Advertisement

ಖ್ಯಾತ ಯಕ್ಷಗಾನ ಕಲಾವಿದ ಹುಡುಗೋಡು ಚಂದ್ರಹಾಸ ರಂಗದಲ್ಲೆ ನಿಧನ 

02:17 AM Mar 11, 2019 | |

ಕೊಲ್ಲೂರು: ಇಲ್ಲಿಗೆ ಸಮೀಪದ ಎಳಜಿತ್‌ ಎಂಬಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಪ್ರಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ ಅವರು ವೇದಿಕೆಯಲ್ಲೇ ಕುಸಿದು ವಿಧಿವಶರಾದ ಘಟನೆ ಭಾನುವಾರ ರಾತ್ರಿ ನಡೆದಿದೆ. 

Advertisement

ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸಿದ ಹುಡುಗೋಡು ಚಂದ್ರಹಾಸ ಅವರು ಭೀಷ್ಮ  ಎನ್ನುವ ಉದ್ಘಾರ ಮಾಡುತ್ತಲೆ ವೇದಿಕೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. 

ಕುಸಿದು ಬಿದ್ದ ಅವರನ್ನು ತಕ್ಷಣ ಸಹಕಲಾವಿದರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿದರು.ಆದರೆ ಅದಾಗಲೇ ಕಲಾಮಾತೆಯ ಮಡಿಲನ್ನು ಅವರು ಸೇರಿ ಆಗಿತ್ತು. 

ಕಲಾಧರ ಬಳಗ ಹೊನ್ನಾವರ ತಂಡದ ಯಕ್ಷಗಾನ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಾಗಿ ಆಗಮಿಸಿದ್ದ ಹುಡುಗೋಡು ಅವರು ಬಹುಜನರ ಅಪೇಕ್ಷೆ ಮೇರೆಗೆ ಸಾಲ್ವನಾಗಿ ಅಭಿನಯಿಸುತ್ತಿದ್ದರು. ಸಾಲ್ವ ಪಾತ್ರದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

Advertisement

ಪ್ರಖ್ಯಾತ ಕಲಾವಿದರಾಗಿದ್ದ ಅವರು ಡೇರೆ ಮೇಳಗಳಾಗಿದ್ದ ಸಾಲಿಗ್ರಾಮ,ಪೆರ್ಡೂರು ಮುಂತಾದ ಮೇಳಗಳಲ್ಲಿ ದಶಕಗಳ ಕಾಲ ತಿರುಗಾಟ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದರು. ನೂತನ ಪ್ರಸಂಗಳಲ್ಲೂ ಖಳ ಪಾತ್ರಧಾರಿಯಾಗಿ ಅಬ್ಬರಿಸುತ್ತಿದ್ದರು. 

ಸಾಲ್ವ, ಭೀಮ, ಕೌರವ, ಹನುಮಂತ, ಕೀಚಕ ಹೀಗೆ ಹಲವು ವೇಷಗಳಲ್ಲಿ ತನ್ನದೇ ಆದ ಪ್ರತಿಭೆ ಮೆರೆದು ಖ್ಯಾತರಾಗಿದ್ದರು.

ರಾಜಕೀಯ ರಂಗಕ್ಕೆ ಕಾಲಿರಿಸಿದ್ದ ಅವರು ಉತ್ತರಕನ್ನಡದ ಹಡಿನಬಾಳ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ರಾಜಕೀಯಕ್ಕೆ ಕಾಲಿಟ್ಟ ಬಳಿಕ ವೃತ್ತಿರಂಗದಿಂದ ದೂರವಾಗಿ ಹವ್ಯಾಸಿಯಾಗಿ ಕಲಾ ಸೇವೆ ಮುಂದುವರಿಸಿದ್ದರು, ಮಾತ್ರವಲ್ಲದೆ ತನ್ನದೆ ಆದ ಕಲಾ ಬಳಗವೊಂದನ್ನು ಕಟ್ಟಿಕೊಂಡಿದ್ದರು. 

ದಿಗ್ಗಜ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾಯರ ನಿಧನದ ಬೆನ್ನಲ್ಲೇ ಹುಡುಗೋಡು ಚಂದ್ರಹಾಸ ಅವರ ಅಕಾಲಿಕ ಮರಣ ಯಕ್ಷರಂಗಕ್ಕೆ ತುಂಬಲಾರದ ನಷ್ಟ ಎನ್ನಬಹುದು.

Advertisement

Udayavani is now on Telegram. Click here to join our channel and stay updated with the latest news.

Next