Advertisement
“ಯುಗ’ವೆಂಬುದೂ “ಆದಿ’ಯೆಂಬುದೂ ಸೇರಿ “ಯುಗಾದಿ’. ಯುಗದ ಆದಿ. ಹೊಸ ಯುಗ ಪ್ರಾರಂಭಗೊಂಡ ದಿನ. “ಯುಗಾದ್ಯಾ” ಎಂದೂ ಪ್ರಯೋಗವಿದೆ. ಯುಗವೆಂದರೆ ದೀರ್ಘವಾದ ಕಾಲಮಾನ. ನಮ್ಮ ಪರಂಪರೆ ನಂಬುವಂತೆ ಚತುರ್ಯುಗಗಳು. ಅವುಗಳ ಕಾಲಮಾನಗಳೆಲ್ಲ ಒಟ್ಟು ಸೇರಿ ಎಷ್ಟು ಕಾಲವಾಗುತ್ತದೆಯೋ ಅದಕ್ಕೆ ಮತ್ತೆ ಪುನರಾವರ್ತನೆಯಿದೆ. ಹೀಗೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಮತ್ತೆ ಜಗತ್ತಿನ ಸೃಷ್ಟಿಯೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿ ನಾಶ ಹೊಂದುವ ಪ್ರಳಯದ ಕಲ್ಪನೆಯಿದೆ. ಮತ್ತೆ ಹೊಸ ಸೃಷ್ಟಿ ಮೂಡಿ ಬರಲಿದೆ.
ನಮ್ಮ ಪುರಾಣಗಳಲ್ಲಿ ಯಾವ ಯುಗವು ಯಾವ ದಿನದಿಂದ ಆರಂಭಗೊಂಡಿತೆಂಬ ವಿವರಗಳು ಉಲ್ಲೇಖೀಸಲ್ಪಟ್ಟಿವೆ. ಇವುಗಳನ್ನೆಲ್ಲ ದಾಖಲಿಸಿದವರು ಯಾರು?- ಎಲ್ಲವೂ ಕಲ್ಪನೆಯೇ ಅಲ್ಲವೇ?- ಎಂದು ಪ್ರಶ್ನಿಸಿದರೆ, ಈ ರೀತಿಯಲ್ಲಿ ಸತಾರ್ಕಿಕವಾಗಿ ಕಲ್ಪಿಸಿಕೊಳ್ಳುವುದು ಕೂಡ ದೊಡ್ಡದೇ ಅಲ್ಲವೇ? ಎಂದು ಪ್ರತಿಪ್ರಶ್ನೆಯನ್ನಿಡಬಹುದು. ಈ ಅನಂತವಾದ, ನಿಜವಾಗಿಯೂ ಅಳತೆಗೆ ದೊರಕದ ಕಾಲವನ್ನು ನಮ್ಮ ಚೌಕಟ್ಟಿನೊಳಗೆ ತರುವ ಕೆಲಸವನ್ನು ಪ್ರಾಕೃತಿಕವಾದ ಕೆಲವು ಘಟನೆಗಳ ಪುನರಾವರ್ತನೆಯನ್ನು ಆಧರಿಸಿ ಲೆಕ್ಕ ಮಾಡಲು ನಮ್ಮ ಹಿರಿಯರು ತೊಡಗಿದರು. ಆಗ ಅನುಭವಕ್ಕೆ ದೊರಕಿದ ಮತ್ತು ಘಟನೆಗಳ ಪುನರಾವರ್ತನೆಯಿಂದ ಗುರುತಿಸಬಹುದಾದ ಕಾಲಮಾನವಾಗಿ ದೊರಕಿದುದೇ “ವರ್ಷ’ವೆಂಬುದು. ಈ ವರ್ಷವೆಂಬುದು ಮಳೆಗಾಲ-ಚಳಿಗಾಲ-ಬೇಸಗೆ ಕಾಲಗಳ ನಿಯಮಿತ ಪುನರಾವರ್ತನೆ ಮತ್ತು ಈ ಕಾಲಗಳಿಗನುಗುಣವಾಗಿ ಲೋಕದ ಸಸ್ಯಸಂಪತ್ತು