Advertisement

ಯಾದಗಿರಿ ಮಾರುಕಟ್ಟೆ ಉತ್ತಮ ಸಾಧನೆ

06:48 PM Feb 25, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ತೊಗರಿ ಮತ್ತು ಶೇಂಗಾ ಕಟಾವುಗೊಂಡಿದ್ದು, ಮಾರುಕಟ್ಟೆಗೆ ಶೇಂಗಾ ಭರ್ಜರಿ ಲಗ್ಗೆ ಇಟ್ಟಿದೆ. ಜಿಲ್ಲೆಯಲ್ಲಿ ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ತಂದು ಮಾರಾಟಕ್ಕಿಟ್ಟಿದ್ದು, ಉತ್ತಮ ವಹಿವಾಟು ನಡೆಯುತ್ತಿದೆ.

Advertisement

ಕೃಷಿ ಮಾರುಕಟ್ಟೆಯಲ್ಲಿ ವರ್ತಕರು ರೈತರ ಬೆಳೆ ಖರೀದಿಸುವಲ್ಲಿ ನಿರತರಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ರೈತಾಪಿ ವರ್ಗ ಕೃಷಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದು ಶಹಾಪುರ, ಸುರಪುರಕ್ಕೆ ಹೋಲಿಸಿದರೆ ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಹೆಚ್ಚಿನ ಬೆಳೆ ಆವಕವಾಗುತ್ತಿದೆ.

ಇಲ್ಲಿನ ಮಾರುಕಟ್ಟೆಯ 2020-21ರ ಶುಲ್ಕದ ವಾರ್ಷಿಕ ಗುರಿ 295 ಲಕ್ಷ ರೂ. ನಿಗದಿಯಾಗಿದ್ದು, ಮಾಸಿಕ ಗುರಿ 30 ಲಕ್ಷ ರೂ. ವಿದ್ದು, ಜನವರಿ ತಿಂಗಳಲ್ಲಿ
ಗುರಿಗಿಂತ ಹೆಚ್ಚಿನ 31.84 ಲಕ್ಷ ರೂ. ಸಾಧನೆಯಾಗಿದೆ. ಏಪ್ರಿಲ್‌ 2020ರಿಂದ 2021ರ ಜ.ವರೆಗೆ 281 ಲಕ್ಷ ರೂ. ಗುರಿ ನಿಗದಿಯಾಗಿದ್ದು, ಇದರಲ್ಲಿ 209 ಲಕ್ಷ
ರೂ. ಸಂಗ್ರಹವಾಗಿದ್ದು ಒಟ್ಟಾರೆ ಶೇ.74.43 ಸಾಧನೆಯಾಗಿದೆ.

ಪ್ರಮುಖವಾಗಿ ಶೇಂಗಾ ಮತ್ತು ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಜನವರಿಯಲ್ಲಿ 43,936 ಚೀಲ ಶೇಂಗಾ, 51,010 ಚೀಲ ತೊಗರಿ
ಆವಕವಾಗಿದ್ದು, ಮಾರುಕಟ್ಟೆ ಯಲ್ಲಿ ಅಂದಾಜು 55 ಕೋಟಿಯಷ್ಟು ಬೆಳೆ ಖರೀದಿಯಾಗಿದೆ. ಫೆಬ್ರವರಿಯಲ್ಲಿ 1,74,241 ಚೀಲ ಶೇಂಗಾ, 20,065 ಚೀಲ ತೊಗರಿ
ಆವಕವಾಗಿದ್ದು ಫೆ.19ರ ಈವರೆಗೆ 113 ಕೋಟಿಯಷ್ಟು ಸರಕು ಖರೀದಿ ವ್ಯವಹಾರ ನಡೆದಿದೆ.

ಸರ್ಕಾರ ಇತ್ತೀಚೆಗಷ್ಟೆ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತರು ತಮ್ಮ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶವಿದೆ. ಆದರೆ ಇದು ರೈತರಿಗೆ ಒಂದೆಡೆ ಅನುಕೂಲವಿದ್ದು, ಇನ್ನೊಂದೆಡೆ ಮೋಸ ಹೋಗುವ ಆತಂಕವೂ ಮನೆ ಮಾಡಿದೆ.

