Advertisement

ವಾಹನ ಮಾಲಿನ್ಯ ಸಾರಿಗೆ ಇಲಾಖೆಗೆ ಗೊತ್ತೇ ಆಗೋದಿಲ್ವಂತೆ!

12:29 PM Sep 14, 2019 | Team Udayavani |

ಯಾದಗಿರಿ: ಪ್ರಸ್ತುತ ಸಾರಿಗೆ ನಿಯಮಾವಳಿಗಳಲ್ಲಿ ವಾಹನದ ಮಾಲಿನ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಲಾಗಿದೆಯೋ? ವಾಹನ ಹೆಚ್ಚಿನ ಹೊಗೆ ಹೊರ ಬಿಡುತ್ತಿದೆಯೋ ಅಥವಾ ರಸ್ತೆಗಿಳಿದ ವಾಹನಕ್ಕೆ ವಿಮೆ ಮಾಡಿಸಲಾಗಿದೆಯೋ ಎನ್ನುವ ಅಂಶದ ಮಾಹಿತಿ ಸಾರಿಗೆ ಇಲಾಖೆ ಬಳಿಯೇ ಇರಲ್ಲ.

Advertisement

ಹೊಸದಾಗಿ ವಾಹನ ಖರೀದಿಸಿ ಬಳಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗುತ್ತದೆ. ಬಳಿಕ ಹೊಸ ವಾಹನಗಳಿಗೆ ಮಾಲಿನ್ಯ ತಪಾಸಣೆಗೆ ಒಂದು ವರ್ಷದವರೆಗೆ ತಪಾಸಣೆ ಮಾಡಿಸುವುದರಿಂದ ವಿನಾಯಿತಿ ಇದೆ ಎನ್ನುತ್ತವೆ, ಸಾರಿಗೆ ಇಲಾಖೆ ಮೂಲಗಳು ಬಳಿಕ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ವಿಪರ್ಯಾಸವೆಂದರೇ ಎಷ್ಟು ವಾಹನಗಳು ಮಾಲಿನ್ಯ ತಪಾಸಣೆ ಮಾಡಿಸಿವೆ, ಎಷ್ಟು ವಾಹನಗಳು ಪರಿಸರಕ್ಕೆ ಹಾನಿಯಾಗುವ ಅಪಾಯಕಾರಿ ಹೊಗೆ ಹೊರ ಹಾಕುತ್ತಿವೆ ಎನ್ನುವ ಮಾಹಿತಿ ಸಾರಿಗೆ ಇಲಾಖೆಗೆ ಗೊತ್ತೇ ಆಗಲ್ವಂತೆ.

ಪ್ರಮುಖವಾಗಿ ವಾಹನಗಳ ತಪಾಸಣೆ ವೇಳೆ ಅಷ್ಟೇ ವಾಹನ ಸವಾರರಿಂದ ದಾಖಲೆಗಳು ಪರಿಶೀಲಿಸುವ ವೇಳೆ ಮಾತ್ರ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸಲಾಗಿದೆಯೇ ಇಲ್ಲವೆ ಎನ್ನುವ ಕುರಿತು ಮಾಹಿತಿ ಬಹಿರಂಗವಾಗಲಿದೆ. ಅದಲ್ಲದೇ ವಾಹನಗಳನ್ನು ಮಾರಾಟ ಮಾಡುವ ವೇಳೆ ಒಬ್ಬರ ಹೆಸರಿಂದ ಇನ್ನೊಬ್ಬರಿಗೆ ವರ್ಗಾಯಿಸುವಾಗ ಕಡ್ಡಾಯವಾಗಿ ದಾಖಲೆ ಗಮನಿಸಲಾಗುತ್ತದೆ.

ಸಾರಿಗೆ ಇಲಾಖೆಯಲ್ಲಿನ ಇಂತಹ ಅವೈಜ್ಞಾನಿಕ ಕಾರಣದಿಂದಾಗಿ ಅದೆಷ್ಟೋ ವಾಹನ ಸವಾರರು ಸಮಯಕ್ಕೆ ಸರಿಯಾಗಿ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸದೇ ವಾಹನಗಳನ್ನು ಚಲಾಯಿಸುತ್ತಿರುವುದು ಹೆಚ್ಚಾಗಿದೆ. ಇದರಿಂದಾಗಿ ಪರಿಸರದ ಮೇಲೆ ಹಾನಿಯಾಗುವುದಲ್ಲದೇ ಗ್ರಾಮೀಣ ಭಾಗದ ಜನರಿಗೆ ಸೂಕ್ತ ತಿಳುವಳಿಕೆಯಿಲ್ಲದೇ ಅಪಘಾತ ಸಂದರ್ಭದಲ್ಲಿ ವಿಮೆ ಇಲ್ಲದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ.

