Advertisement

ಬಸವ ನೆಲದಲ್ಲಿ ಸುಳ್ಳು ಹೇಳಲ್ಲ, 3 ಕ್ಷೇತ್ರದಲ್ಲಿ ಬಿಜೆಪಿಗೆ ಜಯಭೇರಿ : ಯಡಿಯೂರಪ್ಪ

06:48 PM Apr 12, 2021 | Team Udayavani |

ಬೀದರ್ :  ವಿಶ್ವದ ಜನರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಬಸವಕಲ್ಯಾಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಬಸವಣ್ಣನ ಪವಿತ್ರ ನೆಲದಲ್ಲಿ ಸುಳ್ಳು ಆಶ್ವಾಸನೆಗಳನ್ನು ಕೊಡಲು ನಾನು ಇಷ್ಟಪಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

Advertisement

ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 500 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 200 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದೇನೆ. ಈ ಕ್ಷೇತ್ರ ಲಕ್ಷಾಂತರ ಜನರು ಬಂದು ಹೋಗುವಂಥ ಪ್ರವಾಸಿ ಕೇಂದ್ರವಾಗಿ ಬೆಳೆಯಲಿದೆ. ಚುನಾವಣೆ ವೇಳೆ ನಾನು ಯಾವತ್ತು ಸುಳ್ಳು ಭರವಸೆಗಳನ್ನು ಕೊಡುವುದಿಲ್ಲ. ಹೇಳಿದ್ದನ್ನು ನೂರು ಪ್ರತಿಶತ ಮಾಡಿಕೊಡುವುದೇ ನನ್ನ ಸ್ವಭಾವ. ದೇವರು ಮೆಚ್ಚುವ ರೀತಿಯಲ್ಲಿ ನಾನು ನಡೆದುಕೊಂಡು ಬಂದಿದ್ದೇನೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಮತ್ತು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿಯಂತೆ 3 ಸಾವಿರ ಕೋಟಿ ರೂ. ನೀಡಿದ್ದೇನೆ ಎಂದು ಹೇಳಿದ ಸಿಎಂ ಯಡಿಯೂರಪ್ಪ ಅವರು, ಬಸವಕಲ್ಯಾಣ ನಗರ ಮತ್ತು ಕ್ಷೇತ್ರದಲ್ಲಿನ ಬೇಡಿಕೆಗಳ ಕುರಿತು ನನಗೆ ಮನವಿ ಸಲ್ಲಿಸಲಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಸಚಿವರುಗಳು, ನೂತನ ಶಾಸಕರಾಗಲಿರುವ ಶರಣು ಸಲಗರ್ ಜತೆಗೆ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ, ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ. ಕ್ಷೇತ್ರದ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತೇವೆ. ಚುನಾವಣೆ ಫಲಿತಾಂಶದ ಬಳಿಕ ಅಗತ್ಯ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಈ ಹಿಂದೆ ನಡೆದಿರುವ ೧೫ ಕ್ಷೇತ್ರಗಳ ಉಪ ಚುನಾವಣೆ ಪೈಕಿ ೧೩ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈಗ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರು ಸುಮಾರು ೨೫ ಸಾವಿರ ಮತಗಳ ಸಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಜಿ ಮುಳೆ ಮಾತನಾಡಿ, ಮರಾಠಾ ಸಮಾಜವನ್ನು ೨ಎಗೆ ಸೇರ್ಪಡೆ ಸೇರಿದಂತೆ ಸಮಾಜದ ಬೇಡಿಕೆಗಳಿಗೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ ಕಾರಣಕ್ಕೆ ಸಮಾಜದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಾನು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಎರಡು ಕಡೆ ಬಿಜೆಪಿ ಸರ್ಕಾರದ ಇದೆ. ಹಾಗಾಗಿ ಸರ್ಕಾರ ಈ ಹಿಂದೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ನಾಮಪತ್ರ ಹಿಂಪಡೆಯಲು ಡೀಲ್ ಮಾಡಿಕೊಂಡಿದ್ದೇನೆ, ಅದು ಸಮಾಜದ ವಿಕಾಸಕ್ಕಾಗಿನ ಡೀಲ್ ಆಗಿದೆ ಎಂದು ಸ್ಪಷ್ಟಪಡಿಸಿದರು.

Advertisement

ಸಮಾವೇಶದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ವ್ಹಿ. ಸೋಮಣ್ಣ, ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಪಿ. ರಾಜು, ಬಸವರಾಜ ಮತ್ತಿಮಾಡ, ಮಾಜಿ ಸಚಿವರಾದ ಸುನೀಲ ವಲ್ಲಾಪುರ್, ಬಾಬುರಾವ ಚಿಂಚನಸೂರ್, ಜಿ.ಪಂ ಅಧ್ಯಕ್ಷೆ ನಿರ್ಮಲಾ ಮಾನಗೋಪಾಳ್, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತು ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ್ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next