ಉಡುಪಿ : ಕೊರೊನ ನಿರ್ಬಂಧಗಳಿಂದಾಗಿ ಯಕ್ಷಗಾನ ಕಲಾವಿದರ ಸಂಕಷ್ಟ ಹೇಳತೀರದ್ದಾಗಿದ್ದು, ಶುಕ್ರವಾರ ಮಣಿಪಾಲ ದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ನೂರಾರು ಯಕ್ಷಗಾನ, ರಂಗಭೂಮಿ ಕಲಾವಿದರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ರಾತ್ರಿ ನಡೆಯಬೇಕಾಗಿದ್ದ ಪ್ರದರ್ಶನಗಳು ನಿರ್ಬಂಧಗಳಿಂದಾಗಿ ನಡೆಸಲು ಸಾಧ್ಯವಾಗುತ್ತಿಲ್ಲ,ಹಲವು ಬಯಲಾಟ ಮೇಳಗಳು ರಾತ್ರಿ ಪ್ರದರ್ಶನಗಳನ್ನು ನಡೆಸುತ್ತಿದ್ದು, ಅಭಿಮಾನಿಗಳ ಸಹಕಾರದಿಂದ ಪ್ರದರ್ಶನಗಳನ್ನು ನಡೆಸಲಾಗುತ್ತಿತ್ತು. ಈಗ ಅವಧಿ ಕಡಿತಗೊಂಡಿರುವ ಹಿನ್ನಲೆಯಲ್ಲಿ ಮೇಳಗಳು ನಷ್ಟಕ್ಕೆ ಜಾರಿದ್ದು, ಕಲಾವಿದರೂ ಪರಿಣಾಮ ಎದುರಿಸಬೇಕಾಗಿದೆ.
ವಾರಾಂತ್ಯದ ಲಾಕ್ ಡೌನ್ ವೇಳೆ ಮತ್ತು ನಿತ್ಯವೂ ಕನಿಷ್ಠ ರಾತ್ರಿ 12 ಗಂಟೆಯ ವರೆಗೆ ಪ್ರದರ್ಶನಗಳನ್ನು ನಡೆಸಲು ಸರಕಾರ ಅನುವು ಮಾಡಿ ಕೊಡ ಬೇಕು. ಮೇಳಗಳು ತಿರುಗಾಟ ಆರಂಭಿಸಿ ತಿಂಗಳ ಒಳಗೆ ಸಂಕಷ್ಟ ನಿರ್ಮಾಣ ವಾಗಿದ್ದು, ಸರಕಾರ ಕೂಡಲೇ ನಿರ್ಬಂಧಗಳನ್ನು ಸಡಿಲ ಮಾಡಿ ಕಲಾವಿದರ ಜೀವನಕ್ಕೆ ನೆರವಾಗಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದರು.
ಯುವ ಕಲಾವಿದರ ಆಕ್ರೋಶ
ಕಳೆದ ಎರಡು ವರ್ಷಗಳಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ 35 ವರ್ಷ ಮೇಲ್ಪಟ್ಟ ಕಲಾವಿದರಿಗೆ ಅಲ್ಪ ನೆರವು ನೀಡಿದೆ, ನಮಗೆ ಯಾವ ನೆರವನ್ನೂ ನೀಡಿಲ್ಲ. ಈಗ ಪ್ರದರ್ಶನಗಳಿಗೆ ಅನುವು ಮಾಡಿ ಕೊಟ್ಟು ಸರಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಕಲಾವಿದರ ಮನವಿಯನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಹಲವು ಯಕ್ಷಗಾನ, ರಂಗಭೂಮಿ ಕಲಾವಿದರು, ಪ್ರಸಾದನ ತಂಡದ ಸದಸ್ಯರು, ಯಕ್ಷ ಸಂಘಟಕರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು.