ಯಾದಗಿರಿ: ವಿವಿಧ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ತಾಕೀತು ಮಾಡಿದರು.
ನಗರದ ಜಿಲ್ಲಾ ಖಜಾನಾಧಿಕಾರಿ ಕಚೇರಿ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಮತಕ್ಷೇತ್ರದ ಸರ್ಕಾರಿ ಇಲಾಖೆ, ಶಾಲಾ ಕಾಲೇಜುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲಾಗುವುದು, ಖಜಾನೆ ಇಲಾಖೆಯಲ್ಲಿ ಶಿಕ್ಷಕರ ವೇತನದ ಚೆಕ್ ಹಾಗೂ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುವ ನೌಕರರ ವೇತನ ಸೇರಿದಂತೆ ಹಲವು ವ್ಯವಹಾರಗಳ ಹಣ ಸಕಾಲಕ್ಕೆ ಪಾವತಿಯಾಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದು ಹೀಗೆ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಆರ್‌ಟಿಒ ಕಚೇರಿಯಲ್ಲಿನ ವಿವಿಧ ಶಾಖೆಗಳಿಗೆ ತೆರಳಿ ಪರಿಶೀಲನೆ ನಡೆಸಿ, ಸಾರಿಗೆ ಇಲಾಖೆಯಲ್ಲಿ ಸಕಾಲಕ್ಕೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ವಾಹನಗಳ ಪರವಾನಗಿಗಳನ್ನು ತ್ವರಿತವಾಗಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ನಗರದಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಅಪ್ರಾಪ್ತರು ಬೈಕ್ ಚಲಾಯಿಸದಂತೆ ಜಾಗೃತಿ ಅಭಿಯಾನ ಕೈಗೊಳ್ಳಬೇಕು. ಮೊದಲೆರಡು ಬಾರಿ ಜನರಲ್ಲಿ ಅರಿವು ಮೂಡಿಸಿ, ಎಚ್ಚರಿಕೆ ಕೊಡುವಂತೆ ಸೂಚಿಸಿದರು. ಅದಕ್ಕೂ ಮಾತು ಕೇಳದಿದ್ದಲ್ಲಿ ತಪ್ಪಿತಸ್ಥರಿಗೆ ದಂಡ ವಿಧಿಸಿ, ಆದರೆ ಇದೆ ನೆಪದಲ್ಲಿ ಮುಗ್ಧ ಜನಕ್ಕೆ ತೊಂದರೆ ಕೊಟ್ಟರೆ ನಾನು ಸಹಿಸುವುದಿಲ್ಲ ಎಂದರು. ಭೀಮನಗೌಡ ಕ್ಯಾತನಾಳ, ಖಂಡಪ್ಪ ದಾಸನ್, ಮಹಾದೇವಪ್ಪ ಯಲಸತ್ತಿ ಇತರರು ಇದ್ದರು.