Advertisement

Yakshagana ಸಾಧನೆ-ಮನ್ನಣೆ: ಭ್ರಾಮರೀ ಯಕ್ಷಮಣಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್‌

11:29 PM Jul 27, 2024 | Team Udayavani |

ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್‌ ಇದರ ವತಿಯಿಂದ ಕೊಡಮಾಡಲಾಗುವ “ಭ್ರಾಮರೀ ಯಕ್ಷಮಣಿ ಪ್ರಶಸ್ತಿಗೆ ಈ ಬಾರಿ ಸುಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ವರ್ತಮಾನ ಕಾಲದಲ್ಲಿ ಯಕ್ಷಗಾನದ ಶ್ರೇಷ್ಠ ಬಣ್ಣದ ವೇಷಧಾರಿಗಳಲ್ಲಿ ಶೆಟ್ಟಿಗಾರರು ಅಗ್ರಪಂಕ್ತಿಯಲ್ಲಿ ಕಾಣಿಸಿ ಕೊಳ್ಳುತ್ತಾರೆ. ಯಕ್ಷಗಾನ ಪರಂಪರೆಯ ಬಣ್ಣಗಾರಿಕೆ, ಬಣ್ಣಗಾರಿಕೆಯ ಸೂಕ್ಷ್ಮತೆ, ನಾಟ್ಯವೈವಿಧ್ಯ, ರಂಗದ ನಡೆಯ ಜ್ಞಾನ, ಪ್ರಬುದ್ಧ ಮಾತು ಗಾರಿಕೆ.. ಇವೆಲ್ಲವೂ ಶೆಟ್ಟಿಗಾರರನ್ನು ಈ ಎತ್ತರಕ್ಕೆ ಏರಿಸಿವೆ.

1965ರ ಡಿಸೆಂಬರ್‌ 17ರಂದು ಸಿದ್ದಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್‌-ಗಿರಿಯಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶೆಟ್ಟಿಗಾರರು, ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ತಮ್ಮ ಪ್ರಾಥಮಿಕ ವ್ಯಾಸಂಗ ಪೂರೈಸಿ ಸುಪ್ರಸಿದ್ಧ ಕಲಾವಿದರಾದ ರೆಂಜಾಳ ರಾಮಕೃಷ್ಣ ರಾವ್‌ ಅವರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಕಲಿತರು. ಬಣ್ಣದ ವೇಷಗಳ ಬಗ್ಗೆ ಆಸಕ್ತಿ ತಾಳಿ ಸುಪ್ರಸಿದ್ಧ ಬಣ್ಣದ ವೇಷಧಾರಿಗಳಾದ ಬಣ್ಣದ ಮಾಲಿಂಗರಲ್ಲಿ ಶಿಷ್ಯತ್ವ ಸ್ವೀಕರಿಸಿ, ಬಣ್ಣದ ವೇಷಗಳ ಕುರಿತಾದ ಮಾಹಿತಿ ಹಾಗೂ ಬಣ್ಣಗಾರಿಕೆಯ ಮರ್ಮವನ್ನು ಕರಗತ ಮಾಡಿಕೊಂಡರು. 18ನೇ ವಯಸ್ಸಿನಲ್ಲೇ  ಕಟೀಲು ಮೇಳದಲ್ಲಿ ರಂಗ ಪ್ರವೇಶಿಸಿದ ಶೆಟ್ಟಿಗಾರರು, 10 ವರ್ಷಗಳ ಕಾಲ ಮಾಲಿಂಗರ ಒಡನಾಟದಿಂದ ರಂಗ ಪರಿಕ್ರಮದಲ್ಲಿ ಪಾರಂಗತರಾದರು. ಬಳಿಕ ಶೆಟ್ಟಿಗಾರರು ಧರ್ಮಸ್ಥಳ, ಹೊಸನಗರ, ಎಡನೀರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿ ಪ್ರಸ್ತುತ ಕಳೆದ 7 ವರ್ಷಗಳಿಂದ ಹನು ಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಅವರ ನಿರಂತರ 41ನೇ ವರ್ಷದ ತಿರುಗಾಟವಾಗಿದೆ.

