ಬೆಂಗಳೂರು: 2019ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಹಿರಿಯ ಕವಿ ಅಂಬಾತನಯ ಮುದ್ರಾಡಿ, ಡಾ ಚಂದ್ರಶೇಖರ್ ದಾಮ್ಲೆ ಸೇರಿದಂತೆ ಒಟ್ಟು 19 ಮಂದಿಗೆ ಈ ಬಾರಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಿರಿಯ ಯಕ್ಷಗಾನ ಕವಿ ಮತ್ತು ಅರ್ಥಧಾರಿಗಳಾಗಿರುವ ಅಂಬಾತನಯ ಮುದ್ರಾಡಿ ಅವರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಕ್ಷಗಾನ ತಾಳಮದ್ದಳೆ ಅರ್ಥದಾರಿಯಾಗಿ ಭಾಗವಹಿಸಿದ್ದಲ್ಲದೆ ಇಡಗುಂಜಿ ಮೇಳದಲ್ಲಿ ಎರಡು ವರ್ಷ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಕೃತಿಗಳನ್ನೂ ಪ್ರಕಟಿಸಿರುವ ಇವರಿಗೆ 2008ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಗೌರವ ಪ್ರಶಸ್ತಿ: ಯಕ್ಷಗಾನ ವಿದ್ವಾಂಸರಾದ ಡಾ, ಚಂದ್ರಶೇಖರ್ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ಯಕ್ಷಗಾನ ಕಲಾವಿದರು ಮತ್ತು ವಿದ್ವಾಂಸ ಡಾ. ರಾಮಕೃಷ್ಣ ಗುಂದಿ, ಮೂಡಲಪಾಯ ಯಕ್ಷಗಾನ ಕಲಾವಿದ ಮತ್ತು ಸಂಘಟಕ ಕೆ.ಸಿ ನಾರಾಯಣ, ಮೂಡಲಪಾಯ ಯಕ್ಷಗಾನ ತಜ್ಞ ಡಾ. ಚಂದ್ರು ಕಾಳೇನಹಳ್ಳಿ ಅವರನ್ನು ಈ ಬಾರಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ: ಯಕ್ಷಗಾನ ಮದ್ದಲೆ ವಾದಕ ನಲ್ಲೂರು ಜನಾರ್ಧನ ಆಚಾರ್, ಯಕ್ಷಗಾನ ಗುರುಗಳು ಮತ್ತು ವೇಷಧಾರಿ ಉಬರಡ್ಕ ಉಮೇಶ ಶೆಟ್ಟಿ, ಹಿರಿಯ ಭಾಗವತ ಕುರಿತ ಗಣಪತಿ ಶಾಸ್ತ್ರಿ, ಕಲಾವಿದರಾದ ಆರ್ಗೋಡು ಮೋಹನ್ ದಾಸ್ ಶೆಣೈ, ಮಹಮ್ಮದ್ ಗೌಸ್, ಪ್ರಸಾಧನ ಕಲಾವಿದ ಮೂರುರು ರಾಮಚಂದ್ರ ಹೆಗಡೆ, ತಾಳಮದ್ದಳೆ ಅರ್ಥಧಾರಿ ಎಂ ಎನ್ ಹೆಗಡೆ ಹಳವಳ್ಳಿ, ಯಕ್ಷಗಾನ ವೇಷಧಾರಿ ಹಾರಾಡಿ ಸರ್ವೋತ್ತಮ ಗಾಣಿಗ, ಮೂಡಲಪಾಯ ಯಕ್ಷಗಾನ ಮುಖವೀಣೆ ಕಲಾವಿದ ಬಿ. ರಾಜಣ್ಣ, ಮೂಡಲಪಾಯ ಯಕ್ಷಗಾನದ ಸ್ತ್ರೀ ವೇಷಧಾರಿ ಎ ಜಿ ಅಶ್ವಥ ನಾರಾಯಣ ಅವರನ್ನು 2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪುಸ್ತಕ ಬಹುಮಾನ: ಪುಸ್ತಕ ಬಹುಮಾನ ವಿಭಾಗದಲ್ಲಿ ಯಕ್ಷಗಾನ ವೀರಾಂಜನೇಯ ವೈಭವ ಪುಸ್ತಕಕ್ಕೆ ಹೊಸ್ತೋಟ ಮಂಜುನಾಥ್ ಭಾಗವತ, ಅಗರಿ ಮಾರ್ಗ ಪುಸ್ತಕಕ್ಕೆ ಕೃಷ್ಣಪ್ರಕಾಶ ಉಳಿತ್ತಾಯ, ಮೂಡಲಪಾಯ ಯಕ್ಷಗಾನ ಬಯಲಾಟ- ಒಂದು ಅಧ್ಯಯನ ಸಂಶೋಧನಾ ಕೃತಿಗೆ ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.