ಚಂದ್ರಹಾಸ ಹುಡುಗೋಡುರವರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸನ್ನು ಕಂಡವರು. ಇದರ ಜೊತೆಗೆ ಅವರಲ್ಲಿ ಓರ್ವ ಕಲಾವಿದನಿಗೆ ಅಗತ್ಯವಾಗಿ ಇರಬೇಕಾದ ನಯ ವಿನಯ ಸ್ನೇಹಪರ ಅಧ್ಯಯನಶೀಲ ಮನಸ್ಸು ಇತ್ತು. ಹಾಗಾಗಿ ಹುಡುಗೋಡುರವರು ರಾತ್ರಿ ರಂಗದಲ್ಲಿಯೂ ಹಗಲು ಬಿಡಾರದಲ್ಲಿಯೂ ಎಲ್ಲರಿಗೂ ಬೇಕಾದ ಕಲಾವಿದರಾಗಿದ್ದರು.
ಅವರು ಯಕ್ಷಗಾನ ರಂಗ ಪಾದಾರ್ಪಣೆ ಮಾಡಿದ ಸಮಯದಲ್ಲಿ ಹೊಸಬರು ದಿಢೀರ್ ಆಗಿ ಪ್ರವೇಶಿಸಿ ರಂಗವನ್ನು ಆವರಿಸಿ ಮೆರೆವ ಫಾಸ್ಟ್‌ಫುಡ್ ಸಂಸ್ಕೃತಿ ಖಂಡಿತಾ ಇರಲಿಲ್ಲ .ಅಲ್ಲಿ ಹಂತ ಹಂತವಾಗಿ ಒಂದೊಂದೇ ವಿಭಾಗವನ್ನು ಕ್ರಮಿಸಿ ಕಲಾವಿದ ರೂಪುಗೊಳ್ಳುತ್ತ ಇದ್ದ ಕಾಲವದು. ಅದೇ ರೀತಿ ಹುಡುಗೋಡುರವರು ಬಚ್ಚಗಾರು ಬಯಲಾಟ ಮೇಳದಲ್ಲಿ ವೃತ್ತಿ ತಿರುಗಾಟ ಆರಂಭಿಸಿದ ನಂತರ ಹಂತ ಹಂತವಾಗಿ ಮೇಲೇರಿ ಮುಂದೆ ಬಡಗಿನ ಸಾಲಿಗ್ರಾಮ, ಪೆರ್ಡೂರು ಶಿರಸಿ, ಕುಮಟಾ, ಗೋಳಿಗರಡಿ, ಕಮಲಶಿಲೆ ಮೇಳಗಳಲ್ಲಿ ತಿರುಗಾಟ ಮಾಡಿ ತನ್ನದಾದ ಅಸ್ತಿತ್ವವನ್ನು ತೋರಿಸಿ ಕೊಟ್ಟರು.
ಹುಡುಗೋಡುರವರು ನಡೆದ ಹಾದಿ ನುಣ್ಣನೆಯ ರನ್‌ವೇ ಆಗಿರಲಿಲ್ಲ ಬದಲಿಗೆ ಅದೊಂದು ಆಗಷ್ಟೇ ರಚಿಸಿದ ಕಚ್ಚಾ ರಸ್ತೆ ಆಗಿದ್ದ ಕಾಲವಾಗಿತ್ತದು. ಯಾಕೆಂದರೆ 1980-1990 ದಶಕದಲ್ಲಿ ಒಂದನೇ ತಲೆಮಾರಿನ ಕೆರೆಮನೆ ಸಹೋದರರು ಚಿಟ್ಟಾಣಿ,ಜಲವಳ್ಳಿ, ನಗರ, ಐರೋಡಿ, ಗೋಡೆ, ಆರ್ಗೋಡು, ಕುಮಟಾ, ಬೇಗಾರ್ ಮುಂತಾದ ಮೇರು ಕಲಾವಿದರ ದಂಡೇ ಮೆರೆದು ರಂಗದಲ್ಲಿ ವಿಜೃಂಭಿಸಿ ಕಡೆದಿಟ್ಟ ಪ್ರತಿಯೊಂದು ಪೇಟೆಂಟ್ ಪಾತ್ರಗಳಿಗೆ ಹೊಸ ಭಾಷ್ಯವನ್ನು ಬರೆಯುವುದು ಯುವ ಕಲಾವಿದರಿಗೆ ಅಷ್ಟು ಸುಲಭದ ವಿಚಾರವಾಗಿರಲಿಲ.É ಅಂತಹ ಕಾಲಘಟ್ಟದಲ್ಲಿ ಎರಡನೇ ತಲೆಮಾರಿನ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಹುಡುಗೋಡುರವರು ಆ ಎಲ್ಲ ಹಿರಿಯರ ವೇಷಗಳನ್ನು ಬೆರಗಿನಿಂದಲೇ ನೋಡುತ್ತಾ ರಂಗವೇರಿ ಅವರನ್ನು ಅದರ್ಶವಾಗಿರಿಸಿಕೊಂಡವರು.
