Advertisement

ಅಸ್ತಂಗತರಾದ ಹಾಸ್ಯಗಾರ ಚಂದ್ರ ಶೆಟ್ಟಿ

05:47 PM May 16, 2019 | Team Udayavani |

ಬಡಗುತಿಟ್ಟು ಬಯಲಾಟ ರಂಗಭೂಮಿಯ ಅಗ್ರಮಾನ್ಯ ಹಾಸ್ಯಗಾರ, ಕಮಲಶಿಲೆ ಒಂದನೇ ಮೇಳದ ಪ್ರಧಾನ ಹಾಸ್ಯಗಾರ ಬೆದ್ರಳ್ಳಿ ಚಂದ್ರ ಶೆಟ್ಟಿ 54ನೇ ವಯಸ್ಸಿನಲ್ಲಿ ಯಕ್ಷಗಾನರಂಗವನ್ನಗಲಿ ಹೋಗಿದ್ದಾರೆ.

Advertisement

ಸುಮಾರು 4 ದಶಕಗಳ ಕಾಲ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಹಾಸ್ಯ ಪಾತ್ರಗಳಿಂದ ಎತ್ತರಕ್ಕೇರಿಸಿದ ಅವರು ಎಳವೆಯಲ್ಲಿಯೇ ಯಕ್ಷಗಾನವನ್ನು ವೃತ್ತಿಯಾಗಿ ಪರಿಗಣಿಸಿದವರು.ಪಾತ್ರನಿಷ್ಠರಾಗಿ ಗರಿಷ್ಟ ಮಟ್ಟದ ಹಾಸ್ಯರಸವನ್ನು ಬಿಂಬಿಸುವ ಅನುಭವಿ ಕಲಾವಿದರಾದ ಅವರು 16ರ ಹರೆಯದಲ್ಲಿ ಕಲಾಲೋಕ ಪ್ರವೇಶಿಸಿದರು.ಇವರ ತಂದೆ ಹವ್ಯಾಸಿ ಕಲಾವಿದರಾಗಿದ್ದು ಕಲೆಯ ನಂಟುತನ ಆ ಮೂಲಕ ಅವರಿಗೆ ಪ್ರಾಪ್ತವಾಗಿತ್ತು.ಮಾರಣಕಟ್ಟೆ ಮೇಳದಲ್ಲಿದ್ದ ಆಗಿನ ಹಿರಿಯ ಹಾಸ್ಯಗಾರ ದರ್ಲ್ಯಾಣಿ ನಾಗಯ್ಯ ಶೆಟ್ಟರಿಂದ ಯಕ್ಷಗಾನ ಶಿಕ್ಷಣ ಪಡೆದ ಅವರು ವೃತ್ತಿ ಮೇಳದಲ್ಲಿ ಸುಯೋಗ್ಯ ವಿದೂಷಕರಾಗಿ ಬಹುಬೇಗ ಗುರುತಿಸಿಕೊಂಡರು.ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಬಳಿಕ ಕಳುವಾಡಿ, ಅಮೃತೇಶ್ವರಿ, ಮಡಾಮಕ್ಕಿ, ಕಮಲಶಿಲೆ, ಸಿಗಂದೂರು ಮತ್ತಿತರ ಮೇಳಗಳಲ್ಲಿ ಸುಮಾರು 38 ವರ್ಷಗಳ ಕಾಲ ಕಲಾಸೇವೆ ಮಾಡಿದ್ದರು.ಹಾಸ್ಯ ಭೂಮಿಕೆಗೊಪ್ಪುವ ಆಳಂಗ ವೇಷ, ಭಾಷೆ, ನೃತ್ಯ, ಆಂಗಿಕಾಭಿನಯ, ರಂಗನೆಡೆಯನ್ನು ಹೊಂದಿದ ಅವರು ಬಯಲಾಟದ ಪೌರಾಣಿಕ ಪ್ರಸಂಗಗಳ ಹಾಸ್ಯಕ್ಕೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದರು.ಹಾಗಾಗಿ ಅವರ ಬೇಡರ ಕಣ್ಣಪ್ಪದ ಮಾಣಿ, ಭೀಷ್ಮ ವಿಜಯ, ದಕ್ಷಯಜ್ಞ ಮುಂತಾದ ಪ್ರಸಂಗಗಳ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ರಕ್ಕಸದೂತ ಬಲರಾಮ ದೂತ,ಬಾಹುಕ,ಕಂದರ, ಚಂದಗೋಪ, ಚಂದ್ರಾವಳಿ ವಿಲಾಸ ಮತ್ತು ಚಿತ್ರಾಕ್ಷಿ ಕಲ್ಯಾಣ ಅಜ್ಜಿ, ಮೂಖಾಸುರ,ಕಪ್ಪದ ದೂತ,ಕಮಲಭೂಪ ದೂತ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ಶೆಟ್ಟರು ಅನೇಕ ಶಿಷ್ಯರನ್ನು ಸೃಷ್ಟಿಸಿದ್ದರೂ ಬಯಲಾಟ ಮೇಳಗಳಲ್ಲೇ ಸೇವೆ ಸಲ್ಲಿಸಿದ್ದರಿಂದ ಅವರ ಪ್ರತಿಭೆ, ಕೀರ್ತಿ ಎಲ್ಲವೂ ಎಲೆಯ ಮರೆಯಾಗಿಯೇ ಉಳಿಯಿತು ಎನ್ನುವುದು ನಿಷ್ಟುರವಾದ ಸತ್ಯ.

ಚಂದ್ರ ಶೆಟ್ಟಿಯವರ ಇನ್ನೊಂದು ಪ್ರತಿಭೆ ಯಕ್ಷಗಾನ ಪ್ರಸಂಗ ರಚನೆ. ಅನೇಕ ಮೌಲ್ಯಯುತ ಆಧುನಿಕ ಪ್ರಸಂಗಗಳನ್ನು ರಚಿಸಿದ ಕೀರ್ತಿ ಅವರಿಗೆ ಸಂದಿದೆ. ದೈವ ಸಂಕಲ್ಪ, ಸೌಮ್ಯಸುಗಂಧಿ, ಜ್ಯೋತಿ ಚಂದ್ರಮ,ನಾಗದರ್ಶನ,ಸೌಮ್ಯಶ್ರೀ ಮುಂತಾದ ಅವರ ಪ್ರಸಂಗಗಳು ಅನೇಕ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದವು.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next