಟೆ ತೊಟ್ಟು ಮನವರಿತು ನಡೆದುಕೊಳ್ಳುವ ಧರ್ಮಪತ್ನಿ ಗಿರಿಜಕ್ಕ ಹೊತ್ತು ಮೀರದೆ ಬಡಿಸಿದ ಉಪಾಹಾರ ಮುಗಿಸಿ ನೇರವಾಗಿ ಗದ್ದೆಗಿಳಿಯುವರು. ಎತ್ತು ಕಟ್ಟಿ ಉಳುಮೆಗೂ ಸೈ, ಗುದ್ದಲಿ ಮತ್ತು ಹಾರೆಗಳೊಂದಿಗೆ ತೋಟದಲ್ಲಿ ಕೆಲಸ ಮಾಡಲು ಸಿದ್ಧ ಎನ್ನುವಂತಿದ್ದವರು ಆಯಾ ದಿನದ ಕೆಲಸವನ್ನು ಅಂದೇ ಮುಗಿಸುವರು. ಮಧ್ಯಾಹ್ನ ಮನೆ ಸೇರಿ ಸ್ನಾನ, ಊಟ ಮುಗಿಸಿ ತನ್ನನ್ನು ಎಬ್ಬಿಸಬೇಕಾದ ವೇಳೆ ಸೂಚಿಸಿ ಕಿರು ನಿದ್ರೆಗೈಯುವರು. ನಿಗದಿತ ಸಮಯಕ್ಕೆ ಎದ್ದವರು, ಗಿರಿಜಕ್ಕ ಅಣಿಗೊಳಿಸಿದ ಸರಂಜಾಮುಗಳೊಂದಿಗೆ ಮತ್ತೆ ಚರ್ಚ್‌ ಸಮೀಪ ಬಸ್‌ ಹಿಡಿದು ಆ ದಿನದ ಆಟದ ಊರಿಗೆ ಪಯಣಿಸುವರು. ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸುವಾಗ ಆಲಸ್ಯವೇನೆಂದೇ ತಿಳಿಯದೆ ಬೆವರು ಸುರಿಸುತ್ತಿದ್ದ ಶೀನಣ್ಣ ಓರ್ವ ಆದರ್ಶ ಕೃಷಿಕರಾಗಿ ತಮ್ಮ ಪ್ರೀತಿಯ ಗೇಣಿ ಭೂಮಿಯಲ್ಲಿ ಕಡು ಕಠಿನ ಕಾಯಕದಿಂದ ಶ್ರಮಜಲ ಸುರಿಸುತ್ತಿದ್ದರು. ಶೀನಪ್ಪಣ್ಣನ ಬಳಿ ವ್ಯರ್ಥಗೊಳಿಸುವ ಸಮಯವೆಂಬುದೇ ಇರುತ್ತಿರಲಿಲ್ಲ.

