ಯಾದಗಿರಿ: ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆ ಅನುಷ್ಠಾನಗೊಳಿಸಿ ಬಡ ಹಾಗೂ ಮಧ್ಯಮ ವರ್ಗದವರು ಸೇರಿದಂತೆ ಸರ್ವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರಕಾರ ನೂರು ದಿನಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ಡಿ.24ರಿಂದ ಮೂರು ದಿನಗಳವರೆಗೆ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನರೆವಿಗೆ ಸರ್ಕಾರ ಕೂಡಲೇ ಧಾವಿಸಿ ಸಹಾಯ ಹಸ್ತ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳುತ್ತ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಯೇ ಸರ್ಕಾರದ ಧ್ಯೇಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಬೇಕು ಎನ್ನುವುದು ಗುರಿಯಾಗಿದೆ. ಈ ಭಾಗದಲ್ಲಿ ಅಪೌಷ್ಟಿಕತೆ ನಿವಾರಣೆ ಮತ್ತು ಶಿಕ್ಷಣ ಫಲಿತಾಂಶ ಉತ್ತಮಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಧಾನಮಂತ್ರಿಯವರು ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದ್ದಾರೆ. ಸಾರ್ವಜನಿಕರು ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಪ್ರವಾಹದಲ್ಲಿ ತೊಂದರೆಗೊಳಗಾದ ಕುಟುಂಬಗಳಿಗೂ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. 104 ಜನರ ಜೀವಹಾನಿಯಾಗಿರುವುದರಿಂದ ತಲಾ 5 ಲಕ್ಷ ರೂ. ಮತ್ತು ಅಸುನೀಗಿದ ಜಾನುವಾರುಗಳಿಗೆ 16ರಿಂದ 30 ಸಾವಿರ ರೂ. ಪರಿಹಾರ ನೀಡಲಾಗಿದೆ. ಸಂಪರ್ಕ ಕಳೆದುಕೊಂಡಿದ್ದ 178 ರಸ್ತೆ, ಸೇತುವೆಗಳ ಪೈಕಿ 142 ರಸ್ತೆ, ಸೇತುವೆ ಸಂಪರ್ಕಗಳ ಪುನರ್ ಸ್ಥಾಪನೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಾಮಗಾರಿ ಕೈಗೊಳ್ಳಲು 1500 ಕೋಟಿ ರೂ. ಬಿಡುಗಡೆ ಮಾಡಿರುವ ಕುರಿತ ಮಾಹಿತಿ ಪ್ರದರ್ಶನದಲ್ಲಿದೆ.
ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರ 22 ಜಿಲ್ಲೆಗಳ 103 ತಾಲೂಕು ಪ್ರವಾಹ ಪೀಡಿತ ಪ್ರದೇಶಗಳು ಎಂದು ಘೋಷಿಸಿ ಕೇಂದ್ರ ಸರ್ಕಾರದಿಂದ 1200 ಕೋಟಿ ರೂ. ಮಧ್ಯಂತರ ಪರಿಹಾರ ಪಡೆದುಕೊಂಡಿದೆ. ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯಗಳಿಗೆ 6.450 ಕೋಟಿ ರೂ. ಮಂಜೂರು ಮಾಡಿರುವುದು ಸೇರಿದಂತೆ ಸರ್ಕಾರದ ಸಾಧನೆ ಚಿತ್ರಗಳು ವಿವರಿಸುತ್ತವೆ ಎಂದು ಹೇಳಿದರು.
ಜಿಪಂ ಸದಸ್ಯ ಭೀಮರೆಡ್ಡಿ ಕಾಡ್ಲೂರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಪರಮರೆಡ್ಡಿ ಕಂದಕೂರ, ವಾರ್ತಾ ಸಹಾಯಕ ಡಿ.ಕೆ. ರಾಜರತ್ನ, ಬೆರಳಚ್ಚುಗಾರ ವಿಶ್ವರಾಧ್ಯ ಎಸ್.ಹಂಗನಳ್ಳಿ, ಸಾರಿಗೆ ಸಂಸ್ಥೆ ಸಿಬ್ಬಂದಿ, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸ್ಪೆಕ್ಟ್ರಂ ಸಂಸ್ಥೆ ಸಿಬ್ಬಂದಿ ಇದ್ದರು.