Advertisement

ಕಾಯ್ದೆ ತಿದ್ದುಪಡಿಯಿಂದ ಕೃಷಿ ಮಾರುಕಟ್ಟೆ ಅಧಿ ಕಾರಿಗಳ ಪಾಡು ಹಲ್ಲಿಲ್ಲದ ಹಾವಿನಂತಾಗಿದ್ದು, ಮಾರುಕಟ್ಟೆ ಹೊರತುಪಡಿಸಿ ಹೊರಗಿನ ವ್ಯವಹಾರದ ಬಗ್ಗೆ ಪ್ರಶ್ನಿಸಲು, ಕ್ರಮಕೈಗೊಳ್ಳಲು ಯಾವುದೇ ಅಧಿಕಾರವೇ ಇಲ್ಲ ಎನ್ನುತ್ತಾರೆ ಅಧಿ ಕಾರಿಗಳು. ಅದೇನೇ ಇರಲಿ, ಜಿಲ್ಲೆಯ ಹೆಚ್ಚಿನ ರೈತಲು ಕೃಷಿ ಮಾರುಕಟ್ಟೆ ಮೂಲಕವೇ ಭದ್ರತೆಯಿಂದ ವ್ಯವಹರಿಸಲು ಸಾಧ್ಯ ಎನ್ನುವುದನ್ನು ಅರಿತ ರೈತರು, ಕೃಷಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಶುಲ್ಕ ಕಡಿತ ನಿರ್ವಹಣೆಗೆ ಕಂಟಕ?: ಈ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕ 35 ಪೈಸೆಯಿತ್ತು. ಬಳಿಕ 100 ರೂಪಾಯಿಗೆ 1 ರೂಪಾಯಿ ಶುಲ್ಕ ನಿಗದಿಪಡಿಸಿ, ಪುನಃ 2021ರ ಜ.2ರಂದು ಸರ್ಕಾರ ಶುಲ್ಕವನ್ನು ಮಾರ್ಪಾಡು ಮಾಡಿ ಆದೇಶ ಹೊರಡಿಸಿದ್ದು, ಮಾರುಕಟ್ಟೆ ಶುಲ್ಕವನ್ನು 60 ಪೈಸೆಗೆ ನಿಗದಿಪಡಿಸಿದೆ. ಇದರಲ್ಲಿ ಆವರ್ತ ನಿಧಿಗೆ 10 ಪೈಸೆ, ರಾಜ್ಯ ಕೃಷಿ ಮಾರಾಟ ಮಂಡಳಿ ವಂತಿಕೆ 5 ಪೈಸೆ, ಪ್ರಾಂಗಣದಲ್ಲಿ ಮೂಲ ಸೌಕರ್ಯ, ಪ್ರಾಂಗಣ ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ 44 ಪೈಸೆ, ರೆಮ್ಸ್‌ ಸಂಸ್ಥೆಗೆ ವಹಿವಾಟು ಶುಲ್ಕ 01 ಪೈಸೆ ಸೇರಿದೆ.
ಇದು ವರ್ತಕರಿಗೆ ವರವಾಗಿದ್ದು, ಮಾರುಕಟ್ಟೆ ಸಮಿತಿಗಳಿಗೆ ಕಂಟಕವಾಗಲಿದೆ ಎನ್ನುವ ಮಾತು ಕೇಳಿಬಂದಿದೆ.

ಮಾರುಕಟ್ಟೆಗೆ ಸೂಕ್ತ ಮೂಲ ಸೌಕರ್ಯ ನೀಡಿ, ನಿರ್ವಹಣೆ ಮತ್ತು ಹೊರಗುತ್ತಿಗೆ ನೌಕರರ ಸಂಬಳ ನೀಡುವುದು ಕಷ್ಟ ಸಾಧ್ಯವಿದ್ದು, ಮತ್ತೆ ಶುಲ್ಕ ಕಡಿತಗೊಳಿಸಿರುವುದು ಸಮಿತಿಗಳು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆಯಿದೆ. ಸರ್ಕಾರ ಮಾರುಕಟ್ಟೆಗಳ ಮೂಲ ಸೌಕರ್ಯ ಮತ್ತು ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕಿದೆ.

ಇತರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ನಮ್ಮಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳನ್ನು ಮಾರಾಟ ಮಾಡುತ್ತಿದ್ದು, ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ.
ಜನವರಿಯಲ್ಲಿ ಮಾರುಕಟ್ಟೆ ಶುಲ್ಕ ನಿಗದಿಗಿಂತ ಹೆಚ್ಚಿನ ಸಾಧನೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ಮೋಸ ಹೋಗುವ ಮಾತಿಲ್ಲ.
ಸುಮಂಗಳಾದೇವಿ, ಕೃಷಿ ಮಾರುಕಟ್ಟೆ ಸಮಿತಿ
ಕಾರ್ಯದರ್ಶಿ, ಯಾದಗಿರಿ

ಕೃಷಿ ಕಾಯ್ದೆ ತಿದ್ದುಪಡಿಯಿಂದ ವರ್ತಕರಿಗೆ ಯಾವುದೇ ತೊಂದರೆಯಾಗಿಲ್ಲ. ಮಾರುಕಟ್ಟೆಯಲ್ಲಿ ರೈತರಿಗೆ ಎಲ್ಲ ರೀತಿಯಿಂದಲೂ ಸುರಕ್ಷತೆಯಿರುವುದರಿಂದ ರೈತರು ಇಲ್ಲಿಯೇ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಮಾರುಕಟ್ಟೆ ಶುಲ್ಕ 60 ಪೈಸೆ ನಿಗದಿಯಾಗಿದೆ. ರೈತರ ಬಗ್ಗೆ ನಮಗೂ ಕಾಳಜಿಯಿದೇ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಮಾಡಲ್ಲ.
ವಿಶ್ವನಾಥ ಜೋಳದಡಗಿ, ವರ್ತಕರ ಸಂಘದ ಅಧ್ಯಕ್ಷ

*ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next