Advertisement

ಯಗಚಿ ಜಲಾಶಯದ ಸೌಂದರ್ಯ ಕಸಿದ “ಕಳೆ’

02:03 PM Jun 27, 2023 | Team Udayavani |

ಬೇಲೂರು: ಪಟ್ಟಣದ ನಾಗರಿಕರು ಸೇರಿ ತಾಲೂಕಿನ ರೈತರ ಜೀವನಾಡಿಯಾಗಿರುವ ಯಗಚಿ ಜಲಾಶ ಯದಲ್ಲಿ ಅಂತರಗಂಗೆ(ಕಳೆ ಗಿಡ) ಬೆಳೆದು ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

Advertisement

ಪಟ್ಟಣದಿಂದ 2.5 ಕಿ.ಮೀ. ದೂರದ ಚಿಕ್ಕಬ್ಯಾಡಿಗೆರೆ ಸಮೀಪ 1984ರಲ್ಲಿ ನಿರ್ಮಿಸಲಾದ ಯಗಚಿ ಜಲಾಶಯ 2 ಸಾವಿರ ಹೆಕ್ಟೇರ್‌ ಅಚ್ಚುಕಚ್ಚು ಪ್ರದೇಶ ಹೊಂದಿದೆ. ತಾಲೂಕಿನಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಅಲ್ಲದೆ, ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ.

ಜನರಲ್ಲಿ ಆತಂಕ: ಎರಡು ವರ್ಷದಿಂದ ಜಲಾಶಯದ ನೀರಿನ ಮೇಲೆ ಕಳೆಗಿಡ ಬೆಳೆದಿದ್ದು, ಅದರಲ್ಲಿ ಹುಳುಉಪ್ಪಟೆಗಳು, ವಿಷಜಂತುಗಳ ಜೊತೆಗೆ ಕಸವೂ ಸೇರಿ ದುರ್ನಾತ ಬೀರುವ ಸ್ಥಿತಿಗೆ ತಲುಪಿದೆ. ಜಲಾಶಯದ ನೀರು ಸೇವಿಸಲು ನಗರದ ಜನ ಹಿಂದೇಟು ಹಾಕುವಂತೆ ಆಗಿದೆ.

ಮೀನುಗಾರಿಕೆಗೆ ಸಮಸ್ಯೆ: ಈ ಕಳೆಗಿಡದಿಂದ ಜಲಾಶಯ ನಂಬಿ ಬದುಕುತ್ತಿರುವ 200 ಮೀನು ಗಾರರ ಕುಟುಂಬ ಬೀದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಕಳೆಯಿಂದ ಮೀನುಗಾರಿಕೆ ಮಾಡಲು ಸಾಧ್ಯವಾ ಗುತ್ತಿ ಲ್ಲ. ಬಲೆ ಹಾಕಿದರೆ ಮೀನಿನ ಬದಲಿಗೆ ಕಳೆ ಸಿಕ್ಕಿಕೊಂಡು ಹರಿದುಹೋಗುತ್ತಿದೆ. ದೋಣಿ ಕೂಡ ಮುಂದೆ ಸಾಗದೆ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ನೀರೇ ಕಾಣುವುದಿಲ್ಲ: ವಿಶ್ವ ವಿಖ್ಯಾತ ಬೇಲೂರು ಚೆನ್ನಕೇಶವಸ್ವಾಮಿ ದೇಗುಲವನ್ನು ವೀಕ್ಷಿಸಲು ದೇಶವಷ್ಟೇ ಅಲ್ಲ, ವಿದೇಶಿ ಪ್ರವಾಸಿಗರೂ ಆಗಮಿಸುತ್ತಾರೆ. ಚನ್ನಕೇಶವ ಸ್ವಾಮಿ ದರ್ಶನ ಪಡೆದವರು ಜಲಾಶಯ ವೀಕ್ಷಿಸಲು ಬರುತ್ತಾರೆ. ಆದರೆ, ಜಲಾಶಯದ ನೀರನ್ನು ಜಂಡು ಸಂಪೂರ್ಣ ಆವರಿಸಿಕೊಂಡಿರುವ ಕಾರಣ, ಡ್ಯಾಂನ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಇದೇನು ಜಲಾಶಯವೋ ಅಥವಾ ಕಲುಷಿತಗೊಂಡ ಕೆರೆಯೋ ಎಂದು ಪ್ರವಾಸಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Advertisement

ನದಿ, ಕೆರೆಗೂ ಹಬ್ಬಿದ ಕಳೆ: ಜಲಾಶಯದಲ್ಲಿ ಕಳೆಗಿಡದ ಜೊತೆಯಲ್ಲಿ ಹೂಳೂ ತುಂಬಿದ್ದು, ನೀರು ಹರಿಸಿದರೆ ಕಳೆಯೂ ಹೊರಗೆ ಬಂದು ರೈತರ ಜಮೀನು, ನದಿ, ಸಣ್ಣ ಕೆರೆಗಳನ್ನು ಸೇರುತ್ತಿದೆ. ಕೂಡಲೇ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯದಲ್ಲಿ ಬೆಳೆದಿರುವ ಕಳೆ ಗಿಡವನ್ನು ತೆಗೆದು ಶುದ್ಧ ಕುಡಿಯುವ ನೀರು ಒದಗಿಸಲು, ಮೀನುಗಾರರ ಸಮಸ್ಯೆ ದೂರ ಮಾಡಲು ಮುಂದಾಗಬೇಕಿದೆ.

