Advertisement

ಯಕ್ಷ ಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ವಿಶೇಷ ಸಭೆ

01:00 PM May 24, 2019 | Team Udayavani |

ಮುಂಬಯಿ: ಸ್ವತಃ ಯಕ್ಷಕಲಾವಿದನಾಗಿ, ಕಲಾವಿದರ ದುಃಖ, ದುಮ್ಮಾನಗಳನ್ನು ತೀರಾ ಹತ್ತರದಿಂದ ಕಂಡು ನೊಂದು ಅವರ ಬದುಕಿಗೆ ಆಸರೆ ನೀಡಬೇಕು ಎನ್ನುವ ಉದ್ದೇಶದಿಂದ ಪಟ್ಲ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭಗೊಂಡು, ಇಂದು ವಿಶ್ವಾದ್ಯಂತ ಸುಮಾರು 33 ಘಟಕಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಇದೀಗ ವಿಶ್ವಮಾನ್ಯ ಸಂಸ್ಥೆಯಾಗಿ ರೂಪು ಗೊಂಡಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಇದರ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹೇಳಿದರು.

Advertisement

ಮೇ 20ರಂದು ಕುರ್ಲಾ ಪೂರ್ವದ ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಎನೆಕ್ಸ್‌ ಸಂಕೀರ್ಣದ ಸಭಾಗೃಹದಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ನ ಸೇವಾ ಯೋಜನೆಗಳಿಗೆ ದೇಶ- ವಿದೇಶಗಳಲ್ಲಿರುವ ಕಲಾ ಪೋಷಕರ ತುಂಬು ಹೃದಯದ ಪ್ರೋತ್ಸಾಹ, ಸಹಕಾರ ದೊರೆ ಯುತ್ತಿದ್ದು, ಭವಿಷ್ಯದಲ್ಲಿ ಈ ಸಂಸ್ಥೆಯು ಯಕ್ಷ ಕಲಾವಿದರ ಆಧಾರ ಸ್ತಂಭವಾಗಿ ಯಶಸ್ಸಿನತ್ತ ಸಾಗಲಿದೆ ಎಂದದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರು, ಪಟ್ಲ ಸತೀಶ್‌ ಶೆಟ್ಟಿ ಅವರು ಯಕ್ಷ ಕಲಾವಿದರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ತಿಳಿದವರು. ಅವರ ಬದುಕಿಗೆ ಹೊಸ ಜೀವ ನೀಡುವಲ್ಲಿ ತನ್ನನ್ನು ತಾನೇ ಅರ್ಪಣೆ ಮಾಡಿದವರು. ಕಲೆ ಮತ್ತು ಕಲಾವಿದರ ಉಳಿವಿಗೆ ಹೋರಾಟ ನಡೆಸುತ್ತಿರುವ ಅವರ ಕಾರ್ಯ ಅಭಿನಂದನೀಯ. ಪಟ್ಲ ಫೌಂಡೇಷನ್‌ ತುಳು-ಕನ್ನಡಿಗ ಯಕ್ಷಕಲಾವಿದರ ಮಾದರಿ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ಆಶಯವಿದ್ದು, ಅಕ್ಟೋಬರ್‌ 2 ರಂದು ಜರಗಲಿರುವ ಮುಂಬಯಿ ಘಟಕದ ವಾರ್ಷಿಕೋತ್ಸವವನ್ನು ಅತಿ ಸಂಭ್ರಮದಿಂದ ನಡೆಸಲು ಮುಂಬಯಿಗರ ಸಹಕಾರ, ಪ್ರೋತ್ಸಾಹ ಇರಲಿ ಎಂದು ನುಡಿದರು.
ಮುಂಬಯಿ ಘಟಕದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಮಾತನಾಡಿ, ಕೊಡುವವರ ಭಾಗ್ಯಕ್ಕಿಂತ ಪಡೆಯುವವರ ಭಾಗ್ಯವೇ ಹೆಚ್ಚಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಶ್ರಮಿಸೋಣ ಎಂದರು.

ಇನ್ನೋರ್ವ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮಂಡ್ಕೂರು ಅವರು ಮಾತನಾಡಿ, ಕಲಾವಿದರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅವರಿಗಾಗಿ ಈಗಾಗಲೇ ಕೋಟ್ಯಂತರ ರೂ. ಗಳನ್ನು ವ್ಯಯಿಸಿರುವುದಕ್ಕೆ ಸಂಸ್ಥೆಯನ್ನು ಅಭಿನಂದಿಸಿದರು.
ಉಪಾಧ್ಯಕ್ಷ ಗುಣಪಾಲ್‌ ಶೆಟ್ಟಿ ಐಕಳ ಅವರು ಮಾತನಾಡಿ, ಪಟ್ಲ ಸತೀಶ್‌ ಶೆಟ್ಟಿ ಅವರ ಸಾಧನೆಗೆ ಕಟೀಲು ಶ್ರೀದೇವಿಯ ಸಂಪೂರ್ಣ ಅನುಗ್ರಹ ಇರುವುದರಿಂದಲೇ ಇದೆಲ್ಲ ಸಾಧ್ಯವಾಗಿದೆ ಎಂದರು.
ಹಿರಿಯ ಯಕ್ಷ ಕಲಾವಿದ, ಗೌರವ ಸಲಹೆಗಾರ ಕೆ. ಕೆ. ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಕಲಾವಿದ ರಿಗಾಗಿ ಕಲಾವಿದ ಪಟ್ಲ ಸತೀಶ್‌ ಶೆಟ್ಟಿ ಅವರು ಮಾಡಿರುವ ಸಾಧನೆ, ಅವರಲ್ಲಿರುವ ಜಾಣ್ಮೆ ಮತ್ತು ಚಾಣಾಕ್ಷತೆಯ ಪ್ರತಿರೂಪವೆಂದು ಬಣ್ಣಿಸಿದರು. ಕಿರು ವಯಸ್ಸಿನಲೇ ಹಿರಿಯ ಸಾಧನೆಗೆ ಮುಂದಾಗಿರುವ ಪಟ್ಲರನ್ನು ಅವರು ಅಭಿನಂದಿಸಿದರು.

