Advertisement

ದೋಷರಹಿತ ಮತದಾರ ಪಟ್ಟಿ ತಯಾರಿಸಲು ಸೂಚನೆ

03:23 PM Jan 24, 2020 | Naveen |

ಯಾದಗಿರಿ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಬಗ್ಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸರಿಯಾಗಿ ಪರಿಶೀಲಿಸಿ ದೋಷರಹಿತ ಮತದಾರರ ಪಟ್ಟಿ ಸಿದ್ಧತೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ| ಜೆ.ರವಿಶಂಕರ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ ಡಿಸೆಂಬರ್‌ 16ರಿಂದ ಜನವರಿ 15ರ ವರೆಗೆ ಬಂದಿರುವ ಹಕ್ಕು ಮತ್ತು ಆಕ್ಷೇಪಣೆಗಳ ಬಗ್ಗೆ ಮೊದಲು ವಿಧಾನಸಭಾ ಕ್ಷೇತ್ರವಾರು ವೀಕ್ಷಿಸಿದ ಡಾ| ಜೆ. ರವಿಶಂಕರ, ನಂತರ ರ್‍ಯಾಂಡಮ್‌ ಆಗಿ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರಮಿಠಕಲ್‌ ಕ್ಷೇತ್ರಗಳ ಕೆಲ ಮತಗಟ್ಟೆಗಳ ಹಕ್ಕು ಮತ್ತು ಆಕ್ಷೇಪಣೆ ಆಯ್ಕೆ ಮಾಡಿಕೊಂಡು ಪರಿಶೀಲಿಸಿದರು. ಅಲ್ಲದೇ, ನಮೂನೆ 6 (ಸೇರ್ಪಡೆ), 7(ಆಕ್ಷೇಪಣೆ), 8 (ತಿದ್ದುಪಡಿ), 8ಎ (ವರ್ಗಾವಣೆ) ಅರ್ಜಿಗಳನ್ನು ಆಯ್ಕೆ ಮಾಡಿಕೊಂಡು ಕ್ರಮಬದ್ಧವಾಗಿ ವಿಲೆವಾರಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿದರು.

ಮತಗಟ್ಟೆಗಳ ಅರ್ಜಿ ನಮೂನೆಗಳನ್ನು ಆಯ್ದುಕೊಂಡು ಮತದಾರರ ಮನೆಗಳಿಗೆ ಭೇಟಿ
ನೀಡಿ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಇದಲ್ಲದೇ ರಾಜ್ಯ ಮತ್ತು ಭಾರತ ಚುನಾವಣಾ
ಆಯೋಗದ ಅಧಿಕಾರಿಗಳು ಕೂಡ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧತೆಗೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ
ನಿಗದಿಪಡಿಸಿದ ಅವಧಿಯಲ್ಲಿ ಅರ್ಜಿ ನಮೂನೆ 6ರಲ್ಲಿ 8389, ಅರ್ಜಿ ನಮೂನೆ 7ರಲ್ಲಿ 2793,
ಅರ್ಜಿ ನಮೂನೆ 8ರಲ್ಲಿ 1727 ಹಾಗೂ ಅರ್ಜಿ ನಮೂನೆ 8ಎರಲ್ಲಿ 834 ಅರ್ಜಿಗಳು ಬಂದಿವೆ. ಈ ಪೈಕಿ ಬಿಎಲ್‌ಒಗಳ ಮೂಲಕ ಬಂದ ಅರ್ಜಿಗಳು ಸರಿಯಾಗಿ ಪರಿಶೀಲನೆ ಆಗಿವೆ. ಆನ್‌ಲೈನ್‌
ಮೂಲಕ ಬಂದಿರುವ ಅರ್ಜಿಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದು ಹೇಳಿದರು.

ಜ.25ರಂದು 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ
ಆಯೋಜಿಸಲಾಗುತ್ತಿದೆ. ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಯುವ ಮತದಾರರಿಗೆ
ಚುನಾವಣಾ ಗುರುತಿನ ಚೀಟಿ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ಸುರೇಶ ಅಂಕಲಗಿ, ಜಗನ್ನಾಥರೆಡ್ಡಿ,
ನಿಂಗಣ್ಣ ಎಸ್‌. ಬಿರಾದಾರ, ವಿನಯಕುಮಾರ, ಚುನಾವಣೆ ಶಾಖೆ ಶಿರಸ್ತೇದಾರ್‌ ಪರಶುರಾಮ, ಖಲೀಲ್‌ಸಾಬ್‌, ಶಿಲ್ಪಾ ಪಾಟೀ; ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next