Advertisement
ನಿಮ್ಮ ಬಾಲ್ಯ ಮತ್ತು ಯಕ್ಷಗಾನ ಪ್ರವೇಶ ಹೇಗಿತ್ತು?ಅಪ್ಪ, ಅಮ್ಮ ಕೂಲಿ ಮಾಡುತ್ತಿದ್ದವರ ಮನೆ ಯಲ್ಲಿ ನಮ್ಮ ವಾಸ. ಒಮ್ಮೆ ನೀರು ಸೇದುತ್ತಿರು ವಾಗ ಏತ ತುಂಡಾಗಿ ತಂದೆಯ ಎದೆಗೆ ಬಿದ್ದು ತಂದೆ ಹಾಸಿಗೆ ಹಿಡಿದರು. ಕೆಲವು ತಿಂಗಳಲ್ಲಿ ಸ್ವರ್ಗಸ್ಥರಾದರು. ಆರ್ಥಿಕ ಸಮಸ್ಯೆಯಿಂದ 2ನೇ ತರ ಗತಿಗೆ ನಾನು ವಿದ್ಯಾಭ್ಯಾಸ ನಿಲ್ಲಿಸ ಬೇಕಾಯಿತು. ಅಮ್ಮ ಕೂಲಿ ಕೆಲಸ ಮಾಡುತ್ತಿದ್ದ ಮನೆಯ ಮಾಲಕರಾದ ಬನ್ನಂಜೆ ನಾರಾಯಣ ಶೆಟ್ಟರು ಹವ್ಯಾಸಿ ಭಾಗ ವತರು. ಹೀಗಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಮಾಡುತ್ತಿದ್ದರು. ದೊಡ್ಡದೊಡ್ಡ ಕಲಾವಿದರು ಬರುತ್ತಿದ್ದುದರಿಂದ ಅವರ ಪರಿಚಯವೂ ಆಗುತ್ತಿತ್ತು. ಇದೇ ವೇಳೆಗೆ ಮಾರ್ಗೋಳಿ ಗೋವಿಂದ ಸೇರಿಗಾರ್ ಅವರಿಂದ ಕುಣಿತದ ತರಗತಿ ನಡೆಸಿದ್ದರು. ಅದನ್ನು ಅಭ್ಯಾಸ ಮಾಡಿದೆ. ಅನಂತರ ದೇವಸ್ಥಾನಕ್ಕಾಗಿ 9 ದಿನಗಳ ಚಿಕ್ಕಮೇಳದಲ್ಲಿ ತಿರುಗಾಟ ಶುರುವಾಯಿತು. ಹವ್ಯಾಸಿಯಾಗಿ ಚೆಂಡೆ ಬಾರಿ ಸುವುದನ್ನು ಕಲಿತೆ, ನಾಟ್ಯವೂ ಕಲಿತೆ. ಈ ಮಧ್ಯೆ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದೆ. ಇದರ ಜತೆಗೆ ಯಕ್ಷಗಾನವೂ ನಡೆಯುತ್ತಿತ್ತು.
1970ರಲ್ಲಿ ಯಕ್ಷಗಾನ ಕೇಂದ್ರ ಆರಂಭ ವಾಯಿತು. ಅಲ್ಲಿ ವೀರಭದ್ರ ನಾಯಕ, ನೀಲಾವರ ರಾಮ ಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯರು ಗುರುಗಳಾಗಿದ್ದರು. ಅವರಿಂದ ಯಕ್ಷಗಾನ ಕಲಿಯಬೇಕು ಎಂಬ ಆಸೆಯಾಯಿತು. 1971 ರಲ್ಲಿ ಕೇಳಿದಾಗ ಅವಕಾಶ ಸಿಗಲಿಲ್ಲ. 1972ರಲ್ಲಿ ರಾತ್ರಿ ಅಭ್ಯಾಸ ಮಾಡುವ ಹವ್ಯಾಸಿಗಳಿಗೆ ಅವಕಾಶ ಮಾಡಿಕೊಡಲಾಯಿತು. ಹೀಗೆ ಸೇರಿಕೊಂಡು ಗುರುಗಳು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೆ. ತಾಳ, ಪದ್ಯ ಎಲ್ಲವೂ ನಿತ್ಯ ಕಂಠಪಾಠ ಮಾಡುತ್ತಿದ್ದೆ. ಇದು ಗುರುಗಳಿಗೂ ಇಷ್ಟವಾಯಿತು. 1973ರಲ್ಲಿ ಕೇಂದ್ರದ ವಿದ್ಯಾರ್ಥಿಯಾಗಿ ಕಲಿಯಲು ಅವಕಾಶ ಸಿಕ್ಕಿತ್ತು. ಮೇಳಗಳ ಸುತ್ತಾಟ ಹೇಗಿತ್ತು?