ಮಹಿರಾವಣ, ರಾವಣ, ಮಹಿಷಾಸುರ, ತಾರಕಾಸುರ, ಯಮ, ಘಟೋತ್ಕಚ, ರುದ್ರಭೀಮ, ವೀರಭದ್ರ, ಪೂತನೀ, ಶೂರ್ಪನಖೀ ಮುಂತಾದ ಪಾತ್ರಗಳು ಶೆಟ್ಟಿಗಾರರಿಗೆ ಪ್ರಸಿದ್ಧಿ ತಂದಿವೆ. ಶ್ರೀರಾಮ ಕಾರುಣ್ಯ ಪ್ರಸಂಗದಲ್ಲಿ ಕಾಕಾಸುರ ಪಾತ್ರವನ್ನು ಪ್ರಥಮವಾಗಿ ತಮ್ಮದೇ ಬಣ್ಣಗಾರಿಕೆಯ ಕಲ್ಪನೆಯಲ್ಲಿ ಚಿತ್ರಿಸಿದ ಹಿರಿಮೆಯೊಂದಿಗೆ, ಕೋಲು ಕಿರೀಟ, ನಾಟಕೀಯ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲ ಪ್ರತಿಭಾನ್ವಿತರು. ಎಲ್ಲ ಬಣ್ಣದ ವೇಷಗಳು ಸಾಮಾನ್ಯವಾಗಿ ನೋಡುವಾಗ ಒಂದೇ ರೀತಿಯಾಗಿ ಕಂಡರೂ, ಅವುಗಳ ಮುಖವರ್ಣಿಕೆಯಲ್ಲಿ ತುಂಬಾ ವ್ಯತ್ಯಾ ಸಗಳಿವೆ. ಇವೆಲ್ಲ ಸೂಕ್ಷ್ಮತೆಯನ್ನು ಶೆಟ್ಟಿಗಾರರು ಚೆನ್ನಾಗಿ ಬಲ್ಲವ ರಾಗಿದ್ದು, ಆ ರೀತಿಯ ಬಣ್ಣಗಾರಿಕೆ ಏಕೆ ಎಂಬುದರ ಬಗ್ಗೆ ಖಚಿತ ಜ್ಞಾನವನ್ನೂ ಹೊಂದಿದ್ದಾರೆ. ಪಾತ್ರಗಳ ಪರಕಾಯ ಪ್ರವೇಶ ಮಾಡಿ, ಪಾತ್ರಗಳನ್ನು ಅನಾವರಣಗೊಳಿಸುವಲ್ಲಿ ಶೆಟ್ಟಿಗಾರರ ಪ್ರತಿಭೆಯನ್ನು ಗುರುತಿಸಬಹುದು. ಯಕ್ಷರಂಗದ ಇಂತಹ ಮೇರು ಕಲಾವಿದರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್‌ನ ಸುಯೋಗವೇ ಸರಿ.

ಇದೇ ಆಗಸ್ಟ್‌ 3ರ ಶನಿವಾರದಂದು ಮಂಗಳೂರು ಪುರಭವನದಲ್ಲಿ ಜರಗಲಿರುವ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್‌ ಇದರ 7 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸದಾಶಿವ ಶೆಟ್ಟಿಗಾರರಿಗೆ ಗಣ್ಯರ ಸಮಕ್ಷಮದಲ್ಲಿ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನಿಸಲಾಗುವುದು. ಜತೆಯಲ್ಲಿ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ.) ಕೈರಂಗಳ ಹಾಗೂ ಅಪೂರ್ವ ಯಕ್ಷಛಾಯಾಚಿತ್ರಗಳ ಸಂಗ್ರಾಹಕರಾದ ಮನೋಹರ್‌ ಎಸ್‌. ಕುಂದರ್‌, ಎರ್ಮಾಳ್‌ ಬಡಾ ಇವರಿಗೆ “ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಅಂದು ಸಂಜೆ ಗಂಟೆ 4.00ರಿಂದ ಪುರಭವನದಲ್ಲಿ ಕುಂದರ್‌ ಅವರ ಸಂಗ್ರಹದ ಯಕ್ಷಗಾನದ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ರಾತ್ರಿಯಿಂದ ಮರುದಿನ ಮುಂಜಾನೆವರೆಗೆ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪಂಚವಟಿ, ಸುಧನ್ವ ಮೋಕ್ಷ, ಕಂಸ ವಿವಾಹ, ಮಹಿರಾವಣ ಕಾಳಗ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

Advertisement

ಎಂ. ಶಾಂತರಾಮ ಕುಡ್ವ, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next