Advertisement

ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

03:10 PM Sep 06, 2019 | Naveen |

ಯಾದಗಿರಿ: ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಶಿಕ್ಷಕರು ಕತ್ತಲೆಯಿಂದ ಬೆಳಕಿನಡೆಗೆ ನಡೆಸುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸುತ್ತಾರೆ. ಹೀಗಾಗಿ ಸಮಾಜದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಹೇಳಿದರು.

Advertisement

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಾದಗಿರಿ ತಾಲೂಕಿನ ನಿವೃತ್ತ ಶಿಕ್ಷಕರಿಗೆ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಮ್ಮ ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಹಿಂದುಳಿದಿದೆ. ಈ ಬಾರಿ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಹೆಚ್ಚಳ ಮಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ, ದೇಶದ ಆಡಳಿತ ನಡೆಸುವ ವ್ಯಕ್ತಿಗಳನ್ನು ತಯಾರಿಸುವ ಶಕ್ತಿ ಶಿಕ್ಷಕರಿಗಿದೆ. ಜಿಲ್ಲೆಯ ಶೈಕ್ಷಣಿಕ ಮಟ್ಟದಲ್ಲಿ ಸುಧಾರಣೆ ತರುವುದು ಶಿಕ್ಷಕರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು. ಪ್ರತಿಯೊಬ್ಬ ಶಿಕ್ಷಕ ಮುತುವರ್ಜಿವಹಿಸಿ ಮಕ್ಕಳ ಕಲಿಕೆ ಮೇಲೆ ಪ್ರಭಾವ ಬೀರಿದರೆ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಜ್ಞಾನದ ಬೆಳಕನ್ನು ತೋರುವುದು ಶಿಕ್ಷಕರ ಕಾರ್ಯವಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇದ್ದು, ಜಿಲ್ಲೆಯ ಯಾವ ಶಾಲೆಯಲ್ಲಿಯೂ ಶೇ.100ರಷ್ಟು ಪ್ರತಿಶತ ಫಲಿತಾಂಶ ಬಂದಿಲ್ಲ. ಅದು ಒಂದೇ ದಿನದಲ್ಲಿ ಸಾಧಿಸುವಂತದಲ್ಲ. ಶಿಕ್ಷಕರ ಅವಿರತ ಶ್ರಮದಿಂದ ಶೈಕ್ಷಣಿಕ ಪ್ರಗತಿ ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪ್ರತಿಶತ ಹಾಜರಾತಿ ಇದ್ದರೆ ಮಾತ್ರ ಅದು ಪ್ರಗತಿಗೆ ಪೂರಕವಾಗುತ್ತದೆ. ಸಂಬಂಧಪಟ್ಟವರು ಪ್ರತಿದಿನ ಈ ಬಗ್ಗೆ ಗಮನಹರಿಸಬೇಕು. ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದು. ಅವರು ತಮ್ಮ ಸಾಮರ್ಥ್ಯ ಉಪಯೋಗಿಸಬೇಕು. ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆ 2019ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕೃಷಿ ಮತ್ತು ಜಲಸಂಪನ್ಮೂಲದ ಪ್ರಗತಿ ಆಧಾರದ ಮೇಲೆ 1ನೇ ಸ್ಥಾನ ಪಡೆದಿರುವುದಕ್ಕಾಗಿ ನೀತಿ ಆಯೋಗದಿಂದ ಜಿಲ್ಲೆಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಹೆಚ್ಚಿನ ಹಣವನ್ನು ಶೈಕ್ಷಣಿಕ ಪ್ರಗತಿಗಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ, ಬೀದರನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿದರು. ಜಿಪಂ ಸದಸ್ಯರಾದ ಶಿವಲಿಂಗಪ್ಪ ಪುಟಗಿ, ತಾಪಂ ಅಧ್ಯಕ್ಷೆ ಭೀಮವ್ವ ಮಲ್ಲೇಶಪ್ಪ ಅಚ್ಚೋಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಅಭಿವೃದ್ಧಿ) ಶೀಬಾ ಜಿಲಿಯನ್‌ ವೈ. ಸೈಲಸ್‌, ಜಿಪಂ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಡಿ.ಎಂ.ಹೊಸಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಚಿತ್ರಶೇಖರ ದೇಗಲಮಡಿ, ನಾಗಪ್ಪ ಪೋತಲ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಾನನ್‌, ನಾಗರತ್ನ ಓಲೆಕಾರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರಡ್ಡಿ ಜೋಳದಡಗಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ 2018-19ನೇ ಸಾಲಿನಲ್ಲಿ ನಲಿ-ಕಲಿಯಲ್ಲಿ ಉತ್ತಮ ಸಾಧನೆ ತೋರಿದ ಶಿಕ್ಷಕರನ್ನು ಮತ್ತು ನಿವೃತ್ತ ಪ್ರೌಢ ಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ‌ ಚಂದ್ರಶೇಖರ ಗೋಗಿ ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಸ್ವಾಗತಿಸಿದರು. ಹೊನಗೇರಾ ಪ್ರೌಢಶಾಲೆ ಶಿಕ್ಷಕ ಮಲ್ಲಿಕಾರ್ಜುನ ಕಾವಲಿ ನಿರೂಪಿಸಿದರು. ಸಿಆರ್‌ಪಿ ಹಫೀಜ್‌ ಪಟೇಲ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next