ಫೌಂಡೇಷನ್‌ ಉಪಾಧ್ಯಕ್ಷ ಬಾಬು ಎಸ್‌. ಶೆಟ್ಟಿ ಪೆರಾರ ಪ್ರತಿಕ್ರಿಯಿಸುತ್ತಾ, ಸಹಾಯ ನೀಡಿದವರನ್ನು ನಾವು ಸದಾ ಸ್ಮರಿಸೋಣ. ಜೊತೆಗೆ ಇದುವರೆಗೆ ಸಹಾಯ ನೀಡಿದವರನ್ನು ಹೆಚ್ಚು ಗುರುತಿಸಲು ಪ್ರಯತ್ನಿಸೋಣ ಎಂದರು.

ಉಪಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರು ಮಾತನಾಡಿ, ಪಟ್ಲ ಸತೀಶ್‌ ಶೆಟ್ಟಿ ಅವರ ಹಾಗೂ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಳೆದ ಮೂರು ವರ್ಷಗಳ ಸಂಬಂಧವನ್ನು ನೆನಪಿಸಿಕೊಂಡರು. ಮುಂಬಯಿ ಘಟಕ ಸದಾ ಪಟ್ಲರೊಂದಿಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಇದರ ಮುಂಬಯಿ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಕರ್ನೂರು ಮೋಹನ್‌ ರೈ ನೂತನ ಪದಾಧಿಕಾರಿಗಳು ಹಾಗೂ ಸಲಹೆಗಾರರ ಹೆಸರು ವಾಚಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿ ದರು. ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ, ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಸಂಚಾಲಕ ಅಶೋಕ್‌ ಶೆಟ್ಟಿ ಪೆರ್ಮುದೆ, ಗೌರವ ಪ್ರಧಾನ ಕಾರ್ಯದರ್ಶಿ ಕರ್ನೂರು ಮೋಹನ್‌ ರೈ ಅವರು ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಸ್ಥಾಪನೆಯಾಗಿ ಇಂದಿಗೆ ಮೂರೂವರೆ ವರ್ಷಗಳೇ ಕಳೆದಿವೆ. ಈ ಕಿರು ಅವಧಿಯಲ್ಲಿ ಫೌಂಡೇಷನ್‌ ಸುಮಾರು 4 ಕೋ. ರೂ. ಗಳನ್ನು ಕಲಾವಿದರಿಗೆ ನೀಡಿ ಸಹಕರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ನೀವೆಲ್ಲರೂ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವೇ ಕಾರಣವಾಗಿದೆ. ಪಟ್ಲ ಫೌಂಡೇಷನ್‌ 100 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಅದರಲ್ಲಿ ಈಗಾಗಲೇ ಮೂರು ಮನೆಗಳನ್ನು ನಿರ್ಮಿಸಲಾಗಿದೆ. ಸುಮಾರು 11 ಎಕರೆ ಜಮೀನನ್ನು ಖರೀದಿಸಿ ಯಕ್ಷ ಕಲಾವಿದರಿಗಾಗಿ ಹೊಸ ಯೋಜನೆಯನ್ನು ಆರಂಭಿಸುವ ಉದ್ದೇಶವಿದೆ. ಫೌಂಡೇಷನ್‌ನ 4ನೇ ವರ್ಷದ ವಾರ್ಷಿಕ ಸಂಭ್ರಮವು ಜೂನ್‌ 2 ರಂದು ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಲಿದೆ. ಮುಂದೆ ತೆಂಕು-ಬಡಗು ತಿಟ್ಟಿನ ಸುಮಾರು 22 ತಂಡಗಳನ್ನು ಒಟ್ಟಾಗಿಸಿ ಭವ್ಯ ಕ್ರೀಡಾಕೂಟವನ್ನು ಆಯೋಜಿಸುವ ಯೋಜನೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಪ್ರತೀ 33 ಘಟಕಗಳಲ್ಲೂ ಕ್ರೀಡಾಕೂಟವನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ, ಪದಾಧಿಕಾರಿಗಳು ಹಾಗೂ ಸಲಹಾ ಸಮಿತಿಯ ಸಹಕಾರದಿಂದ ಸುಮಾರು 60 ಲಕ್ಷ ರೂ. ಸಂಗ್ರಹವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮುಂಬಯಿ ಘಟಕದ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ
– ಪಟ್ಲ ಸತೀಶ್‌ ಶೆಟ್ಟಿ
(ಸಂಸ್ಥಾಪಕಾಧ್ಯಕ್ಷರು : ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಂಗಳೂರು)

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next