Advertisement

ಕಲೆಗೆ ಅನುದಾನ ನೀಡುವಾಗ ನಿರ್ಲಕ್ಷ್ಯ ಸಲ್ಲದು: ಪ್ರೊ|ಹೆಗಡೆ

08:20 AM Apr 25, 2018 | Team Udayavani |

ಉಳ್ಳಾಲ: ಕಲೆ, ಸಾಹಿತ್ಯ ಎನ್ನುವುದು ಅನುತ್ಪಾದಕ ಸಂಗತಿಯಲ್ಲ, ಸರಕಾರ ಕಲೆಗೆ ಅನುದಾನ ನೀಡುವಾಗ ನಿರ್ಲಕ್ಷ್ಯ ಸಲ್ಲದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ ಅಭಿಪ್ರಾಯಪಟ್ಟರು. ಕೊಣಾಜೆ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಮಂಗಳವಾರ ಜರಗಿದ ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಮತ್ತು ಯಕ್ಷಮಂಗಳ ಕೃತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ಕಲೆ ಮತ್ತು ಸಾಹಿತ್ಯ ಮನಸ್ಸಿಗೆ ಸಂಸ್ಕಾರ ಕೊಡುವ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ಇಂತಹ ವಿಚಾರಕ್ಕೆ ಸರಕಾರ ಸರಿಯಾದ ಅನುದಾನ ನೀಡುವ ಮೂಲಕ ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸಬೇಕು ಎಂದರು.

Advertisement

ಪ್ರಶಸ್ತಿ ಪ್ರದಾನ ನಡೆಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ ಮಾತನಾಡಿ, ಯಕ್ಷಗಾನದ ಮೇಲೆ ಸಂಶೋಧನೆ ಮಾಡುವವರಿಗೆ ಅಕಾಡೆಮಿಯ ಮೂಲಕ ಶಿಷ್ಯ ವೇತನ ನೀಡುವ ಕಾರ್ಯ ಆದಾಗ ಯಕ್ಷಗಾನ ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ದಿಗ್ಗಜರಾದ ಮತ್ಯಾಡಿ ನರಸಿಂಹ ಶೆಟ್ಟಿ, ಪಾತಾಳ ವೆಂಕಟ್ರಮಣ ಭಟ್ಟ ಹಾಗೂ ಪೆರುವೋಡಿ ನಾರಾಯಣ ಭಟ್‌ ಇವರಿಗೆ ಯಕ್ಷಮಂಗಳ ಪ್ರಶಸ್ತಿ ಹಾಗೂ ಯಕ್ಷಗಾನ ಛಂದೋಂಬುಧಿ ಕೃತಿಗೆ ಡಾ| ಎನ್‌. ನಾರಾಯಣ ಶೆಟ್ಟಿ ಶಿಮಂತೂರು ಅವರಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಂಕಣಕಾರ ನಾ. ಕಾರಂತ ಪೆರಾಜೆ ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ  ಗೌರವ ನಿರ್ದೇಶಕ ಪ್ರೊ| ಕೆ. ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.

ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಧನಂಜಯ ಕುಂಬಳೆ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಶೋಧನಾ ಸಹಾಯಕ ಸತೀಶ್‌ ಕೊಣಾಜೆ ವಂದಿಸಿದರು. ವಿದ್ಯಾರ್ಥಿಗಳಾದ ಮೈತ್ರಿ ಭಟ್‌, ಆಶಾ ಎಂ.ಎಚ್‌. ಸಮ್ಮಾನ ಪತ್ರ ವಾಚಿಸಿದರು. ಸಂಶೋಧನಾ ಅಧಿಕಾರಿ ಡಾ| ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ಮತ್ತು  ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಮತ್ತು  ದೀವಿತ್‌ ಎಸ್‌. ಪೆರಾಡಿ ಇವರಿಂದ ರಾಧಾ ವಿಲಾಸ ಏಕವ್ಯಕ್ತಿ ಯಕ್ಷ ಪ್ರಯೋಗ ನಡೆಯಿತು.

Advertisement

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 20ರಿಂದ 25 ವಯಸ್ಸಿನವರು ಪ್ರವೇಶಿಸುತ್ತಾರೆ. ಆದರೆ ಪ್ರಾಥಮಿಕ ಶಿಕ್ಷಣ ಪಡೆದ ನಾವು 90ರ ಹರೆಯದಲ್ಲಿ ಯಕ್ಷಮಂಗಳ ಪ್ರಶಸ್ತಿಯ ಮೂಲಕ ವಿಶ್ವವಿದ್ಯಾನಿಲಯದ ಗೌರವಕ್ಕೆ ಪಾತ್ರರಾಗಲು ಯಕ್ಷಗಾನದಂತಹ ಕಲೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಧ್ಯವಾಯಿತು. ಇಂತಹ ಗೌರವ ಪಡೆದ ನಾವು ನಿಜವಾಗಿ ಧನ್ಯರು.
– ಪೆರುವೋಡಿ ನಾರಾಯಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next