ಹುಡುಗೋಡುರವರದು ರಂಗ ಪರಿಭಾಷೆಯನ್ನು ಮೀರದ ಅಭಿವ್ಯಕ್ತಿ. ಆವರು ಖಳ ಪಾತ್ರಗಳತ್ತ ಒಲವು ತೋರಿ ಅವುಗಳತ್ತ ವಾಲಿದ್ದೇ ಅಧಿಕ. ಹಾಗಾಗಿ ಅವರು ನಿರ್ವಹಿಸಿದ ಸಾಲ್ವ, ದುಷ್ಟಬುದ್ಧಿ, ಕೌರವ ,ಭಸ್ಮಾಸುರ, ಕಂಸ, ದುಷ್ಟಬುದ್ಧಿ ,ಕಾರ್ತವೀರ್ಯ,ರಾವಣ, ಭದ್ರಸೇನ ಮುಂತಾದ ಪಾತ್ರಗಳು ರಂಗದಲ್ಲಿ ಅವರದೇ ಆದ ವಿಶಿಷ್ಟವಾದ ಛಾಪು ಮೂಡಿಸಿವೆ. ಒಂದು ಕೋನದಲ್ಲಿ ನೋಡಿದಾಗ ಚಿಟ್ಟಾಣಿಯವರನ್ನು ಇನ್ನೊಂದು ಕೋನದಲ್ಲಿ ನೋಡಿದಾಗ ಗೋಡೆ ನಾರಾಯಣ ಹೆಗಡೆಯವರನ್ನು ಪ್ರತಿನಿಧಿಸಿದ್ದೇ ಹೆಚ್ಚು.
ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿದಷ್ಟೇ ಸಮರ್ಥವಾಗಿ ನಾಯಕ ಪಾತ್ರಗಳಾದ ಭೀಷ್ಮ , ಅರ್ಜುನ, ಸುಧನ್ವ , ಮದನ, ಚಂದ್ರಹಾಸ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಇವರದು. ಯಾವುದೇ ಪಾತ್ರ ಇರಲಿ ಅದರಲ್ಲಿ ಪರಕಾಯ ಪ್ರವೇಶ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು .ಪಾತ್ರಗಳು ಪೌರಾಣಿಕ ಅಥವಾ ಸಾಮಾಜಿಕ ಪ್ರಸಂಗಗಳದು ಆಗಿರಲಿ ಅದರ ನಿರ್ವಹಣೆಯಲ್ಲಿ ಅದು ಯûಾ ನೀಯ ವೇಷವಾಗಿದ್ದದ್ದು ಇವರ ವಿಶೇಷತೆ. ಇದೇ ಅರ್ಹತೆ ಅವರನ್ನು ಬಡಗುತಿಟ್ಟಿನ ಎರಡನೇ ವೇಷದ ಸ್ಥಾನದ ಎತ್ತರಕ್ಕೆ ಏರಿಸಿದ್ದು. ಹುಡುಗೋಡುರವರು ಆಹಾರ್ಯ ವಾಚಿಕ ಆಂಗಿಕ ಸಾತ್ವಿಕ ಎನ್ನುವ ಚತುರಂಗದ ಅಭಿನಯದಲ್ಲಿ ಸಿದ್ಧಿಯನ್ನು ಯಥೇತ್ಛವಾಗಿ ಪಡೆದಿದ್ದರು. ಇದಕ್ಕೆ ಕಾರಣ ರಂಗದಲ್ಲಿ ಎದ್ದು ಕಾಣುವಂತಹ ವಿಶಾಲವಾದ ವರ್ಚಸ್ಸಿನ ಮುಖ ಆಯಕಟ್ಟಿನ ದೇಹ ಪ್ರಕೃತಿ ಸ್ವರ ಗಾಂಭೀರ್ಯ ಅವರಿಗಿದ್ದ ದೈವದತ್ತ ವರವಾಗಿತ್ತು.
ಅವರ ವೇಷಕ್ಕೆ ಭಾಗವತನ ನೆಲೆಯಲ್ಲಿ ಒಂದಷ್ಟು ಪದ ಹೇಳಿದ ಅನುಭವದಲ್ಲಿ. ಹೇಳುವುದಾದರೇ ಅವರ ವೇಷಗಾರಿಕೆಯಲ್ಲಿ ಕೌರವನಲ್ಲಿಯ ಛಲ ಕೀಚಕನಲ್ಲಿಯ ವಿರಹ ಕಾರ್ತ್ಯ ಹಾಗೂ ರಾವಣನಲ್ಲಿಯ ಶೌರ್ಯ ಸಾಲ್ವನಲ್ಲಿಯ ಶೃಂಗಾರ ರಸೊತ್ಪತ್ತಿಯನ್ನು ಸ್ಪಷ್ಟವಾಗಿ ಕಾಣಬಹುದಿತ್ತು ಹುಡುಗೋಡುರವರ ಪಾತ್ರದ ಸ್ಥಾಯಿ ಭಾವ ತಿಳಿಯದೆ ಈಗಿನ ಒಟ್ಟಾರೆ ಚಾಲು ಕುಣಿತದ ನಾಟ್ಯ ವೈಭವದತ್ತ ಮನಗೊಡದೆ ವಾಚಿಕದಲ್ಲೂ ರಸಭಾವವನ್ನು.ಕೆಡಿಸದೆ ಪಾತ್ರ ಕಟ್ಟಿಕೊಡುವ ಜಾಣ್ಮೆ ಪ್ರೌಢಿಮೆ ಅನನ್ಯ.
ಸುರೇಂದ್ರ ಪಣಿಯೂರು