Advertisement

ನಿಸಾರ್‌ ಕವಿತೆಗಳಿಗೆ ಯಕ್ಷ‌ ಶೈಲಿಯ ಸಂಗೀತ

02:58 PM Dec 15, 2017 | Team Udayavani |

ಕರಾವಳಿ ಕನ್ನಡದ ಜನಪ್ರಿಯ ಕಲೆಯಾದ ಯಕ್ಷಗಾನಕ್ಕೆ ಇಂದು ಎಲ್ಲೆಡೆಯಿಂದ ಸಿಗುತ್ತಿರುವ ಪ್ರೋತ್ಸಾಹ ದಿಂದಾಗಿ ಅದರಲ್ಲಿ ಹೊಸತನ ಕಂಡುಕೊಳ್ಳುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಿವೆ. ಕನ್ನಡ ಕವಿಗಳು ರಚಿಸಿದ ಭಾವಗೀತೆಗಳಿಗೆ ಯಕ್ಷಗಾನ ಶೈಲಿಯ ಸಂಗೀತವನ್ನು ಅಳವಡಿಸಿಕೊಳ್ಳುವುದು ಇಂಥ ಪ್ರಯೋಗಗಳಲ್ಲೊಂದು. ಈಗಾಗಲೇ ಸುಬ್ರಾಯ ಚೊಕ್ಕಾಡಿಯವರ ಬಹು ಪ್ರಸಿದ್ಧ “ಮುನಿಸು ತರವೇ’ ಹಾಡು ಯಕ್ಷಗಾನ ಪ್ರಿಯರಿಗೆ ಮೋಡಿ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಯಕ್ಷಗಾನ ವಿಮರ್ಶಕರಾದ ಎಸ್‌. ವಿ. ಉದಯಕುಮಾರ್‌ ಶೆಟ್ಟಿಯವರು ಕವಿ ನಿಸಾರ್‌ ಅಹಮ್ಮದ್‌ ಅವರ ಆಯ್ದ ಕವಿತೆಗಳನ್ನು ಯಕ್ಷಗಾನ ರಾಗಗಳಿಗೆ ಅಳವಡಿಸಿಕೊಂಡು, ನಿಸಾರ್‌ ಅವರಿಗೆ ಕನ್ನಡದ ಅತ್ಯುನ್ನತ ಪಂಪ ಪ್ರಶಸ್ತಿ ಘೋಷಿತವಾದ ಪ್ರಯುಕ್ತ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ “ಅಮೋಘ’ ಮತ್ತು “ರಂಗಸ್ಥಳ ಸಾಂಸ್ಕೃತಿಕ ಸಂಸ್ಥೆ’ಗಳ ಜಂಟಿ ಪ್ರಯತ್ನದಲ್ಲಿ ನಡೆದ ನಿಸಾರ್‌ ಸಾಹಿತ್ಯದ ಕುರಿತಾದ ವಿಚಾರ ಸಂಕಿರಣದ ಸಂದರ್ಭದಲ್ಲಿ ಮುಕ್ಕಾಲು ಗಂಟೆಯ ಒಂದು ಪ್ರತ್ಯೇಕ ಕಾರ್ಯಕ್ರಮವನ್ನೇ ನೀಡಿದ್ದು ಈ ಪ್ರಯೋಗದ ಮುಂದುವರಿಕೆ.

