ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರ ಪರವಾಗಿ ಮೈಸೂರಿನ ಬಿಜೆಪಿ ಅಭ್ಯರ್ಥಿ ಯದುವೀರ ಶ್ರೀಕಂಠ ದತ್ತ ಒಡೆಯರ್ ಶುಕ್ರವಾರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಭಗತ್ ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋಗೆ ಚಾಲನೆ ನೀಡಿದರು. ಭಗತ್ ಸಿಂಗ್ ನಗರ ಆಟೋ ನಿಲ್ದಾಣ, ನಿಟುವಳ್ಳಿ ರಸ್ತೆ, ಕೆಟಿಜೆ ನಗರ 17ನೇ ಕ್ರಾಸ್, ಕೆಟಿಜೆ ನಗರ 2ನೇ ಮೇನ್, ಶಿವಪ್ಪಯ್ಯ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು.
ಶಿವಪ್ಪಯ್ಯ ವೃತ್ತದಲ್ಲಿ ಮಾತನಾಡಿದ ಅವರು, ಬೆಣ್ಣೆ ಮನಸ್ಸಿನಂತಹ ದಾವಣಗೆರೆ ನಗರದ ಜನತೆ ಮತ್ತು ಮೈಸೂರು ಸಂಸ್ಥಾನದ ಅರಸರಿಗೂ ಅವಿನಾಭಾವ ಸಂಬಂಧವಿದೆ ಎಂದು ಸ್ಮರಿಸಿದರು. ನರೇಂದರ ಮೋದಿ ಅವರ ನೇತೃತ್ವದ ಎನ್ ಡಿಎ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ಯದುವೀರ ಶ್ರೀಕಂಠ ದತ್ತ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಜನಪರ ಕಾರ್ಯಗಳು, ದೇಶದ ಸುಭದ್ರತೆಗೆ ಮೋದಿ ನೇತೃತ್ವದ ಪಕ್ಷಕ್ಕೆ ಮತ ನೀಡಿ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆ ಮುಗಿದ 14 ಜಿಲ್ಲೆಗಳಲ್ಲೂ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಇದೀಗ ಮೇ.7ರಂದು ನಡೆಯಲಿರುವ ಚುನಾವಣೆಯಲ್ಲಿ ಉಳಿದ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲೂ ಬಿಜೆಪಿ ಗೆಲ್ಲುವ ವಾತಾವರಣ ಇದೆ. ನಾನು ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚನೆ ಮಾಡಲು ಬಂದಿರುವುದಾಗಿ ಹೇಳಿದರು.
ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಎಂ.ಎಸ್. ವಿಠಲ್, ಉಪ ಮೇಯರ್ ಯಶೋಧಾ ಎಗ್ಗಪ್ಪ ಇತರರು ಇದ್ದರು.
ಬೆಣ್ಣೆ ದೋಸೆ ಸವಿದರು: ಯದುವೀರ ಶ್ರೀಕಂಠ ದತ್ತ ಒಡೆಯರ್ ಅವರು ಶುಕ್ರವಾರ ರೋಡ್ ಶೋಗೆ ತೆರಳುವ ಮುನ್ನ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಕೊಟ್ಟೂರೇಶ್ವರ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿದರು. ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಜಿ.ಎಸ್. ಅನಿತ್ ಕುಮಾರ್ ಇತರರು ಸಾಥ್ ನೀಡಿದರು.
ಕೆಲ ದಿನಗಳ ಹಿಂದೆ ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲೂ ಯದುವೀರ ಶ್ರೀಕಂಠ ದತ್ತ ಒಡೆಯರ್ ಅವರು ಕೊಟ್ಟೂರೇಶ್ವರ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿದಿದ್ದರು.