ತಾಲೂಕು ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ತೋಫಿಕ್‌ ಮಾತನಾಡಿ, ಈ ಹಿಂದೆ ಜಲಾಶಯ ತುಂಬ ಚೆನ್ನಾಗಿತ್ತು. ಚಿಕ್ಕಮಗಳೂರು ದಂಟರಮುಕ್ಕಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಕಳೆ ಗಿಡ ಇಲ್ಲಿನ ಜಲಾಶಯ ಅವರಿಸಿಕೊಂಡಿದೆ. ಇದರಿಂದ ಜಲಾಶದಲ್ಲಿರುವ ನೀರು ವಾಸನೆ ಬರುತ್ತಿದೆ. ಕೂಡಲೇ ಅಧಿಕಾರಿಗಳು ಕಳೆ ಗಿಡ ತೆಗೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಯಗಚಿ ಜಲಾಶಯದಲ್ಲಿ 20 ವರ್ಷದಿಂದ ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಜಂಡು ಬೆಳೆದಿರುವುದರಿಂದ ಮೀನು ಹಿಡಿಯಲು ಆಗುತ್ತಿಲ್ಲ. 2 ವರ್ಷದಿಂದ ಇಲಾಖೆ ಅಧಿಕಾರಿಗಳಿಗೆ ಜಂಡು ತೆಗೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿ ಜಂಡು ತೆರವು ಮಾಡಿಸಬೇಕು. ●ಅಬ್ದುಲ್‌ ಸಮದ್‌, ನಿರ್ದೇಶಕ, ತಾಲೂಕು ಮೀನುಗಾರರ ಸ್ವಸಹಾಯ ಸಂಘ

ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪಟ್ಟಣದ ಜನತೆಗೆ, ಪ್ರವಾಸಿಗರು ಜಲಾಶಯದ ನೀರು ಕುಡಿಯುತ್ತಾರೆ. ಜಂಡು ಬೆಳೆದಿರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯ ಸ್ವತ್ಛಗೊಳಿಸಿ, ಶುದ್ಧ ಕುಡಿಯುವ ನೀರು ಪೊರೈಸಲು ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ● ನರಸಿಂಹಸ್ವಾಮಿ, ಅಧ್ಯಕ್ಷ, ಶ್ರೀಲಕ್ಷ್ಮೀ ಸಂಗೀತ ಕಲಾ ಸೇವಾ ಟ್ರಸ್ಟ್‌

ಜಲಾಶಯದಲ್ಲಿ ಕಳೆಗಿಡ ಆವರಿಸಿಕೊಂಡಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದನ್ನು ತೆರವು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಕುಡಿಯಲು ಇಲ್ಲಿನ ನೀರು ಪೂರೈಕೆ ಆಗುವ ಕಾರಣ ಯಾವುದೇ ರಾಸಾಯನಿಕ ಬಳಕೆ ಮಾಡುವಂತಿಲ್ಲ. ವೈಜ್ಞಾನಿಕವಾಗಿ ಜಲಾಶಯದಿಂದ ಕಳೆ ತೆಗೆಯಲು ಕ್ರಮಕೈಗೊಳ್ಳಲಾಗುತ್ತದೆ. ● ರಾಜೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಯಗಚಿ ಅಣೆಕಟ್ಟು ಉಪವಿಭಾಗ.

ಜಲಾಶಯದಲ್ಲಿ ಕಳೆಗಿಡ ತುಂಬಿರುವುದರಿಂದ ಮೀನುಗಾರರಿಗೆ ತೊಂದರೆಯಾಗಿದೆ. 200 ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಈಗಾಗಲೇ ಜಲಾಶಯಕ್ಕೆ 7 ಲಕ್ಷ ಮೀನುಮರಿ ಬಿಡಲಾಗಿದೆ. ಕಳೆ ತೆಗೆಯದಿದ್ದರೆ ಮೀನುಗಳಿಗೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಡ್ಯಾಂ ನಿರ್ವಹಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ●ರವಿಕುಮಾರ್‌, ಮೀನುಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ

-ಡಿ.ಬಿ.ಮೋಹನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next