Advertisement

ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಯದುವೀರ್‌ ತಿರುಗೇಟು

12:34 PM Mar 14, 2018 | |

ಮೈಸೂರು: ತಮ್ಮನ್ನು ಮೈಸೂರು ಮಹಾರಾಜರಿಗೆ ಹೋಲಿಕೆ ಮಾಡಿಕೊಂಡು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಇಷ್ಟು ದಿನಗಳವರೆಗೂ ರಾಜಕೀಯ ನಾಯಕರಿಂದ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿಗಳಿಗೆ ಇದೀಗ ಸ್ವತಃ ಯದುವಂಶದವರು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.

Advertisement

ಎರಡು ದಿನಗಳ ಹಿಂದೆ ಮೈಸೂರು ಜಿಲ್ಲಾ ಪ್ರವಾಸಕೈಗೊಂಡು, ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ತಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಪ್ರಸ್ತಾಪಿಸುವ ವೇಳೆ ಮಹಾರಾಜರಿಗೆ ಹೋಲಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಆದರೆ, ಮುಖ್ಯಮಂತ್ರಿಗಳ ಈ ಹೇಳೀಕೆ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿ, ಅನೇಕರು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದರು.

ಇದೀಗ ಮುಖ್ಯಮಂತ್ರಿಗಳ ಹೇಳಿಕೆಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಸಹ ಪ್ರತಿಕ್ರಿಯಿಸಿದ್ದು, ಅಂದಿನ ಕಾಲಕ್ಕೂ, ಇಂದಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಸಿದ್ದರಾಮಯ್ಯ ಅವರು 5 ವರ್ಷದಲ್ಲಿ ಏನು ಮಾಡಿದ್ದಾರೆ ಮತ್ತು ರಾಜರು ಏನು ಮಾಡಿದ್ದಾರೆ ಎಂಬುದನ್ನು ಜನರು ತೀರ್ಮಾನ ಮಾಡಲಿದ್ದು, ರಾಜರ ಆಳ್ವಿಕೆಗೆ ಸಿದ್ದರಾಮಯ್ಯ ಅವರ ಆಳ್ವಿಕೆಯನ್ನ ಹೋಲಿಕೆ ಮಾಡುವುದು ಸರಿಯಲ್ಲ.

ಅಂದಿನ ಕಾಲದ ಮೈಸೂರು ಸಂಸ್ಥಾನದ ಕೊಡುಗೆಯನ್ನು ರಾಜ್ಯದ ಜನರು ಖಂಡಿತಾ ಎಂದಿಗೂ ಮರೆಯುವುದಿಲ್ಲ, ಕರ್ನಾಟಕದ ಜನತೆಗೆ ಎಲ್ಲವೂ ಗೊತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೂ-ಮಹಾರಾಜರ ಆಳ್ವಿಕೆಯ ಸರ್ಕಾರಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರಲ್ಲ: ಸದ್ಯಕ್ಕೆ ರಾಜಕೀಯಕ್ಕೆ ಬರುವುದಕ್ಕೆ ನನಗೆ ಆಸಕ್ತಿ ಇಲ್ಲ, ನಾನು ಮುಂದಿನ ವಿಧಾನಸಭಾ ಮತ್ತು ಲೋಕಾಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಹಿಂದಿನ ರಾಜರು ಜನರ ಸಮಸ್ಯೆಗಳನ್ನ ಬಗೆಹರಿಸಲು ಸದಾ ಮುಂದೆ ಬರುತ್ತಿದ್ದರು. ಅದೇ ರೀತಿ ನಾನು ಅವರ ಮಾರ್ಗದಲ್ಲೇ ಹೋಗುತ್ತಿದ್ದೇನೆ.

Advertisement

ಮತದಾರರನ್ನ ನಾನು ಯಾವಗಲೂ ಗ್ರಾಂಟೆಂಡ್‌ ಆಗಿ ತೆಗೆದುಕೊಳ್ಳುವುದಿಲ್ಲ. ಜನರಿಗೆ ಏನಾದರೂ ಕೊಡುಗೆ ನೀಡಲು ಇಷ್ಟ ಪಡುತ್ತೇನೆ ಹೊರತು ರಾಜಕೀಯಕ್ಕೆ ಬರುವುದಿಲ್ಲ ಮತ್ತು ರಾಜಕೀಯಕ್ಕೆ ಬರುವುದಕ್ಕೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಸಾಮಾಜಿಕ ಕೆಲಸಗಳಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಖಾಸಗಿ ಪ್ಲೇ ಹೋಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮಕ್ಕಳಿಗೆ ಆಂಗ್ಲ ಭಾಷೆಯ ಜತೆಗೆ ಮಾತೃಭಾಷೆಯನ್ನು ಕಲಿಸಿ ಎಂದು ಪ್ಲೇ ಹೋಂ ಮಾಲೀಕರಿಗೆ ಸಲಹೆ ನೀಡಿದರು.

ರಾಜ್ಯ ಧ್ವಜ ಚೆನ್ನಾಗಿದೆ: ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿರುವ ನಾಡಧ್ವಜವನ್ನು ನೋಡಿ ತುಂಬಾ ಖುಷಿಯಾಯಿತು. ಮೈಸೂರು ರಾಜರ ಲಾಂಛನವನ್ನು ನಾಡಧ್ವಜದಲ್ಲಿ ಹಾಕಿರುವುದು ಮೈಸೂರು ರಾಜ ವಂಶಕ್ಕೆ ಗೌರವ ಸಿಕ್ಕಂತಾಗಿದೆ. ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಕನ್ನಡ ಬಾವುಟದಲ್ಲಿ ಚಾಮುಂಡೇಶ್ವರಿ ಲಾಂಛನವನ್ನ ಹಾಕಲಾಗಿತ್ತು.

ಆದರೆ, ನಂತರದ ದಿನಗಳಲ್ಲಿ ಸಿಂಹದ ಲಾಂಛವನ್ನ ಹಾಕಿದ್ದರು ಎಂದ ಅವರು, ಪ್ರತ್ಯೇಕ ನಾಡಧ್ವಜದ ವಿಚಾರದಲ್ಲಿ ರಾಜ್ಯಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳಲಿದೆ ಅದನ್ನು ನಾವು ಗೌರವದಿಂದ ಸ್ವೀಕರಿಸಬೇಕಿದೆ ಎಂದು  ರಾಜವಂಶಸ್ಥ ಯದುವೀರ್‌ ಒಡೆಯರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next