Advertisement

ಭ್ರಾಮರೀ ಯಕ್ಷಮಿತ್ರರು ಯಕ್ಷ ವೈಭವ

02:05 AM Sep 13, 2019 | Team Udayavani |

ಯಕ್ಷಗಾನದ ಪ್ರವರ್ತನೆಗಾಗಿಯೇ ಹುಟ್ಟಿಕೊಂಡ ಭ್ರಾಮರೀ ಯಕ್ಷಮಿತ್ರರು ಗ್ರೂಪ್‌ ಇದೀಗ ಸಾರ್ಥಕ ನಾಲ್ಕನೇ ವರ್ಷದ ಹೊಸ್ತಿಲಲ್ಲಿದೆ. ಪ್ರತಿವರ್ಷವೂ ಯಕ್ಷವೈಭವ ಎಂಬ ಹೆಸರಲ್ಲಿ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಯಕ್ಷಗಾನ ಸಾಧಕರನ್ನು ಗುರುತಿಸಿ ಬ್ರಾಮರಿ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸುವುದಲ್ಲದೆ , ನೇಪಥ್ಯದ ಕಲಾವಿದರನ್ನೂ ಗುರುತಿಸಿ ಸಮ್ಮಾನಿಸುವ , ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ.

Advertisement

ವಿನಯಕೃಷ್ಣ ಕುರ್ನಾಡುರವರು 2015ರಲ್ಲಿ ಸಮಾನ ಮನಸ್ಕ ಮಿತ್ರರೊಂದಿಗೆ ಸ್ಥಾಪಿಸಿದ ಬ್ರಾಮರೀ ಯಕ್ಷ ಮಿತ್ರರು ಗ್ರೂಪಿನಲ್ಲಿ ಸಮಾಜದ ಎಲ್ಲ ಸ್ತರಗಳ ಮಂದಿ ಸದಸ್ಯರಾಗಿದ್ದಾರೆ. ಯಕ್ಷಗಾನ ವಾಟ್ಸಾಪ್‌ ಗ್ರೂಪ್‌ಗ್ಳಲ್ಲೇ ಪ್ರಥಮವಾಗಿ ನೋಂದಣಿಗೊಂಡ ಗ್ರೂಪ್‌ ಎಂಬ ಹೆಗ್ಗಳಿಕೆ ಇದಕ್ಕಿದೆ. ಅರ್ಥಪೂರ್ಣವಾದ ಯಕ್ಷಗಾನ ಕಾರ್ಯಕ್ರಮಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದೆ.

ನಾಲ್ಕನೇ ವಾರ್ಷಿಕೋತ್ಸವ ಸೆ.14ರಂದು ರಾತ್ರಿ 7.00 ರಿಂದ ಮರುದಿನ ಮುಂಜಾವಿನ ತನಕ ಮಂಗಳೂರಿನ ಪುರಭವನದಲ್ಲಿ ಜರುಗಲಿದ್ದು, ಪಾರೆಕೋಡಿ ಗಣಪತಿ ಭಟ್‌ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ,ನೇಪಥ್ಯ ಕಲಾವಿದರಾದ ಕೃಷ್ಣಪ್ಪ ಪೂಜಾರಿ ಮತ್ತು ನಾರಾಯಣ ಪುರುಷ ಅವರಿಗೆ ಸಮ್ಮಾನ, ಸುರೇಂದ್ರ ಪಣಿಯೂರುರವರು ಬರೆದ “ನಾ ಕಂಡಂತೆ ಕಾಳಿಂಗ ನಾವಡರು’ ಎಂಬ ಕೃತಿಯ ಲೋಕಾರ್ಪಣೆ ನಡೆಯಲಿದೆ . ಅನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚೂಡಾಮಣಿ – ರಾಮಾಂಜನೇಯ – ದ್ರೌಪದೀ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ .

ಪಾರೆಕೋಡಿ ಗಣಪತಿ ಭಟ್‌
ಕುರುಡುಪದವು ಗ್ರಾಮದ ಪಾರೆಕೋಡಿನವರಾದ ಗಣಪತಿ ಭಟ್‌ 19ನೇ ಹರೆಯದಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ನೆಡ್ಲೆ ನರಸಿಂಹ ಭಟ್ಟರಿಂದ ಭಾಗವತಿಕೆ ಕಲಿತು ಪುತ್ತೂರು ಮೇಳದಲ್ಲಿ ಸಂಗೀತಗಾರರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಮುಂದೆ ಪೂರ್ಣ ಪ್ರಮಾಣದ ಭಾಗವತರಾಗಿ ಬಪ್ಪನಾಡು , ಕಟೀಲು , ಸದಾಶಿವ ಮಹಾಗಣಪತಿ ಮೇಳಗಳಲ್ಲಿ ತಿರುಗಾಟ ನಡೆಸಿದರು . ಉತ್ತಮ ಕಂಠದೊಂದಿಗೆ , ಪೌರಾಣಿಕ ಜ್ಞಾನ ಹೊಂದಿರುವ ಭಟ್ಟರು ರಂಗನಡೆಯಲ್ಲೂ ನಿಷ್ಣಾತರಾಗಿ ಮೆರೆದರು . ಪ್ರಸ್ತುತ ತಿರುಗಾಟ ಮಾಡದಿದ್ದರೂ ಆಗಾಗ ಭಾಗವತಿಕೆ ಮಾಡುತ್ತಾ ಸಕ್ರಿಯರಾಗಿದ್ದಾರೆ . ಹಲವಾರು ಶಿಷ್ಯಂದಿರಿಗೆ ಭಾಗವತಿಕೆ ಕಲಿಸಿ ಗುರುಗಳಾಗಿಯೂ ಗುರುತಿಸಿಕೊಂಡಿದ್ದಾರೆ .

ಕೃಷ್ಣಪ್ಪ ಪೂಜಾರಿ
ಬೆಳ್ಳಾರೆ ಮಣಿಮಜಲು ಗ್ರಾಮದ ಕೃಷ್ಣಪ್ಪರು ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಕಲಿತದ್ದು 2 ತರಗತಿಯವರೆಗಾದರೂ, ಯಕ್ಷಗಾನದ ಪಾತ್ರ , ವೇಷಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ . ಯಾವ ಪಾತ್ರಗಳಿಗೆ ಯಾವ ವೇಷಭೂಷಣ, ಕಿರೀಟ, ಆಯುಧ ಎಂಬುದರ ಬಗ್ಗೆ ಚೆನ್ನಾಗಿ ಅರಿತಿರುವ ಕೃಷ್ಣಪ್ಪರು ಕಲಾವಿದರಿಗೆ ಅನಿವಾರ್ಯ ಎನಿಸಿಕೊಂಡಿದ್ದಾರೆ . ಕಟೀಲು, ಎಡನೀರು , ಹೊಸನಗರ ಮುಂತಾದ ಮೇಳಗಳಲ್ಲಿ 25 ವರ್ಷಗಳ ತಿರುಗಾಟ ನಡೆಸಿರುವ ಕೃಷ್ಣಪ್ಪರು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ .

Advertisement

ನಾರಾಯಣ ಪುರುಷ
ಬಾಯಾರು ಸಮೀಪದ ಪಜಂಕಿಲ ಗ್ರಾಮದ ನಾರಾಯಣ ಪುರುಷರು ವೇಷಗಾರಿಕೆ ಹಾಗೂ ಪ್ರಸಾಧನಗಳ ಬಗ್ಗೆ ಅಭ್ಯಸಿಸಿ 20ನೇ ವಯಸ್ಸಿನಲ್ಲೇ ನೇಪಥ್ಯದ ಕಲಾವಿದರಾಗಿ ಯಕ್ಷಗಾನ ಮೇಳ ಸೇರಿದರು . ಕಟೀಲು , ಎಡನೀರು ಮೇಳಗಳಲ್ಲಿ 20 ವರ್ಷಗಳ ತಿರುಗಾಟ ನಡೆಸಿ , ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯಲ್ಲಿ ವೇಷಭೂಷಣ ತಯಾರಿಕೆಯಲ್ಲಿ 12 ವರ್ಷಗಳ ಕಾಲ ತೊಡಗಿಸಿಕೊಂಡರು . ಯಕ್ಷಗಾನದ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಿ ಸಾಧಿಸಿರುವ ನಾರಾಯಣ ಪುರುಷರು ಅಸೌಖ್ಯದಿಂದಾಗಿ ಇತ್ತೀಚೆಗೆ ಯಕ್ಷರಂಗದಿಂದ ನಿವೃತ್ತರಾಗಿದ್ದಾರೆ.

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next