1974ರ ಸುಮಾರಿಗೆ ಗುರುಗಳು ಮೇಳಕ್ಕೆ ಕರೆದುಕೊಂಡು ಹೋದರು. ಮೇಳದಲ್ಲಿ ಆಗುತ್ತಿದ್ದ ದೌರ್ಜನ್ಯ ಸಹಿಸಲಾಗದೆ ಅಲ್ಲಿಂದ ವಾಪಸ್ ಗುರುಗಳ ಮನೆಗೆ ಬಂದೆ. ಗುರುಗಳು ಮೇಳ ಬಿಟ್ಟು ಬಂದಿದ್ದಕ್ಕೆ ಬೈದರು. ಹಿರಿಯಡಕ ಬಯಲಾಟ ಮೇಳದಲ್ಲಿ ಗುರುಗಳು ಪ್ರಧಾನ ಭಾಗವತರಾಗಿದ್ದರಿಂದ ಅಲ್ಲೇ ಕಲಾವಿದನಾದೆ. ಅಲ್ಲಿ ಕೆಲವರ ನಿಂದನೆ ಸಹಿಸಲಾಗದೇ 15 ದಿನದಲ್ಲೇ ಮೇಳದಿಂದ ಹೊರಗೆ ಬಂದೆ. ಗೋಳಿಗರಡಿ ಮೇಳವನ್ನು ಐರೋಡಿ ಗೋವಿಂದಪ್ಪ ಅವರು ವಹಿಸಿಕೊಂಡ ಕಾಲ ದಲ್ಲಿ ಅದನ್ನು ಸೇರಿದರೂ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿಲ್ಲ. ಈ ಹೊತ್ತಿಗೆ ಹವ್ಯಾಸಿ ಕಲಾವಿದ ನಾಗಿ ಹೆಸರು ಬಂದಿತ್ತು. ನನ್ನ ಸ್ನೇಹಿತರನ್ನೆಲ್ಲ ಸೇರಿಸಿ ಗುಂಡಿಬೈಲಿನಲ್ಲಿ ಆಟ ಮಾಡಿಸಿದ್ದರು. ಸಂಜೀವನ ವೇಷ ಆಗಬೇಕು ಎಂದಿದ್ದರು. ಆದರೆ ವೇಷಕ್ಕೂ ಮೊದಲು ಗಣಪತಿ ಪೂಜೆಯ ಪ್ರಸಾದಕ್ಕೆ ಕೈಯೊಡ್ಡಿದಾಗ ಜಾತಿಯ ಕಾರಣಕ್ಕೆ ಸಹ ಕಲಾವಿದರು ಆಕ್ಷೇಪಿಸಿದರು. ಅಸ್ಪೃಶ್ಯತೆ ಇದ್ದರೆ ನಾನು ವೇಷ ಹಾಕುವುದಿಲ್ಲ ಎಂದು ಪ್ರಸಾದ ತೆಗೆದುಕೊಳ್ಳದೇ ವಾಪಸು ಬಂದೆ. ಹೀಗೆ ಹಲವು ಘಟನೆಗಳು ನಡೆದಿದ್ದರೂ ಯಕ್ಷಗಾನವನ್ನು ನಾನು ಬಿಡಲಿಲ್ಲ. ನನ್ನನ್ನು ಯಕ್ಷಗಾನ ಬಿಡಲಿಲ್ಲ.
