Advertisement
ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಯ ದ್ವಿತೀಯ ಪುತ್ರರಾದ ಅನಂತರಾಮ ಅವರು ತುಳು ಭಾಷೆಯಲ್ಲಿ ಜೋತಿಷ ಗ್ರಂಥವನ್ನು ಮೊತ್ತಮೊದಲ ಬಾರಿಗೆ ಬರೆದ ಸಂಶೋಧಕ. 150ಕ್ಕೂ ಅಧಿಕ ಯಕ್ಷಗಾನ ಪ್ರಸಂಗ ರಚಿಸಿದ ತುಳುನಾಡಿನ ಅಪರೂಪದ ಸಾಧಕ.
1951ರ ನ.14ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಬಂಗಾಡಿಯಲ್ಲಿ ಪೂರೈಸಿ, ಹೈಸ್ಕೂಲು ವಿದ್ಯಾಭ್ಯಾಸ ವನ್ನು ಹಾಸನದ ಹೆತ್ತೂರಿನಲ್ಲಿ ಆರಂಭಿಸಿ ಎಸೆಸೆಲ್ಸಿ ಪೂರ್ಣ ಗೊಳಿಸಿದರು. ಕವಿ ನೀಲಕಂಠ ಭಟ್ ಶಿರಾಡಿಪಾಲರ ಮಾರ್ಗ ದರ್ಶನದಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ಶಿಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ ಛಂದಸ್ಸನ್ನು ಅಧ್ಯಯನ ಮಾಡಿದ್ದರು. ಜೋತಿಷಿ, ಸಾಹಿತಿ, ಹರಿಕಥಾ ಪ್ರವಚನಕಾರ, ನಾಟಕ ದಿಗªರ್ಶಕ, ತೊಗಲು ಬೊಂಬೆಯಾಟ ಸೇರಿದಂತೆ ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡªನ ಪರಿಣತಿ ಪಡೆದ ಬಹು ಅಪೂರ್ವ ಸಾಧಕರಾಗಿ ಜಿಲ್ಲೆಯ ಮನೆಮಾತಾಗಿದ್ದರು. ಕ್ರೈಸ್ತ ಸಂತರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸುವದ ರೊಂದಿಗೆ ಹೊಸ ಭಾಷ್ಯ ಬರೆದಿದ್ದರು. ಸಮಾನಮನಸ್ಕ ಸ್ನೇಹಿತರೊಡಗೂಡಿ “ಸೌಹಾರ್ದ ಕಲಾವಿದರು ಯಕ್ಷರಂಗ ಬಂಗಾಡಿ’ ಎಂಬ ತಂಡ ಕಟ್ಟಿ ಸುಮಾರು 15 ವರ್ಷ ಯಕ್ಷ ಕಲೆಯನ್ನು ಪಸರಿಸಲು ಅಪಾರ ಕೊಡುಗೆ ಸಲ್ಲಿಸಿದ್ದರು.
Related Articles
Advertisement
ಪ್ರಶಸ್ತಿ ಪುರಸ್ಕಾರಭಾರತೀಯ ಜೋತಿಷ ಸಂಸ್ಥೆಯಿಂದ “ಜೋತಿಷ ಜ್ಞಾನರತ್ನ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಬೆವೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ, ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ, ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ, ಅಖೀಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ತುಳುನಾಡ ಸಿರಿ ಪ್ರಶಸ್ತಿ, ಸ್ಕಂದ ಪುರಸ್ಕಾರ ಮತ್ತು ಇತ್ತೀಚೆಗೆ ದೊರೆತ ಯಕ್ಷದೇವ ಪ್ರಶಸ್ತಿ ಜತೆಗೆ ನೂರಾರು ಸಂಘ – ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಪುರಸ್ಕರಿಸಿವೆ. ಮೃತರು ಪತ್ನಿ ಸುಮತಿ, ಮಗ ಸಂದೇಶ್ ಬಂಗಾಡಿ, ಮಗಳು ಸಂಧ್ಯಾ, ಅಳಿಯ ಹಿರೇಬೆಟ್ಟು ಕೇಶವ ಭಂಡಾರಿ ಮೊದಲಾದವರನ್ನು ಅಗಲಿದ್ದಾರೆ.