Advertisement

ಘನ್ಸೋಲಿಯಲ್ಲಿ ಯಕ್ಷ ಸಂಕ್ರಾಂತಿ ಸರಣಿ ಯಕ್ಷಗಾನ ಪ್ರದರ್ಶನ

05:05 PM Jul 20, 2017 | Team Udayavani |

ನವಿಮುಂಬಯಿ: ಯಕ್ಷಗಾನ ಎಂಬುದು ನಮ್ಮ ನಾಡಿನ ಗಂಡುಕಲೆಯಾಗಿದೆ. ಅಂತಹ ಕಲೆಯನ್ನು ಕರ್ಮಭೂಮಿಯಾದ ಈ ಮರಾಠಿ ಮಣ್ಣಿನಲ್ಲಿ ನಾವು ಪೋಷಿಸುವುದು ಅಗತ್ಯ. ಕಲೆಗೆ ಯಾವುದೇ ರೀತಿಯ ಜಾತಿ, ಧರ್ಮ ಇಲ್ಲ. ಮೊಹಮ್ಮದ್‌ ಗೌಸ್‌ ಅವರು ಓರ್ವ ಮುಸ್ಲಿಂ ಕಲಾವಿದನಾದರೂ ಊರಿನ ಅಪ್ರತಿಮ ಕಲಾವಿದರನ್ನು ಆರಿಸಿ ಮುಂಬಯಿಗೆ ಬಂದು ಕಳೆದ 7 ವರ್ಷಗಳಿಂದ ದೇವಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾ ನಮಗೆ ಯಕ್ಷಗಾನದ ರಸದೌತಣ ನೀಡುತ್ತಾ ಬಂದಿದ್ದಾರೆ. ಅಂತಹ ಕಲಾವಿದರನ್ನು ನಾವು ಪ್ರೋತ್ಸಾಹಿಸುವುದು ಅಗತ್ಯ. ದೇವಿಯ ಸನ್ನಿಧಿಯಲ್ಲಿ ಇದೇ ರೀತಿಯಲ್ಲಿ ನಿರಂತರವಾಗಿ ಯಕ್ಷಗಾನ ಬಯಲಾಟ ನಡೆಯುತ್ತಿರಲಿ ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ ನುಡಿದರು.

Advertisement

ಜು. 17ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಮಹಮ್ಮದ್‌ ಗೌಸ್‌ ಅವರ ಸಂಚಾಲಕತ್ವದ ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇವರ 7ನೇ ವಾರ್ಷಿಕ ಮುಂಬಯಿ ಪ್ರವಾಸದ ಯಕ್ಷ ಸಂಕ್ರಾಂತಿ ಸರಣಿ ಯಕ್ಷಗಾನ ಪ್ರದರ್ಶನದ 2ನೇ ದಿನದ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲೆ, ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮುಂಬಯಿಯಲ್ಲಿ ನಿರಂತರವಾಗಿ ಸಿಗುತ್ತಿರಲಿ ಎಂದು ನುಡಿದರು.

ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಾರ್ಯಕ್ರಮಗಳ ಮಧ್ಯೆ ಇಂತಹ ಸಭಾ ಕಾರ್ಯಕ್ರಮ ಅಗತ್ಯವಾಗಿರಬೇಕು. ನಿಮಗೆ ರಸಭಂಗವಾಗಬಹುದು. ಆದರೆ ಸೇವೆ ನೀಡಿದವರನ್ನು ಪರಿಚಯಿಸಿ ಅವರನ್ನು ಸಮ್ಮಾನಿಸುವುದರಿಂದ ಅವರಿಗೆ ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ನೀಡುವ ಹುರುಪು ಬರುತ್ತದೆ. ಅಲ್ಲದೆ ಕಲಾವಿದರನ್ನು ಸಮ್ಮಾನಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಶ್ಯಾಮ ಶೆಟ್ಟಿ ಅವರು ನೀಡಿದ ಯಕ್ಷಗಾನ ಸೇವೆಯನ್ನು ಮೂಕಾಂಬಿಕೆಯು ಸ್ವೀಕರಿಸಿ ಹರಸುತ್ತಾಳೆ. ಏಳು ವರ್ಷಗಳ ಹಿಂದೆ ಮಹಮ್ಮದ್‌ ಗೌಸ್‌ ಅವರ ಮೇಳದ ಯಕ್ಷಗಾನ ಪ್ರದರ್ಶನದಿಂದ ಶ್ಯಾಮಣ್ಣನವರು ಪ್ರಭಾವಿತ ರಾಗಿ ಪ್ರತೀ ವರ್ಷ ಸೇವೆ ನೀಡುತ್ತಾ ಬಂದಿದ್ದಾರೆ. ನಾವು ಸಂಪಾದಿಸಿದ್ದರಲ್ಲಿ ಒಂದು ಭಾಗವನ್ನಾದರೂ ಇಂತಹ ಕಲಾಸೇವೆಗೆ ನೀಡಿದಲ್ಲಿ ಅದು ದೇವರಿಗೆ ಖಂಡಿತಾ ಅರ್ಪಣೆಯಾಗುತ್ತದೆ. ಇಂಥ ಜಡಿ ಮಳೆಯಲ್ಲೂ ತುಂಬಿದ ಪ್ರೇಕ್ಷಕರನ್ನು ಕಂಡಾಗ ಸಂತೋಷವಾಗುತ್ತದೆ ಎಂದು ನುಡಿದು, ಮೂಕಾಂಬಿಕೆಯ ಅನುಗ್ರಹ ಸದಾ ಇರಲಿ ಎಂದರು.