ಅದಲ್ಲದೇ ಸಾರಿಗೆ ತಿದ್ದುಪಡಿ ನಿಯಮದಂತೆ ವಿಮೆಯಿಲ್ಲದೇ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 2 ಸಾವಿರ ರೂಪಾಯಿ ದಂಡ ವಿಸಲಾಗುತ್ತದೆ. ಎರಡನೇ ಬಾರಿಗೆ ತಪ್ಪೆಸಗಿದರೆ ಆಗ 4 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ ಎನ್ನುತ್ತದೆ ನಿಯಮ. ಅಲ್ಲದೇ ಮಾಲಿನ್ಯ ತಪಾಸಣೆ ಮಾಡಿಸಿದ ದಾಖಲೆ ಇಲ್ಲದಿದ್ದರೂ 1 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.

Advertisement

ಮಾಲಿನ್ಯ ತಪಾಸಣೆ ಕೇಂದ್ರ: ಜಿಲ್ಲೆಯಲ್ಲಿ ಒಟ್ಟು 6 ಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಜಿಲ್ಲಾ ಕೇಂದ್ರದಲ್ಲಿ 3 ಹಾಗೂ ಶಹಾಪುರದಲ್ಲಿ 2 ಕೇಂದ್ರಗಳಿದ್ದು, ಅವುಗಳಿಗೆ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಲಾಗಿದೆ. ಈ ಕೇಂದ್ರಗಳ ಮೇಲೆ ಇಲಾಖೆ ನಿಯಂತ್ರಣ ಇರುವುದಿಲ್ಲ. ಇಲ್ಲಿ ವಾಹನದ ಮಾಲಿಕರೇ ನೇರವಾಗಿ ಬಂದು ತಮ್ಮ ವಾಹನದ ದಾಖಲೆ, ವಾಹನ ಸಂಖ್ಯೆ ನಮೂದಿಸಿ ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಮಾಲಿನ್ಯ ತಪಾಸಣೆ ಪಾರದರ್ಶಕವಾಗಿ ಆನ್‌ಲೈನ್‌ ಮೂಲಕ ನಡೆದು ಸಾರಿಗೆ ಇಲಾಖೆಯೇ ವೆಬ್‌ಸೈಟ್ ಮೂಲಕ ವರದಿ ನೀಡುತ್ತದೆ.

ಜಿಲ್ಲೆಯಲ್ಲಿ 2019ರ ಸೆ. 12ರ ಅಂಕಿ ಅಂಶಗಳ ಸಮೇತ ನೋಡುವುದಾದರೆ, ದ್ವಿಚಕ್ರ ವಾಹನ 1,20,841 ನೋಂದಣಿಯಾಗಿವೆ. ತ್ರಿಚಕ್ರ 10,778 ವಾಹನಗಳಿವೆ. ನಾಲ್ಕು ಚಕ್ರ 1,290 ಪ್ರಯಾಣಿಕರ ವಾಹನಗಳಿವೆ. 306 ಶಾಲಾ ಮಕ್ಕಳ ವಾಹನಗಳಿವೆ. 646 ಮ್ಯಾಕ್ಸೀ ಕ್ಯಾಬ್‌ ವಾಹನಗಳಿವೆ. ಸರಕು ಸಾಗಣೆ, ಸಣ್ಣ ಗಾತ್ರದ ವಾಹನಗಳು 987, ಮದ್ಯಮ ಗಾತ್ರದ ವಾಹನಗಳು 2,887, ದೊಡ್ಡ ಗಾತ್ರದ ವಾಹನಗಳು 2,358 ನೋಂದಣಿಯಾಗಿವೆ. ಟ್ಯಾಂಕರ್‌ ಸೇರಿದಂತೆ ಭಾರಿ ಗಾತ್ರದ 1,253 ವಾಹನಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next