Advertisement

ಅಸ್ತಂಗತರಾದ ಅಸಾಮಾನ್ಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ

01:19 AM Jan 17, 2020 | mahesh |

ದಶಕಗಳ ಕಾಲ ಬಡಗುತಿಟ್ಟು ರಂಗಸ್ಥಳವನ್ನು ಆಳಿದರೂ ಬಳಿಕ ಗೋಡೆಯೂ ಇಲ್ಲದ ಮುರುಕುಲು ಗುಡಿಸಿಲಿನಲ್ಲಿ ವಾಸವಾಗಿ, ಮಲಗಿದಲ್ಲಿಯೇ ಕಳೆಯುವ ಸ್ಥಿತಿಯಲ್ಲಿದ್ದ ಮೇರು ಕಲಾವಿದ ಕೊಪ್ಪಾಟೆ ಮುತ್ತ ಗೌಡರು ಇಹಲೋಕ ತ್ಯಜಿಸಿದ್ದಾರೆ. 49 ವರ್ಷ ತಿರುಗಾಟ ಮಾಡಿದ ಮುತ್ತ ಗೌಡರು 36 ವರ್ಷ ಎರಡನೇ ವೇಷದಾರಿಯಾಗಿ ಮೆರೆದವರು. 21 ವರ್ಷ ಮಾರಣಕಟ್ಟೆ ಮೇಳವೊಂದರಲ್ಲೇ ದುಡಿದ ಇವರು ಸುಮಾರು 9 ವರ್ಷ ಅಲ್ಲಿಯೇ ಎರಡನೇ ವೇಷಧಾರಿಯಾಗಿದ್ದ‌ರು.ಅನಂತರ ಸಾಲಿಗ್ರಾಮ,ಪೆರ್ಡೂರು ಇಡಗುಂಜಿ, ಕಳವಾಡಿ, ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿದ ಅವರು ಕೊನೆಯ ಒಂದುವರ್ಷ ಸೌಕೂರು ಮೇಳದಲ್ಲಿ ನಿರ್ವಹಿಸಿದ ರುಕ್ಮಾಗದ ಚರಿತ್ರೆಯ ವ್ರತದ ರುಕ್ಮಾಗದನ ಪಾತ್ರ ವಾಕ್ಪಟುತ್ವದಿಂದ ಜನಪ್ರಿಯವಾಗಿತ್ತು.

Advertisement

ಆಲೂರು ಗ್ರಾಮದ ಕೊಪ್ಪಾಟೆ ಎಂಬಲ್ಲಿ ಬೆಳೆದದ್ದರಿಂದ ಇವರಿಗೆ ಕೊಪ್ಪಾಟೆ ಎಂಬುದೇ ಜನಜನಿತ ಹೆಸರಾಯಿತು. ಬಾಲ್ಯದಿಂದಲೇ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡ ಇವರು ಕಲಿತದ್ದು ಕೇವಲ 3ನೇ ತರಗತಿ. ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳದ ಜೋಡಾಟವನ್ನು ರಾತ್ರಿಯಿಡೀ ನೋಡಿದ ಗೌಡರು ಗುರು ವೀರಭದ್ರ ನಾಯಕ್‌ ಮತ್ತು ಶಿರಿಯಾರ ಮಂಜು ನಾಯ್ಕರ ಮಟಪಾಡಿ ಶೈಲಿಯ ಕಿರುಹೆಜ್ಜೆಗೆ ಮಾರುಹೋಗಿ ಮರುದಿನವೇ ವೀರಭದ್ರ ನಾಯ್ಕರ ಮನೆಗೆ ಹೋಗಿ ಅವ ರಿಂದ ಶಿಷ್ಯ ನಾಗಿ ಸ್ವೀಕೃತ ರಾದರು.

ನಾಯ್ಕರು ತಮ್ಮ ಶಿಷ್ಯನಿಗೆ ಕೇವಲ ಕುಣಿತ ಮಾತ್ರವಲ್ಲ ಮಹಾ ಭಾರತ ಮತ್ತು ರಾಮಾ ಯಣದ ಪ್ರತೀ ಪಾತ್ರದ ಚಿತ್ರಣವನ್ನು ನೀಡಿದರು.ರಾವಣ-ರಾಮ, ಭೀಷ್ಮ, ಪರಶುರಾಮ,ಅಂಗದ, ಪ್ರಹಸ್ತ,ವಾಲಿ, ಸುಗ್ರೀವ , ಕೌರವ, ಭೀಮ ಹೀಗೆ ನಾಯಕ ಪ್ರತಿನಾಯಕ ಪಾತ್ರದಲ್ಲಿ ಮಿಂಚಿದರು.ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಕೃಷ್ಣಾರ್ಜುನದ ಅರ್ಜುನ ನಡುತಿಟ್ಟು ಪರಂಪರೆಯ ಅತ್ಯುನ್ನತ ಪಾತ್ರವಾಗಿ ಮೂಡಿಬಂತು.ಸಾಲಿಗ್ರಾಮ ಮೇಳದಲ್ಲಿ ಅವರಿಗೆ ಖ್ಯಾತಿ ತಂದ ಪಾತ್ರ ಪೌರಾಣಿಕ ಪ್ರಸಂಗ ಜ್ವಾಲಾ ದ ಅಗ್ನಿ.ಬೆಂಕಿಚೆಂಡಿನಂತೆ ಅವರು ರಂಗವನ್ನು ಪುಡಿ ಮಾಡುತ್ತಿದ ದೃಶ್ಯ ಅಸಾಧಾರಣವಾಗಿತ್ತು. ಅರಾಟೆಯವರ ಜ್ವಾಲೆ,ಜಲವಳ್ಳಿಯವರ ನೀಲದ್ವಜ ರಾಮ ನಾಯರಿಯವರ ಮಜನ ಮಂಜರಿ,ಯಾಜಿಯವರ ಪ್ರವೀರ,ಶಿರಿಯಾರ ಮಂಜುನಾಯ್ಕರ ಅರ್ಜುನನ ಪಾತ್ರಗಳಿಗೆ ಕೊಪ್ಪಾಟೆಯವರ ಅಗ್ನಿ ಪಾತ್ರದಿಂದ ಪೌರಾಣಿಕ ಪ್ರಸಂಗವೊಂದು ದಾಖಲೆಯ ಪ್ರದರ್ಶನ ಕಂಡಿತ್ತು.

– ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next