ಕಲಬುರಗಿ: ಯಡ್ರಾಮಿ ಪಟ್ಟಣದ ಮಾರುಕಟ್ಟೆ ಮಧ್ಯ ಭಾಗದಲ್ಲಿ ಕುಡಿಯುವ ನೀರಿನ ಗುಮ್ಮಿ ಅಳವಡಿಸಿದ್ದು, ನೀರು ಪಡೆದಾದ ಮೇಲೆ ಬಂದ್ ಮಾಡಲು ಕನಿಷ್ಠ ಒಂದು ನಲ್ಲಿಯನ್ನು ಅಳವಡಿಸಿಲ್ಲ.
ನಲ್ಲಿ ಇಲ್ಲದ್ದರಿಂದ ನಿರಂತರ ನೀರು ಹರಿದು ಚರಂಡಿ ಪಾಲಾಗುತ್ತಿದೆ. ಮಾರುಕಟ್ಟೆಯಲ್ಲಿ ನೀರು ನಿಂತು ಕೊಳಕು ವಾಸನೆ ಹರಡಿ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಮುಜುಗರ ಪಡುವಂತೆ ಆಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಗಳಿಗೆ ಎಡೆಮಾಡಿಕೊಟ್ಟರೂ ಅಚ್ಚರಿಯೇನಿಲ್ಲ.
ಪಟ್ಟಣದ ಕೆಲವು ವಾರ್ಡ್‌ಗಳ ಜನರು ದೂರದ ಬೋರವೆಲ್‌ಗಳಿಗೆ ಹೋಗಿ ನೀರು ತರುವಂಥಹ ಸಮಸ್ಯೆ ಇದೆ. ಇಂತ ಪರಿಸ್ಥಿತಿಯಲ್ಲಿ ಸುಮ್ಮನೆ ನೀರು ಪೋಲಾಗುತ್ತಿರುವುದನ್ನು ತಡೆಯಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ನೀರಿನ ಸೌಕರ್ಯ ಒದಗಿಸಿದ್ದು ಜನರಿಗೆ ಬಹಳ ಅನುಕೂಲವಾಗಿದೆ. ನೀರು ಪೋಲಾಗದಂತೆ ಶಾಶ್ವತವಾಗಿ ನಲ್ಲಿ ಅಳವಡಿಸಿದರೆ ರಸ್ತೆ ಹೊಲಸಾಗುವುದು ತಪ್ಪಿಸಿದಂತೆ ಆಗುತ್ತದೆ ಎಂದು ಪಟ್ಟಣದ ನಿವಾಸಿ, ಶಿಕ್ಷಕ ಪ್ರಶಾಂತ ಎಂ. ಕುನ್ನೂರು ಆಗ್ರಹಿಸಿದ್ದಾರೆ.
ನೀರಿನ ಪ್ರಾಮುಖ್ಯತೆ ತುಂಬಾ ಇದೆ. ಟ್ಯಾಂಕಿಗೆ ಎರಡೂಮೂರು ಬಾರಿ ತೋಟಿ ಹಾಕಿಸಿದ್ದೇವೆ. ಎಷ್ಟು ಸಲ
ಹಾಕಿದರೂ ಜನ ಮುರದೇ ಬಿಡುತ್ತಾರೆ. ಜನರಿಗೂ ಸಾರ್ವಜನಿಕ ಆಸ್ತಿಯ ಬಗ್ಗೆ ಕಾಳಜಿ ಬೇಕಾಗುತ್ತದೆ. ಎರಡೇ ದಿನದಲ್ಲಿ ತೋಟಿ ಅಳವಡಿಸುತ್ತೇವೆ ಎಂದು ಪಿಡಿಒ ನಾಗೇಂದ್ರಪ್ಪ ಕೂಡಿ ತಿಳಿಸಿದ್ದಾರೆ.