Related Articles
1978-79ರಲ್ಲಿ ದಿಲ್ಲಿಯಲ್ಲಿ ಬಿ.ವಿ. ಕಾರಂತರು ನಾಟಕ ಮಾಡಿಸುತ್ತಿದ್ದರು. ಚೆಂಡೆ ಮತ್ತು ಮದ್ದಳೆಗೆ ಜನ ಬೇಕು ಎಂಬ ಸುದ್ದಿ ಬಂತು. ಅಲ್ಲಿಗೆ ಹೋದಾಗಲೇ ತಿಳಿಯಿತು. ಕಲೆ ಎಂದರೆ ಯಕ್ಷಗಾನ ಮಾತ್ರವಲ್ಲ ನಾಟಕ ಸಹಿತ ಹಲವಿದೆ ಎಂಬುದು. ಅಲ್ಲಿ ಬಿರ್ತಿ ಬಾಲಕೃಷ್ಣರ ಮೂಲಕ ಮಾಯಾ ರಾವ್ ಅವರ ಪರಿಚಯವಾಯಿತು. ಅವರು 1982ರಲ್ಲಿ ಜರ್ಮನ್, ಫ್ರಾನ್ಸ್, ಈಜಿಪ್ಟ್ ನಲ್ಲಿ ಭಾರತ ಉತ್ಸವ ಹಮ್ಮಿಕೊಂಡಿದ್ದರು. ವೇಷ ಹಾಕಲು, ವೇಷ ಹಾಕಲು, ಚೆಂಡೆ ಬಾರಿಸಲು ಕಲಾವಿದರು ಬೇಕಿದ್ದರಿಂದ ನಾನು ಅದಕ್ಕೆ ಆಯ್ಕೆಯಾದೆ. ವಿದೇಶಕ್ಕೂ ಹೋಗಿ ಬಂದೆ. ಆಗ ಕಬಿಯಾಡಿ ಜಯರಾಮ ಆಚಾರ್ಯರು ಉದಯವಾಣಿಯಲ್ಲಿ ಒಂದು ಲೇಖನ ಬರೆದಿದ್ದರು. ಆ ಲೇಖನವನ್ನು ಡಾ| ಶಿವರಾಮ ಕಾರಂತರು ಓದಿ, ಕೇಂದ್ರದಲ್ಲಿನ ಈ ಹುಡುಗ ಯಾರು? ನಾನು ಅವರನ್ನು ನೋಡಬೇಕು ಎಂದು ಕರೆಸಿಕೊಂಡಿದ್ದರು. 1982ರಲ್ಲಿ ಉಡುಪಿ ಯಲ್ಲಿ ದೊಡ್ಡ ನೆರೆ ಬಂದ ದಿನವೇ ನಾನು ಕಾರಂತರನ್ನು ನೋಡಲು ಕೇಂದ್ರಕ್ಕೆ ಹೋಗಿದ್ದು. ಕೇಂದ್ರದ ತಂಡಕ್ಕೆ ನನ್ನನ್ನು ಸೇರಿಸಿದರು. ರಷ್ಯಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಭಿಮನ್ಯು ವೇಷ ಮಾಡುವವರಿಗೆ ಜ್ವರ ಬಂದಿತ್ತು. ಪ್ರಸಂಗ ಬದಲಾಯಿಸಲು ಕಾರಂತರು ಒಪ್ಪದ ಕಾರಣ ಆ ವೇಷ ಮಾಡಲು ನೀಲಾವರ ರಾಮಕೃಷ್ಣ ಅವರು ನನ್ನ ಹೆಸರು ಸೂಚಿಸಿದರು. ಮುಂದೆ ಕಾರಂತರು ಇರುವ ವರೆಗೂ ನಾನೇ ಅಭಿಮನ್ಯು ಪಾತ್ರ ನಿರ್ವಹಿಸಿದೆ. 1982-83ರಲ್ಲಿ ಕೇಂದ್ರದಲ್ಲಿ ಗುರುವಾಗಿ ಸೇರಿದ ಬಳಿಕ ಬದಲಾವಣೆ ತರಲಾಯಿತು. ಯಕ್ಷಗಾನ ಕಲಿಕೆಯ ಜತೆಗೆ ವಿದ್ಯಾಭ್ಯಾಸಕ್ಕೂ ನೆರವು ನೀಡಲಾರಂಭಿಸಿದೆವು.
