ಬೆಂಗಳೂರು: ಮೈಸೂರು ರಾಜವಂಶಸ್ಥರಾದ ಯದುವೀರ್- ತ್ರಿಷಿಕಾ ದಂಪತಿ ಪುತ್ರನಿಗೆ ಭಾನುವಾರ ನಾಮಕರಣವಾಗಿದ್ದು, ಆದ್ಯವೀರ್ ನರಸಿಂಹ ರಾಜ ಒಡೆಯರ್ ಎಂದು ಹೆಸರಿಡಲಾಗಿದೆ.
ಬೆಂಗಳೂರು ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜಮಾತೆ ಪ್ರಮೋದಾ ದೇವಿಯವರೇ ಮುಂದೆ ನಿಂತು ಮೊಮ್ಮಗನಿಗೆ ನಾಮಕರಣ ಕಾರ್ಯ ನೆರವೇರಿಸಿದರು. ನಂತರ ಮೊಮ್ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಮುದ್ದಾಡಿದರಲ್ಲದೆ, ಮಗುವಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ಅತ್ಯಂತ ಸರಳವಾಗಿ ಆಯೋಜಿಸಿದ್ದ ನಾಮಕರಣ ಸಮಾರಂಭಕ್ಕೆ ರಾಜ ಮನೆತನದವರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದವರು ಆದ್ಯವೀರ್ ನರಸಿಂಹರಾಜ ಒಡೆಯರ್ ರಾಜ ಮನೆತನಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭ ಕೋರಿದರು.
ನಾಮಕರಣ ಸಮಾರಂಭದ ಹಿನ್ನೆಲೆಯಲ್ಲಿ ಇಲ್ಲಿನ ಸಿಬ್ಬಂದಿ ಅರಮನೆಯನ್ನು ಸಿಂಗಾರಗೊಳಿಸಿದ್ದರು. ಅರಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಸಂಭ್ರಮ ಕಳೆಗಟ್ಟಿತ್ತು. ನಾಮಕರಣದ ಸುಳಿವನ್ನು ಯಾರಿಗೂ ಬಿಟ್ಟುಕೊಡದ ರಾಜಮನೆತನದವರು ಮೈಸೂರಿನಿಂದಲೇ ಎಲ್ಲ ಸಿದ್ಧತೆಗಳನ್ನು ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರವೇಶ ನಿರ್ಬಂಧ: ಮೈಸೂರು ಅರಮನೆ ಬದಲಾಗಿ ಬೆಂಗಳೂರು ಅರಮನೆಯಲ್ಲಿ ನಾಮಕರಣ ಸಮಾರಂಭ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿತ್ತು. ನೂರಾರು ಪ್ರವಾಸಿಗರು ವಾಪಸ್ ತೆರಳುವುದು ಕಂಡುಬಂತು.