Advertisement

ಉದಯಕುಮಾರ್‌ ಶೆಟ್ಟಿಯವರು ನಾಟ ರಾಗ, ಅಷ್ಟ ತಾಳದ ಗಣಪತಿ ಸ್ತುತಿಯೊಂದಿಗೆ ತಮ್ಮ ಕಾರ್ಯಕ್ರಮವನ್ನು ಆರಂಭಿಸಿದರು. ಮುಂದೆ ಏಕತಾಳದಲ್ಲಿ ನಿಸಾರರ “ಬೆಣ್ಣೆ ಕದ್ದ ನಮ್ಮ ಕೃಷ್ಣ’ವನ್ನು  ಸುಶ್ರಾವ್ಯವಾಗಿ ಹಾಡಿದರು. ಅನಂತರ “ತಾಯಿ ಭೂಮಿ ತಾಯಿ ಸದಯಿ ಅಭಯದಾಯಿನಿ’ ಎಂಬ ಗೀತೆಯನ್ನು ಕಾನಡ ರಾಗ-ರೂಪಕ ಏಕ ಕೋರೆ ತಾಳದಲ್ಲಿ  ಹಾಡಿನೊಳಗಿನ ಭಕ್ತಿ ಭಾವ ಸ್ಪುರಿಸುವಂತೆ ಮೆಲು ಧ್ವನಿಯಲ್ಲಿ ಹಾಡಿದರು. “ಬೇಸರಾಗಿದೆ ಮಾತು ಭಾರವಾಗಿದೆ ಮೌನ’ ಮೋಹನ ರಾಗ ಅಷ್ಟ ತಾಳದಲ್ಲಿ ವಿಷಾದದ ಧ್ವನಿಯನ್ನು ಮೂಡಿಸುತ್ತ ಬಂತು. ಮುಂದೆ ಕಾಂಬೋಜಿ ರಾಗ ಝಂಪೆ ತಾಳದಲ್ಲಿ “ನನ್ನ ನಲವಿನ ಬಳ್ಳಿ ಮೈದುಂಬಿ ನಗುವಾಗ’ ಹಾಡು ಲವಲವಿಕೆಯಿಂದ ಸುಂದರವಾಗಿ ತೇಲಿ ಬಂತು. “ನಾಡ ದೇವಿಯೇ ನಿನ್ನ ಮಡಿಲಲ್ಲಿ ಕಂಡೆ ಎಂಥ ದೃಶ್ಯವು’ ಏಕ ಕೋರೆ ತಾಳದಲ್ಲಿ ಲಾವಣಿ ಶೈಲಿಯಲ್ಲಿ ಪ್ರಾರ್ಥನೆಯ ವಿನೀತ ಭಾವದೊಂದಿಗೆ  ಇಂಪಾಗಿ ಮೂಡಿ ಬಂದು ಪ್ರೇಕ್ಷಕವೃಂದವನ್ನು ಭಾವ ಲೋಕಕ್ಕೊಯ್ದಿತು. ಮೋಹನ ರಾಗ, ಅಷ್ಟ ತಾಳದಲ್ಲಿ ಮಂಗಳ ಪದ್ಯ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಆಕರ್ಷಕ ಶಾರೀರವುಳ್ಳ ಉದಯಕುಮಾರ್‌ ತಾವು ಭಾಗವತಿಕೆಯಲ್ಲಿ ಮಾಡಿದ ಈ ಹೊಸ ಪ್ರಯೋಗಕ್ಕೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು  ತಮ್ಮ ಸಮರ್ಥ ನಿರ್ವಹಣೆಯ ಮೂಲಕ ತೋರಿಸಿಕೊಟ್ಟರು.

ಯುವ ಕಲಾವಿದ ಶಶಿಕುಮಾರ್‌ ಆಚಾರ್ಯ ಅವರು ಸಮರ್ಥವಾಗಿ ನೀಡಿದ ಮದ್ದಳೆಯ ಸಾಥ್‌, ಹಾಡುಗಳಿಗೆ ಅದ್ಭುತ ಹಿನ್ನೆಲೆಯನ್ನೊದಗಿಸಿತು, ಮಾತ್ರವಲ್ಲದೆ ಕಾರ್ಯಕ್ರಮವನ್ನು ಕಳೆಗಟ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿತು.

ಡಾ| ಪಾರ್ವತಿ ಜಿ. ಐತಾಳ್‌

Advertisement

Udayavani is now on Telegram. Click here to join our channel and stay updated with the latest news.

Next