ಯಾದಗಿರಿ: ಸರ್ಕಾರಿ ಕಟ್ಟಡಗಳು 50 ವರ್ಷ ಹಳೆಯದಾಗಿದ್ದರೂ ನೆಲಸಮಗೊಳಿಸಲು ಯೋಗ್ಯ ಇರುವುದಿಲ್ಲ. ಛಾವಣಿ ಸಿಮೆಂಟ್ ಕಳಚಿ ಬೀಳುತ್ತಿದ್ದರೆ ಪ್ಲಾಸ್ಟರ್ ಹೋಗಿರಬಹುದು. ರಾಡ್‌ಗಳು ಕಂಡಾಕ್ಷಣ ಇಡೀ ಕಟ್ಟಡ ನೆಲಸಮಗೊಳಿಸುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಕೆಲ ಕಟ್ಟಡಗಳು 100-200 ವರ್ಷಗಳಷ್ಟು ಹಳೆಯದಾಗಿದ್ದರೂ ಇನ್ನೂ ಸದೃಢವಾಗಿವೆ. ಹಾಗಾಗಿ, ಸಂಬಂಧಪಟ್ಟ ಇಲಾಖೆ ಇಂಜಿನಿಯರ್‌ಗಳು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಮಂಡಳಿ ಹಣ ಸದ್ಬಳಕೆಯಾಗುವ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ್ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲು ತಾಂತ್ರಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
2019-20ನೇ ಸಾಲಿನಲ್ಲಿ ಎಚ್ಕೆಆರ್‌ಡಿಬಿಯಿಂದ ಯಾದಗಿರಿ ಜಿಲ್ಲೆಯ 288 ಕಾಮಗಾರಿಗಳ ಕ್ರಿಯಾಯೋಜನೆಗೆ ಕಳೆದ ಜುಲೈ 27ರಂದು ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿಗಳ ಕುರಿತಂತೆ ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳು ತಿಂಗಳಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಒಂದು ವೇಳೆ ಕಾಮಗಾರಿಗಳ ಬದಲಾವಣೆ ಇದ್ದಲ್ಲಿ ಸಕಾರಣದೊಂದಿಗೆ ತಿಂಗಳೊಳಗೆ ವರದಿ ನೀಡಬೇಕು. 30 ಲಕ್ಷ ರೂ. ವರೆಗಿನ ಕಾಮಗಾರಿಗಳನ್ನು 3 ತಿಂಗಳಲ್ಲಿ ಪ್ರಾರಂಭಿಸಬೇಕು. 30 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು 5 ತಿಂಗಳಲ್ಲಿ ಪ್ರಾರಂಭಿಸಬೇಕು. 1 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಪ್ರಾರಂಭಿಸಲು 6 ತಿಂಗಳು ಕಾಲಾವಕಾಶ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
2018-19ನೇ ಸಾಲಿನ ಎಲ್ಲಾ ಬಾಕಿ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಆರಂಭಿಸಬೇಕು. ಅಕ್ಟೋಬರ್ 15ರ ನಂತರ ಯಾವುದೇ ಕಾಮಗಾರಿಗಳು ಆರಂಭಿಸಲು ಬಾಕಿ ಉಳಿಯಬಾರದು. 2016-17ನೇ ಸಾಲಿನ ಕಾಮಗಾರಿಗಳನ್ನು ಅಕ್ಟೋಬರ್ ಅಂತ್ಯದೊಳಗೆ ಮತ್ತು 2017-18ನೇ ಸಾಲಿನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಕಾಮಗಾರಿಗಳನ್ನು ಪಡೆದ ಇಲಾಖೆಗಳೊಂದಿಗೆ ಉಪಯೋಗಿ ಇಲಾಖೆ ಅಧಿಕಾರಿಗಳು ಎಚ್ಕೆಆರ್‌ಡಿಬಿಯಿಂದ ಅನುಮೋದನೆ ಆಗಿರುವ ಕಾಮಗಾರಿಗಳನ್ನು ಸರಿಯಾಗಿ ಅನುಷ್ಠಾನ ಆಗುವ ರೀತಿಯಲ್ಲಿ ಕಾಳಜಿ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಅನುಮೋದನೆ ಆಗುವ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನ ಇಲಾಖಾವಾರು ಮತ್ತು ಉಪಯೋಗಿ ಇಲಾಖಾವಾರು ವರ್ಗೀಕರಿಸಿ, ಆಯಾ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಎಚ್ಕೆಆರ್‌ಡಿಬಿ ಶಾಖೆಗೆ ತಿಳಿಸಿದರು. ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಉಪಯೋಗಿ ಇಲಾಖೆಗಳ ಅಕಾರಿಗಳು ಅನುಷ್ಠಾನ ಇಲಾಖೆಗಳಿಗೆ ಅಗತ್ಯ ಸಹಕಾರ ನೀಡಬೇಕು. ಅಂಗನವಾಡಿ ಕಟ್ಟಡಗಳನ್ನು ಸಂಬಂಧಪಟ್ಟ ಏರಿಯಾಗಳಲ್ಲಿ ನಿರ್ಮಿಸಲು ಉಪಯೋಗಿ ಇಲಾಖೆ ಸೂಕ್ತ ಸ್ಥಳ ಒದಗಿಸದಿದ್ದಲ್ಲಿ ಹತ್ತಿರದ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಎಚ್ಕೆಆರ್‌ಡಿಬಿ ಉಪ ನಿರ್ದೇಶಕಿ ಸುಜಾತಾ ಕಾಳಗಿ, ಸಿಎಫ್‌ಒ ಅಶ್ವಿನಿ, ಶಿವಶಂಕರಪ್ಪ ಗುರಗುಂಟಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.