 ಅತಿಥಿಯಾಗಿ ಪಾಲ್ಗೊಂಡ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಮಾತನಾಡಿ, ಇಲ್ಲಿ ನಿರಂತರ ಯಕ್ಷಗಾನ ಬಯಲಾಟ ನಡೆಯುತ್ತಾ ಇದೆ. ಅಣ್ಣಿ ಶೆಟ್ಟಿ ಅವರು ಹಾಗೂ ಅವರ ಸಮಿತಿಯ ಸದಸ್ಯರು, ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇಲ್ಲಿ ಇದೇ ರೀತಿಯಲ್ಲಿ ಯಕ್ಷಗಾನ ಸೇವೆ ನಡೆಯುತ್ತಾ ಇರಲಿ. ನಿಮಗೆಲ್ಲರಿಗೂ ಶ್ರೀ ಶನೀಶ್ವರ ದೇವರ ಕೃಪೆ ಸದಾಯಿರಲಿ ಎಂದು ನುಡಿದರು.

ಇದೇ ಸಂದರ್ಭ ಶ್ಯಾಮ್‌ ಎನ್‌. ಶೆಟ್ಟಿ ಅವರು ಸಂಚಾಲಕ ಮಹಮ್ಮದ್‌ ಗೌಸ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸಹಾಯ ನಿಧಿಯನ್ನಿತ್ತು ಸಮ್ಮಾನಿಸಿದರು. ಮೇಳದ ವತಿಯಿಂದ ಕಾರ್ಯಕ್ರಮದ ಪ್ರಾಯೋಜಕ ಶ್ಯಾಮ್‌ ಎನ್‌. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.

Advertisement

ಸಮ್ಮಾನ ಸ್ವೀಕರಿಸಿ ಮಾತನಾಡಿ ಮಹಮ್ಮದ್‌ ಗೌಸ್‌ ಅವರು, ಶ್ಯಾಮ್‌ ಶೆಟ್ಟಿ ದಂಪತಿ ನನಗೆ ತಂದೆ-ತಾಯಿಗೆ ಸಮಾನ. ಅವರು ಕಲೆಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಈ ದೇವಿಯ ಸನ್ನಿಧಿಯಲ್ಲಿ ಅವರನ್ನು ಸಮ್ಮಾನಿಸುವ ಭಾಗ್ಯ ನನಗೆ ಒದಗಿದ್ದು ತುಂಬಾ ಸಂತೋಷವಾಗುತ್ತಿದೆ. ಅಣ್ಣಿ ಶೆಟ್ಟಿ ಹಾಗೂ ಅವರ ದೇವಾಲಯದವರ ಪ್ರೋತ್ಸಾಹದಿಂದ ಸತತ 7 ವರ್ಷಗಳಿಂದ ನಿರಂತರ ಇಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ನಿಮಗೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ ಎಂದರು.

ವೇದಿಕೆಯಲ್ಲಿ ಪೆಸ್ಟ್‌ ಮೋರ್ಟಮ್‌ ಪ್ರೈವೇಟ್‌ ಲಿಮಿಟೆಡ್‌ನ‌ ಜೆ. ಪಿ. ಶೆಟ್ಟಿ, ಹೊಟೇಲ್‌ ಫೆಡರೇಶನ್‌ ಆಫ್‌ ಮಹಾರಾಷ್ಟÅದ ಅಧ್ಯಕ್ಷ ಜಗನ್ನಾಥ್‌ ಕೆ. ಶೆಟ್ಟಿ, ಶ್ರೀ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್‌ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ಉಪಾಧ್ಯಕ್ಷರಾದ ಸುರೇಶ್‌ ಎಸ್‌. ಕೋಟ್ಯಾನ್‌, ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಮೇಳದ ಸಂಚಾಲಕ ಮಹಮ್ಮದ್‌ ಗೌಸ್‌ ಉಪಸ್ಥಿತರಿದ್ದರು. ಸುರೇಶ್‌ ಕೋಟ್ಯಾನ್‌ ಅತಿಥಿಗಳನ್ನು ಸ್ವಾಗತಿಸಿದರು. ಮಹಮ್ಮದ್‌ ಗೌಸ್‌ ಅವರು ಅತಿಥಿಗಳನ್ನು ಗೌರವಿಸಿದರು. ಸುರೇಶ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮ್‌ ಎನ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಯಕ್ಷ ಸೌರಭ ಪ್ರವಾಸಿ ಮೇಳದ ಪ್ರಸಿದ್ಧ ಕಲಾವಿದರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು. ಕೊನೆಯಲ್ಲಿ ಶ್ಯಾಮ್‌ ಎನ್‌. ಶೆಟ್ಟಿ ಅವರ ವತಿಯಿಂದ ಅನ್ನದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next