ಸವಣೂರು: ತುಳುನಾಡಿನ ದೈವಾರಾಧನೆಯ ಕಥಾ ಹಂದರವಿರುವ ಕಾಂತಾರ ಸಿನೆಮಾದಲ್ಲಿದ್ದಂತೆ ಘಟನೆ ಯೊಂದು ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.
ದೈವ ನರ್ತಿಸುತ್ತಾ ದೇವರ ಪಾದ ಸೇರಿದ ನರ್ತಕನ ಮಗ ದೈವ ಚಾಕರಿಯ ದೈವ ಬೂಳ್ಯ ಹಿಡಿದು ಹೊಣೆ ಹೊತ್ತ ಅಪರೂಪದ ಘಟನೆ ಇದು.
ಕೆಲವು ತಿಂಗಳ ಹಿಂದೆ ಎಡಮಂಗಲದ ಶಿರಾಡಿ ದೈವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ಉಳ್ಳಾಕುಲು ದೈವ ಹಾಗೂ ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಈ ವೇಳೆ ಉಳ್ಳಾಕುಲು ದೈವದ ನರ್ತಕರಾ ಗಿದ್ದ 60 ವರ್ಷದ ಕಾಂತು ಅಜಿಲ ನರ್ತನ ಮಾಡುತ್ತಲೇ ಕುಸಿದು ಸಾವನ್ನಪ್ಪಿದ್ದರು. ಬಳಿಕ ಗ್ರಾಮಸ್ಥರು ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ಪ್ರಶ್ನಾ ಚಿಂತನೆ ನಡೆಸಿದಾಗ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ಆ ಹೊಣೆ ಹೊರಬೇಕು ಎಂಬ ಅಂಶ ಕಂಡು ಬಂದಿತು. ಅನಂತರ ಇದಕ್ಕೆ ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಯಿತು. ಈ ಹಿನ್ನೆಲೆಯಲ್ಲಿ ಈ ವರ್ಷದ ನೇಮದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಲಾಯಿತು. ಆಗ ಇಬ್ಬರಿಗೂ ದೈವದ ಸೇವೆಯನ್ನು ಮಾಡುವ ರೀತಿ ವಿವರಿಸಲಾಯಿತು.
ಮೊದಲು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ್ದು. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ. ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಹೊಣೆಯನ್ನು ಹೊರುತ್ತಾನೆ.