ಹೂ ಬಿಡುವ, ಹಣ್ಣು ಬಿಡುವ ಕಾಲಗಳ ಪುನರಾವರ್ತನೆಯನ್ನೂ ಉಂಟು ಮಾಡುತ್ತದೆ. ಈ ವರ್ಷವೆಂಬ ಕಾಲಮಾನದೊಳಗೆ ಸೂರ್ಯ-ಚಂದ್ರರ ಉದಯಾಸ್ತ ಮಾನಗಳಿಗನುಗುಣವಾಗಿ ದಿನಗಳ ಪುನರಾವರ್ತನೆ, ಮಾಸಗಳ ಪುನರಾವರ್ತನೆ ಇದೆ. ಸೂರ್ಯನ ಚಲನೆಯನ್ನುಸರಿಸಿ ಗುರುತಿಸಬಹುದಾದ ಕಾಲದ ಪುನರಾವರ್ತನೆ ಒಂದು ರೀತಿ. ಅದು ಸೌರಮಾನ ಕಾಲಗಣನೆ. ಚಂದ್ರನ ಚಲನೆಯನ್ನು ಅನುಸರಿಸಿ ಗುರುತಿಸಬಹುದಾದ ಕಾಲದ ಪುನರಾವರ್ತನೆ ಚಾಂದ್ರಮಾನ ಕಾಲಗಣನೆ. ಭಾರತೀಯರು ಕಾಲಗಣನೆಗೆ ಮುಖ್ಯವಾಗಿ ಸೂರ್ಯ-ಚಂದ್ರರ ಚಲನೆಯನ್ನೇ ಆಧರಿಸಿದ್ದರಿಂದ ಎರಡೂ ಕಾಲಗಣನೆಗಳು ಪರಂಪರೆಯಿಂದ ರೂಢಿಯಲ್ಲಿವೆ. ಇವೆರಡೂ ಶಾಸ್ತ್ರೀಯವೇ.
Related Articles
Advertisement
ವರ್ಷವನ್ನು ಗಣಿಸುವಾಗ ಯಾವ ದಿನದಿಂದ ಗಣಿಸುವ ಪರಂಪರೆ ಬಂದಿದೆಯೋ ಆ ದಿನವನ್ನು ಸಂಭ್ರಮದಿಂದ ಆಚರಿಸಬೇಡವೇ? ಆ ಇಡಿಯ ವರ್ಷವನ್ನೂ ವರ್ಷಪೂರ್ತಿ ನಡೆಯಬಹುದಾದ ಘಟನೆಗಳನ್ನು ಸ್ವಾಗತಿಸಬೇಡವೇ?, ಆ ಸ್ವಾಗತಿಸುವ ದಿನವನ್ನು ಹೆಸರಿಸಿ ಸಂಭ್ರಮಿಸಬೇಡವೇ? ಆ ದಿನದ ಹೆಸರೇ ಯುಗಾದಿ, ಆ ಸಂಭ್ರಮಾಚರಣೆಯ ದಿನವೇ ಯುಗಾದಿ. ಸಾವಿರಾರು ವರ್ಷಗಳ ದೀರ್ಘವಾದ ಕಾಲಮಾನದ ಯುಗವೆಂಬುದು ಒಬ್ಬ ಮನುಷ್ಯನ ಜೀವನ ಕಾಲದಲ್ಲಿ ಅನುಭವಕ್ಕೆ ಬರಲು ಸಾಧ್ಯವಿಲ್ಲ. ಕಾಲದ ಆವರ್ತನೆಗಳ, ಘಟನೆಗಳ ಆವರ್ತನೆಯುಳ್ಳ “ವರ್ಷ’ವು ಚೆನ್ನಾಗಿ ಅನುಭಾವಕ್ಕೆ ಬರುವಂತಹದಾದುದರಿಂದ ವರ್ಷವನ್ನೇ “ಯುಗ’ದ ಪ್ರತಿನಿಧಿಯಾಗಿ ಭಾವಿಸಿಕೊಂಡು ವರ್ಷದ ಆರಂಭವನ್ನೇ ಹೊಸ ಯುಗದ ಆರಂಭವೆಂದು ಕಲ್ಪಿಸಿಕೊಳ್ಳಲಾಯಿತು. ಆದುದರಿಂದ ವರ್ಷದ ಮೊದಲ ದಿನವನ್ನೇ ಯುಗಾದಿಯೆನ್ನಲಾಯಿತು.