Advertisement
ನಿಮಗೆ ಕಾರಂತರಿಂದ ಸಿಕ್ಕಿದ್ದೇನು?ಕಾರಂತರು ಯಕ್ಷಗಾನದ ಬಗ್ಗೆ ಆಳವಾಗಿ ಚಿಂತನೆ ಮಾಡುತ್ತಿದ್ದರು. ರಾಯಭಾರಿಯಾಗಿ ವಿದೇಶಕ್ಕೆ ಹೋಗುತ್ತಿದ್ದರು. ಈಜಿಪ್ಟ್, ರಷ್ಯಾಕ್ಕೆ ಹೋಗಿ ಅಲ್ಲಿನ ಶಾಲೆಗಳಲ್ಲಿ ಶಿಕ್ಷಣ/ಕಲೆಯ ಅಧ್ಯಯನ ಮಾಡುತ್ತಿದ್ದರು. ಅಬ್ಬರದ ಕುಣಿತಕ್ಕಿಂತ ಸಂಗೀತಕ್ಕೆ ಆದ್ಯತೆ ನೀಡುತ್ತಿದ್ದರು. ಸುಖ, ದುಃಖ ಸಹಿತ ಎಲ್ಲ ಸನಿವೇಶಗಳನ್ನು ಕಲಾವಿದ ಮಾತಿನಿಂದಲ್ಲ, ನಟನೆ ಮೂಲಕ ತಿಳಿಸ ಬೇಕು ಎನ್ನುತ್ತಿದ್ದರು. ವೇಷ ಭೂಷಣಗಳನ್ನು ಹಗುರಮಾಡಿದರು. ಗೆಜ್ಜೆ-ತಾಳ ಹಾಗೂ ಶೃತಿಗೆ ಸಂಬಂಧ ಕಲ್ಪಿಸಿದರು. ಪಠ್ಯಗಳನ್ನು ಆವಿಷ್ಕಾರ ಮಾಡಿದ್ದರು. ತಾಳದಲ್ಲಿ 32 ರೀತಿಯ ವಿನ್ಯಾಸ ಇದೆ ಎಂಬು ದನ್ನು ಕಲಿಸಿದರು. ಆರ್ಥಿಕವಾಗಿಯೂ ಸಹಾಯ ಮಾಡಿದ್ದರು. ಹೀಗಾಗಿಯೇ ಶುದ್ಧ ಯಕ್ಷಗಾನ ದಲ್ಲೇ ಇಂದಿಗೂ ಕೆಲಸ ಮಾಡುತ್ತಿದ್ದೇನೆ. ಇದು ಕಾರಂತರು ಕೊಟ್ಟ ಬಳುಬಳಿ. ಯಕ್ಷಗಾನದಲ್ಲಿ ಬದಲಾವಣೆ ಆಗು ತ್ತಿದೆ ನೀವಿದನ್ನು ಒಪ್ಪುವಿರಾ?
ಹಿಂದೆ ಎಲ್ಲ ಪಾತ್ರವೂ ರಂಗಕ್ಕೆ ಬರುತ್ತಿದ್ದವು. ಈಗ ಅದು ಕಾಣುತ್ತಿಲ್ಲ. ಯಕ್ಷಗಾನದಲ್ಲಿ ವೇಷ
ಭೂಷಣ ಮತ್ತು ಮಾತೇ ಮುಖ್ಯ. ಯಕ್ಷಗಾನ ವನ್ನು ಮೇಲೆತ್ತಿದ್ದೇ ಇದು. ಟೆಂಟ್ ಮೇಳದಿಂದ ಕಮರ್ಶಿಯಲ್ ಆಯಾಮ ಸಿಕ್ಕಿತು. ಸಿನೆಮಾ ಡೈಲಾಗ್‌ಗಳು ಬಂದವು. ರಾಮಾಯಣ, ಮಹಾ ಭಾರತ ಓದಿ ಕೃಷ್ಣ, ರಾಮನ ಚಿತ್ರ ಕಲ್ಪಿಸಿಕೊಂಡು ಅಭಿನಯ ಮಾಡುತ್ತಿದ್ದ ಕಲಾವಿದನ ಕಲೆ ಮಾಯವಾಗಿದೆ. ಖುಷಿ ಬಂದಂತೆ ನಾಮ ಹಾಕುವುದು, ಕುಣಿಯುವುದು ಟೆಂಟ್ ಮೇಳ ಬಂದ ಅನಂತರದಲ್ಲಿ ಬಂದದ್ದು. ಧರ್ಮ, ದೇವಸ್ಥಾನಗಳಿಂದ ಹೊರಟ ಕಲೆಯನ್ನು ನಾವು ಹಾಗೆಯೇ ಒಪ್ಪಿಕೊಂಡು ಆರಾಧನೆ ಮಾಡಬೇಕು. ಈ ರೀತಿಯ ಬದಲಾವಣೆ ಸರಿಯಲ್ಲ. ಯಕ್ಷಗಾನ ನೋಡುವವರನ್ನು ಬೆಳಗ್ಗಿನ ತನಕ ಕೂರಿಸಿಕೊಳ್ಳುವ ಶಕ್ತಿ ಕಲಾವಿದನಲ್ಲಿ ಕಡಿಮೆಯಾಗುತ್ತಿದೆ. ಹೊಸ ತನ, ಪ್ರಯೋಗಶೀಲತೆ ಮಾಯವಾಗಿದೆ. ಕಲಾವಿದ ಕಲೆಗೆ ಜೀವ ತುಂಬಬೇಕು. ಯಕ್ಷಗಾನದಿಂದ ನಿಮಗೆ ಸಿಕ್ಕಿದ್ದೇನು?
