Advertisement

ಸೌಕರ್ಯಕ್ಕೆ ಕಚೇರಿಗೆ ಬಂದರೂ ನೆಲವೇ ಗತಿ

12:24 PM Feb 07, 2020 | |

ಯಾದಗಿರಿ: ಮೊದಲೇ ಎರಡು ಕೈಯಲ್ಲಿ ಕಟ್ಟಿಗೆ ಹಿಡಿದು ದೇಹದ ಭಾರವೆಲ್ಲ ಅದರ ಮೇಲೆ ಹಾಕಿ ಅದರ ಸಹಾಯದಿಂದಲೇ ನಡೆಯಬೇಕು. ಸರಿಯಾಗಿ ಕುಳಿತುಕೊಳ್ಳಲು ಆಗಲ್ಲ. ಸಾಮಾನ್ಯರಂತೆ ನಿಲ್ಲಲೂ ಆಗದ ಪರಿಸ್ಥಿತಿ. ಸೌಕರ್ಯ ಪಡೆಯುವ ಕಚೇರಿಗೆ ಬಂದರೂ ಅವರು ನೆಲದ ಮೇಲೆಯೇ ಕುಳಿತುಕೊಳ್ಳುವ ಅನಿವಾರ್ಯತೆ.

Advertisement

ಇದು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಕಚೇರಿ ಎದುರು ಅಂಗವಿಕಲರು ಪರದಾಡಿದ ಸ್ಥಿತಿಗತಿ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಿ ಸುಮಾರು 3 ವರ್ಷ ಕಳೆಯುತ್ತಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳುವ ಆಸನ ವ್ಯವಸ್ಥೆಯೇ ಇಲ್ಲ. ಅರ್ಜಿ ಸಲ್ಲಿಕೆ, ಸಮಸ್ಯೆ ಹೇಳಿಕೊಳ್ಳಲು ಹಿರಿಯ ನಾಗರಿಕರು ಮತ್ತು ವಿಕಲಚೇತನ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಬರುವ ವಿಕಲಚೇತನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ನಿತ್ಯ ಹಲವು ಹಿರಿಯ ನಾಗರಿಕರು ಹಾಗೂ ವಿಕಲಚೇತನರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ನೆಲದ ಮೇಲೆ ಕುಳಿತರೂ ಅವರ ಗೋಳು ಕೇಳುವವರಿಲ್ಲದಂತಾಗಿದೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕಾಳಜಿ ವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂದು ಬರುತ್ತಿದೆ. ಕೆಲಸಕ್ಕೆ ಬಂದ ಜನರಿಗೆ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾಡುವ ಕನಿಷ್ಠ ಪ್ರಜ್ಞೆ ಅಧಿಕಾರಿಗಳಿಗಿಲ್ಲವೇ ಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದೆ.

ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಅಧಿಕಾರಿ ಶರಣಪ್ಪ ಪಾಟೀಲ ಅವರನ್ನು ವಿಚಾರಿಸಿದರೆ, ಜಿಲ್ಲಾಡಳಿತ ಭವನಕ್ಕೆ ಕಚೇರಿ ಸ್ಥಳಾಂತರ ಮಾಡುವಾಗ ಹಾಗೇ ಸ್ಥಳಾಂತರ ಮಾಡಿದ್ದೀವೆ. ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲ. ನೀವು ಹೇಳುತ್ತಿರುವುದು ಒಳ್ಳೆಯ ವಿಚಾರ. ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುತ್ತೀವೆ. ಎಂದು ಹೇಳಿದರು.

ತಮ್ಮ ಕೆಲಸ ಕಾರ್ಯಾಗಳಿಗಾಗಿ ಕಚೇರಿಗೆ ದೂರದಿಂದ ಆಗಮಿಸುವ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವತ್ತ ಆಡಳಿತ ಚಿಂತಿಸಬೇಕಿದೆ.

Advertisement

ನಮ್ಮ ಕಚೇರಿಗೆ ಬರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲ. ಅವರಿಗೆ ಅನುಕೂಲವಾಗುವಂತೆ ಬೆಂಚ್‌ ವ್ಯವಸ್ಥೆ ಕಲ್ಪಿಸಲು ಶೀಘ್ರವೇ ಸೂಕ್ತ ಕ್ರಮ ವಹಿಸಲಾಗುವುದು.
ಶರಣಪ್ಪ ಪಾಟೀಲ, ಜಿಲ್ಲಾ ವಿಕಲಚೇತನ,
ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ.

ಕಚೇರಿಗೆ ಕೆಲಸದ ನಿಮಿತ್ತ ಬಂದರೆ ಕುಳಿತುಕೊಳ್ಳಲು ವ್ಯವಸ್ಥೆಯೇ ಇಲ್ಲ. ಕಟ್ಟಿಗೆ ಹಿಡಿದುಕೊಂಡು ಹೆಚ್ಚು ಕಾಲ ನಿಲ್ಲಲು ಆಗಲ್ಲ. ಕೂಡಬೇಕು ಎಂದರೇ ಕುರ್ಚಿಯೂ ಸಿಗಲ್ಲ. ಅನಿವಾರ್ಯವಾಗಿ ಕಚೇರಿ ಹೊರಗೆ ನೆಲದ ಮೇಲೆಯೇ ಕುಳಿತುಕೊಳ್ಳಬೇಕಿದೆ. ಭೀಮರಾಯ, ವಿಕಲಚೇತನ ವ್ಯಕ್ತಿ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next