ಚಾಂದ್ರಮಾನ ಯುಗಾದಿಯಿಂದ ಹೊಸ ಸಂವತ್ಸರ ಆರಂಭ. ಹೊಸ “ಯುಗ’ದಲ್ಲಿ ಅಥವಾ “ವರ್ಷ’ದಲ್ಲಿ ಎಂದರೆ ಸಂವತ್ಸರದಲ್ಲಿ ನಾವು ಅನುಭವಿಸಲಿರುವ ಸುಖ ಸಂತೋಷಗಳು, ಇದಿರಿಸಲಿರುವ ಆಪತ್ತು ವಿಘ್ನಗಳು, ದಾರಿ ತಪ್ಪಿಸುವ ಆತಂಕಗಳು-ಇವೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಪ್ರತಿಜ್ಞೆಯನ್ನು ನಾವು ವರ್ಷದ ಪ್ರಾರಂಭದಲ್ಲೇ ಕೈಗೊಳ್ಳಬೇಡವೇ? ಹಾಗೆ ನಮ್ಮ ಮನಸ್ಸನ್ನು ನಾವೇ ಗಟ್ಟಿಗೊಳಿಸುವುದರ ಸಂಕೇತವಾಗಿ ಪೂಜೆ-ಪಂಚಾಂಗ ಶ್ರವಣ, ಸಂವತ್ಸರ ಫಲ ನಿರೂಪಣ ಇತ್ಯಾದಿಗಳ ಅನಂತರ “ಬೇವು-ಬೆಲ್ಲ’ ಮೆಲ್ಲುವ ಕಾರ್ಯಕ್ರಮವಿದೆ. ಬೇವು ಕಹಿ, ಬೆಲ್ಲ ಸಿಹಿ. ಜೀವನದಲ್ಲಿ ಕಷ್ಟಗಳು ಬರುವುದು ಬೇಡವೆನ್ನಲಾಗದು. ಕಷ್ಟದ ಅನಂತರ ಸುಖ ಬರಲಿ. ಬೇವಿನ ಅನಂತರ ಬೆಲ್ಲ ಬರಲಿ. ನಮ್ಮ ಭಾಷಾ ರೂಢಿಯನ್ನು ಗಮನಿಸೋಣ-ನಮ್ಮ ಚಿಂತನಾಪರಂಪರೆಗೆ ಹೇಗೆ ಅನುಗುಣವಾಗಿದೆ! ಎಲ್ಲಿಯೂ “ಬೆಲ್ಲ-ಬೇವು’ ಎಂಬ ಪ್ರಯೋಗವಿಲ್ಲ. “ಬೇವು-ಬೆಲ್ಲ’ ಎಂಬ ಪ್ರಯೋಗವೇ ಇದೆ. ಕಷ್ಟಗಳ ಅನಂತರ ಬಂದ ಸುಖಕ್ಕೆ ಹೆಚ್ಚಿನ ಬೆಲೆ. ಅದೇ ನಮಗಿರಲಿ. ಅದೇ ನಮ್ಮ ಪರಿಸರಕ್ಕಿರಲಿ, ನಮ್ಮ ನಾಡಿಗಿರಲಿ ಎಂಬ ಹಾರೈಕೆಯೇ ಬೇವು-ಬೆಲ್ಲ ತಿನ್ನುವುದರ ಅರ್ಥ.