ಗುರುವಾದವನು ನಿರಂತರ ಕಲಿಕೆಯಲ್ಲೇ ಇರಬೇಕು. ಕಲಿತು ಕಲಿಸುವ ಗುಣ ಗುರುವಿಗೆ ಇರಬೇಕು. ಆಗಲೇ ಪಕ್ವತೆ ಬರುವುದು. ಯಕ್ಷ ಗಾನದಿಂದ ನನಗೆ ಖ್ಯಾತ ಕಲಾವಿದರ ಸಂಪರ್ಕ ಸಾಧ್ಯವಾಯಿತು. ಸಮಾಜದಲ್ಲಿ ತುಳಿಯಲ್ಪಟ್ಟ ವ್ಯಕ್ತಿ/ ಜಾತಿಗೆ ದೊಡ್ಡ ಸ್ಥಾನಮಾನ ಯಕ್ಷಗಾನ ತಂದುಕೊಟ್ಟಿದೆ. ನನಗೆ ಯಕ್ಷಗಾನದಿಂದ ಎಲ್ಲವೂ ಸಿಕ್ಕಿದೆ. ಯಕ್ಷಗಾನದ ಗುರುಪರಂಪರೆ ಉಳಿಸಿಕೊಂಡು ಹೋಗುವುದು ಹೇಗೆ? ಯಕ್ಷಗಾನದ ಪೂರ್ವರಂಗವೇ ನಿಜವಾದ ಯಕ್ಷಗಾನ. ಇಲ್ಲಿ ಭಾಗವತರು ಪ್ರಧಾನವಾಗಿರುತ್ತಾರೆ. ಅವರು ಗುರುಪರಂಪರೆಯಿಂದ ಬಂದಿರುತ್ತಾರೆ. ಭಾಗವತನೇ ಪ್ರಧಾನ ವೇಷಧಾರಿ: ಕರ್ಣನ ರಥ ಹೂತಾಗ ಏನು ಮಾಡಬೇಕು? ಕರ್ಣಾರ್ಜುನರ ಯುದ್ಧ ಹೇಗೆ?, ವಾಲಿಯ ಒಡ್ಡೋಲಗ, ರಾವಣನ ಆಗಮನ, ಮುಖವರ್ಣಿಕೆ ಏನು?, ರಂಗಸ್ಥಳದಲ್ಲಿ ಅವನ ನಿಲುವೇನು ಎಂಬುದು ಪ್ರಧಾನ ಭಾಗವತರಿಗೆ ಮಾತ್ರ ತಿಳಿದಿರುತ್ತದೆ. ಈ ಸಂಪ್ರದಾಯವೇ ನಿಜವಾದ ಆಟ. ಆಟ ಎಂದರೆ ಸೇವೆ. ಇದನ್ನು ಮುಂದುವರಿಸಿಕೊಂಡು ಹೋದರೆ ಗುರುಪರಂಪರೆ ಉಳಿಯುತ್ತದೆ. ಕಲೆ ಬದುಕಿನ ಸಂಪಾದನೆಗಲ್ಲ. ನಮ್ಮ ಸಂತೋಷ. ಆದರೆ ಈಗ ಅದು ವ್ಯಾಪಾರವಾಗಿದೆ. ರಾಜು ಖಾರ್ವಿ ಕೊಡೇರಿ