Advertisement

ರಂಗಸ್ಥಳ ಹಾಗೂ ಕೃಷಿಭೂಮಿಗಳೆರಡರಲ್ಲೂ ಕಠಿನ ಪರಿಶ್ರಮಿ ಎನಿಸಿದ ಶೀನಪ್ಪ ರೈಗಳಿಗೆ ಈ ಕಾರಣದಿಂದಲೇ ವ್ಯಾಯಾಮ ಶಾಲೆಯಲ್ಲಿ ಅಂಗ ಸಾಧನೆ ಮಾಡಿವರಿಗೆ ದಕ್ಕುವ ಮೈಕಟ್ಟು, ತ್ರಾಣಗಳು ಪ್ರಾಪ್ತಿಸಿದ್ದವು. ಆಯಾಸವೆಂಬುದನ್ನೇ ತಿಳಿಯದ ಇವರು ನಿರ್ವಹಿಸುತ್ತಿದ್ದ ವೇಷಗಳನ್ನು ಗಮನಿಸಿದರೆ ಹಗುರವಾಗಿ, ನಾಜೂಕಿನಿಂದ, ದಣಿವಾಗದ ಕೌಶಲದಿಂದ ಪಾತ್ರ ನಿರ್ವಹಿಸುವುದರ ಬದಲಿಗೆ ದೇಹ ಬಲದಿಂದ ಸರ್ವ ಸಮರ್ಪಣ ಭಾವದ ದುಡಿಮೆಯಿಂದ ಪಾತ್ರ ಸ್ವಭಾವವನ್ನು ಚಿತ್ರಿಸುವುದನ್ನು ಗುರುತಿಸಬಹುದಾಗಿತ್ತು. ಕಲ್ಲುಗುಂಡಿಯಲ್ಲಿ ಪ್ರತೀ ವರ್ಷ ಆಯೋಜಿಸಲಾಗುವ ಯಕ್ಷಗಾನಾಭಿಮಾನದ ಪ್ರತೀಕವಾದ ಯಕ್ಷೋತ್ಸವದ ಹಿಂದಿನ ಎರಡು ದಿನಗಳಲ್ಲಿ ಕೆಲಸ ಕಾರ್ಯಗಳಿಗಾಗಿ ಟೊಂಕ ಕಟ್ಟುತ್ತಿದ್ದ ಶೀನಪ್ಪಣ್ಣ ಹಗಲು-ರಾತ್ರಿ ಎಂಬ ವ್ಯತ್ಯಾಸಗಳಿಲ್ಲದೆ ದುಡಿಯುತ್ತಿದ್ದರು. ದಣಿದಿದ್ದರೂ ಬಯಲಾಟದಲ್ಲಿ ಸೂಚಿಸಲಾದ ವೇಷವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು.

ಶೀನಪ್ಪ ರೈ ಅವರ ವಿಯೋಗದಿಂದ ಸುಬಲ ಕಿರೀಟ ವೇಷ ಪರಂಪರೆಯ ಸುದೃಢ ಕೊಂಡಿಯೊಂದು ಕಳಚಿಕೊಂಡಂತಾಯಿತು. ವಿಶಿಷ್ಠ ಪ್ರವೇಶ ಕ್ರಮ, ಎದೆ ಸೆಟೆಸಿ ರಂಗಸ್ಥಳದಲ್ಲಿ ಚಲಿಸುವ ಪ್ರತ್ಯೇಕ ವಿಧಾನ, ಎರಡೂ ಕಾಲುಗಳನ್ನೆತ್ತಿ ಧೀಂಗಿಣ ಹಾಕುವ ವರಸೆ, ಕಿವಿಗಪ್ಪಳಿಸುವ ಗಡಸು ಸ್ವರ, ದೇಹ ಕಸುವನ್ನು ಅವಲಂಬಿಸಿ ಕೈಗೊಳ್ಳುತ್ತಿದ್ದ ರಂಗ ದುಡಿಮೆಗಳೇ ಮೊದಲಾದ ಸ್ವಂತ ಹಾಗೂ ವಿಭಿನ್ನ ಸ್ವರೂಪಗಳಿಂದ ಸುದೀರ್ಘಾವಧಿ ಜನಪ್ರಿಯ ಮತ್ತು ಸಾಂಸ್ಕೃತಿಕ ಪರಂಪರೆಯೊಂದರ ಪ್ರಾಮಾಣಿಕ ಪರಿಚಾರಕರಾಗಿ ಮೆರೆದ ಸಂಪಾಜೆ ಶೀನಪ್ಪ ರೈಗಳು ಅಸಂಖ್ಯ ಅಭಿಮಾನಿಗಳ ಹೃದಯ ರಂಗಸ್ಥಳದಲ್ಲಿ ಬಹುಕಾಲ ಅವಿಶ್ರಾಂತ ಧೀಂಗಿಣ ಹಾಕುತ್ತಾ ನೆನಪುಗಳಿಂದಲೇ ರೋಮಾಂಚನಗೊಳಿಸುತ್ತಾ ಸ್ಥಾಯಿಯಾಗಿಯೇ ಉಳಿದಿರುತ್ತಾರೆ. ನಮ್ಮ ಹೃನ್ಮಮನಗಳನ್ನರಳಿಸಿ ರೋಚಕ ಸ್ಮರಣೆಗಳನ್ನುಳಿಸಿ ಇಹಲೋಕದಿಂದ ವಿರಮಿಸಿದ ಶೀನಪ್ಪಣ್ಣನ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ.

– ಜಬ್ಟಾರ್‌ ಸಮೋ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next