Advertisement
ಡಿಸೆಂಬರ್ 11 ರಂದು ಯಕ್ಷಗಾಭಿಮಾನಿಗಳಿಗೆ, ನೂರಾರು ಕಲಾವಿದರಿಗೆ ನೋವಿನ ಸುದ್ದಿಯಾಗಿ ಕೇಳಿ ಬಂದಿದ್ದು ಅಡೂರು ಗಣೇಶ್ ರಾವ್ ಅವರ ನಿಧನದ ವಾರ್ತೆ. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ 50 ರ ಹರೆಯದ ಗಣೇಶ್ ರಾವ್ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಯಾರಿಗೂ ನಂಬಲೂ ಸಾಧ್ಯವಾಗಲಿಲ್ಲ.
Related Articles
Advertisement
ಪುಂಡುವೇಷಧಾರಿಯಾಗಿಯೂ ಗಮನ ಸೆಳೆದಿದ್ದ ಅವರು ಆ ಬಳಿಕ ಮದ್ದಳೆ ಮತ್ತು ಚಂಡೆವಾದಕರಾಗಿ ಖ್ಯಾತಿ ಪಡೆದಿದ್ದು ವಿಶೇಷ ಮಾತ್ರವಲ್ಲದೆ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿ.
ಸವ್ಯಸಾಚಿ ಎನಿಸಿಕೊಂಡಿದ್ದ ಅವರು ಹಲವು ಪ್ರಮುಖ ಕಲಾವಿದರೊಂದಿಗೆ ತಿರುಗಾಟ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ್ದ ಅವರು ಖ್ಯಾತ ಭಾಗವತ ಕಂಚಿನ ಕಂಠದ ರಘುರಾಮ ಹೊಳ್ಳರೊಂದಿಗೆ ಸಹವಾದಕನಾಗಿ ಕಾಣಿಸಿಕೊಂಡು ನಾಡಿನಾದ್ಯಂತ ರಂಗದ ರಂಗು ಹೆಚ್ಚಿಸಿದ್ದರು.
ಚಂಡೆಯ ಪ್ರಾಧಾನ್ಯತೆ ಇರುವ ರಾಕ್ಷಸ ವೇಷ , ಪುಂಡು ವೇಷ ಗಳಿಗೆ ಬಾರಿಸುವಿಕೆಯ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಶಕ್ತಿ ಗಣೇಶ್ ರಾವ್ ಅವರಲ್ಲಿತ್ತು.
ತೆಂಕಿನ ಮೇಳಗಳಾದ ಸುರತ್ಕಲ್ , ಕಟೀಲು, ಕದ್ರಿ , ಪುತ್ತೂರು ಮೇಳಗಳಲ್ಲಿಯೂ ತಿರುಗಾಟ ಮಾಡಿದ್ದ ಅವರು ತೆಂಕು ತಿಟ್ಟು ಯಕ್ಷಗಾನದಲ್ಲಿ ಅಪಾರ ಅನುಭವ ಸಂಪಾದಿಸಿದ್ದ ಕಲಾವಿದ ಎನಿಸಿಕೊಂಡಿದ್ದರು.
ಕರಾವಳಿ,ದೇಶದ ವಿವಿಧೆಡೆ ಮತ್ತು ವಿದೇಶದಲ್ಲೂ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಗಣೇಶ್ ರಾವ್ ಅವರು ಬಹುಬೇಡಿಕೆಯ ಕಲಾವಿದರಾಗಿದ್ದರು.
ಕಲಾವಿದರು ನೋವಿಗೆ ಸಿಲುಕುವುದು ಹೆಚ್ಚು ಅನ್ನುವ ಹಾಗೆ ಗಣೇಶ್ ರಾವ್ ಅವರು ಲಿವರ್ ಸಮಸ್ಯೆಯಿಂದ ಬಳಲಿ ಯಕ್ಷರಂಗದಿಂದ ಮರೆಯಾಗಿದ್ದಾರೆ. ಶ್ರೀಮಂತ ತೆಂಕು ತಿಟ್ಟು ಯಕ್ಷರಂಗದಿಂದ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಪತ್ನಿ , ಪುತ್ರ ಮತ್ತು ಪುತ್ರಿಯನ್ನು ಅಗಲಿಹೋಗಿದ್ದಾರೆ.
ಧರ್ಮಸ್ಥಳ ಮೇಳದ ರಂಗಸ್ಥಳಲ್ಲಿ ಅಜಾನುಬಾಹುವಾಗಿ ಕಾಣಿಸಿಕೊಳ್ಳುತ್ತಿದ್ದ ಅವರ ಅನುಪಸ್ಥಿತಿ ಯಕ್ಷಾಭಿಮಾನಿಗಳಿಗೆ ಎದ್ದು ಕಾಣುತ್ತಿದೆ.