ಪ್ರತೀವರ್ಷ ಬರುವ ಯುಗಾದಿ ನಮ್ಮನ್ನು ನಾವು ಹೊಸಬರನ್ನಾಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೋದಕಾಲ ಹಿಂದೆ ಬರುವುದಿಲ್ಲ. ಹೊಸ ಕಾಲ ಬರುತ್ತಲೇ ಇರುತ್ತದೆ. ಹೊಸಕಾಲದಲ್ಲಿ ಬರುವ ಹತ್ತು ಹಲವು ಎಡರುತೊಡರುಗಳನ್ನು ದಾಟಿ ಯಶಸ್ಸನ್ನು ಪಡೆಯೋಣ. ನಾವು ತಿಂದ ತುಣುಕು-ತುಣುಕು ಬೇವು ಕೂಡ ಕಷ್ಟ ಸಹಿಸುವಂತೆ ನಮ್ಮನ್ನು ಗಟ್ಟಿಗೊಳಿಸಲು ಕಾರಣವಾಗಲಿ. ವರ್ಷಪೂರ್ತಿ ಉತ್ಸಾಹ ಬತ್ತದಿರಲಿ. ಬರುವ ಯುಗಾದಿಯಲ್ಲೂ ನಮ್ಮದು ಇದೇ ಆಶಯ. ಮನುಷ್ಯರು ಉತ್ಸವಪ್ರಿಯರಂತೆ. ಉತ್ಸವದ ಹರ್ಷದೊಂದಿಗೆ ಜೀವನಮಾರ್ಗದ ಎಚ್ಚರ ಎಂದೂ ಇರಲಿ-ಎಂಬುದಕ್ಕಾಗಿಯೇ ಬೇವು. ಹೀಗೆ ಬೇವನ್ನು ಸಂಕೇತವಾಗಿರಿಸಿ ನಮ್ಮ ಹಿರಿಯರು ಜೀವನಮಾರ್ಗವನ್ನು ಬೋಧಿಸಿದರು.
ದೀರ್ಘವಾದ ಯುಗದ ತುಣುಕೇ ವರ್ಷ. ಆದುದರಿಂದ ವರ್ಷದ ಆರಂಭದ ದಿನವೇ ಯುಗಾದಿ. “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬುದು ಕವಿವಾಣಿ. ಹೊಸತನ್ನು ನಿರೀಕ್ಷಿಸುವ, ಹೊಸ ಸಾಹಸಕ್ಕೆ, ಸಾಹಸಸರಣಿಗೆ ಸಿದ್ಧವಾಗುವ, ಕೆಡುಕನ್ನು ಮೆಟ್ಟಿ-ಮೀರಿ ಒಳಿತನ್ನು ಸಾಧಿಸುವ- ಆ ಮೂಲಕ ಸರ್ವ ಸಮಾಜದ, ಪ್ರತೀ ವ್ಯಕ್ತಿಯ- ಆ ಮೂಲಕ ದೇಶದ, ಸಮಗ್ರ ರಾಷ್ಟ್ರದ ಒಳಿತಿನೆಡೆಗೆ ಸಾಗುವ ಶುಭದಿನವೇ ಯುಗಾದಿ. ಈ ಯುಗಾದಿ ಎಲ್ಲರಿಗೂ ಒಳಿತನ್ನು ತರಲಿ; ಸತ್ಪ್ರೇರಣೆಯನ್ನು ನೀಡಲಿ. ಸಾಧನೆಗಳನ್ನು ಮಾಡಿದ ಹಿರಿಯರನ್ನು ಸ್ಮರಿಸೋಣ; ನಮ್ಮ ಸಾಧನೆಯ ಮಾರ್ಗದಲ್ಲಿ ಅಡಿಯಿಡೋಣ.